Advertisement

ಮೂಲರಪಟ್ಣದಲ್ಲಿ ಕೆಟ್ಟು ಹೋದ ನೂತನ ರಸ್ತೆ

08:02 PM May 18, 2019 | Sriram |

ಎಡಪದವು: ಮೂಲರಪಟ್ಣದಲ್ಲಿ ತೂಗುಸೇತುವೆಯವರೆಗೆ ನಿರ್ಮಿಸಿದ ನೂತನ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಕಳೆದ ವರ್ಷದಂತೆ ಈ ಬಾರಿಯೂ ರಸ್ತೆ ಸಂಚಾರ ದುಸ್ತರವಾಗಿದೆ. ಸೇತುವೆ ಕುಸಿದು ಬಿದ್ದ ಸ್ಥಳದ ಸಮೀಪ ಸ್ಥಳೀಯರು ನಿರ್ಮಿಸಿದ್ದ ತಾತ್ಕಾಲಿಕ ಮಣ್ಣಿನ ರಸ್ತೆ ಮಳೆಗಾಲದಲ್ಲಿ ಕೊಚ್ಚಿ ಹೋಗಲಿದ್ದು ಸಂಚಾರಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ.

Advertisement

ಕಳೆದ ವರ್ಷ ಮೂಲರಪಟ್ಣ ಸೇತುವೆ ದಿಢೀರ್‌ ಕುಸಿತ ಗೊಂಡ ಪರಿಣಾಮ ಎಡಪದವು,ಮುತ್ತೂರು, ಕುಪ್ಪೆಪದವು, ನೋಣಲ್‌ ಪ್ರದೇಶಗಳಿಂದ ಬಂಟ್ವಾಳ-ಬಿ.ಸಿ.ರೋಡ್‌ ಸಂಪರ್ಕ ಕಡಿತಗೊಂಡಿತ್ತು. ಪರಿಣಾಮ ಮುತ್ತೂರು ಶಾಲೆಯ ಸಮೀಪದ ತೂಗುಸೇತುವೆಯಿಂದ ಸಂಪರ್ಕ ಕಲ್ಪಿಸಲಾಗಿತ್ತು. ಕಡಿದಾದ ಭೂಮಿಯನ್ನು ಸಮತಟ್ಟುಗೊಳಿಸಿ ಜಲ್ಲಿ ತುಂಬಿಸಿ ನೂತನ ರಸ್ತೆ ನಿರ್ಮಿಸಿದ್ದೇ ಅಲ್ಲದೇ ತೂಗುಸೇತುವೆಯ ಸಮೀಪ ಬಸ್‌ಗೆ ತಂಗುದಾಣ ನಿರ್ಮಿಸಲಾಗಿತ್ತು.ಈ ರಸ್ತೆಯನ್ನು ಮಣ್ಣು,ಜಲ್ಲಿ ತುಂಬಿಸಿ ಸಮತಟ್ಟುಗೊಳಿಸಲಾಗಿತ್ತು.ಆದರೆ ಕಾಲಕ್ರಮೇಣ ಈ ರಸ್ತೆಯ ಕೆಟ್ಟುಹೋಗಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಬೇಸಗೆಯಲ್ಲೇ ವಾಹನ ಸಂಚಾರ ಕಷ್ಟವಾಗಿದ್ದು, ಮಳೆಗಾಲದಲ್ಲಿ ಇದು ಮತ್ತಷ್ಟು ಗಂಭೀರ ಸ್ವರೂಪ ತಾಳುವ ಲಕ್ಷಣಗಳಿವೆ.

ಸೇತುವೆ ಪೂರ್ಣಗೊಳ್ಳಲು 3- 4 ವರ್ಷ
ನೂತನ ಸೇತುವೆ ನಿರ್ಮಾಣವಾಗುವವರೆಗೆ ಇದೇ ರಸ್ತೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಈ ಸೇತುವೆ ಪೂರ್ಣಗೊಳ್ಳಬೇಕಾದರೆ ಕನಿಷ್ಠ 3- 4 ವರ್ಷಗಳು ಬೇಕಾಗ ಬಹುದು. ಆದ್ದರಿಂದ ಅಲ್ಲಿ ತನಕ ಈ ರಸ್ತೆಯನ್ನು ಉಪಯೋಗಿಸ ಬೇಕಾಗಿರುವುದರಿಂದ ಈ ರಸ್ತೆಗೆ ಡಾಂಬರು ಅಥವಾ ಕಾಂಕ್ರೀಟ್‌ ಹಾಕಬೇಕಿತ್ತು. ಆದರೆ ಸೇತುವೆ ಮುರಿದು ಒಂದು ವರ್ಷ ಕಳೆದರೂ ಈ ಕಾರ್ಯ ನಡೆದಿಲ್ಲ.

ವಿದ್ಯಾರ್ಥಿಗಳಿಗೆ ಸಂಕಷ್ಟ
ಮುತ್ತೂರು ಶಾಲೆಗೆ ನೂರಾರು ಮಂದಿ ವಿದ್ಯಾರ್ಥಿಗಳು ಬರುತ್ತಿದ್ದು, ರಸ್ತೆ ಉತ್ತಮವಾಗಿಲ್ಲದೇ ಇರುವುದರಿಂದ ಮಳೆ ಗಾಲದಲ್ಲಿ ಅವರಿಗೂ ಸಂಕಷ್ಟ ಎದುರಾಗಲಿದೆ.ಇನ್ನು ತೂಗುಸೇತುವೆಯ ಇನ್ನೊಂದು ಭಾಗದ ರಸ್ತೆಯನ್ನೂ ಸರಿಪಡಿಸದ ಕಾರಣ ಅಲ್ಲಿಯೂ ಇದೇ ಪರಿಸ್ಥಿತಿ ಉಂಟಾ ಗಲಿದೆ. ಮಳೆಗಾಲದ ಭೀಕರ ಪ್ರವಾಹ ಮತ್ತೆ ಅವ್ಯವಸ್ಥೆಯಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.

ಮಳೆ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಪಲ್ಗುಣಿ ನದಿಯೂ ಭರ್ತಿಗೊಳ್ಳಲಿದೆ. ಇದರ ಜತೆಗೆ ಮಳೆಗಾಲದ ನೀರಿನಿಂದಲೂ ಇಲ್ಲಿನ ರಸ್ತೆ ಮತ್ತಷ್ಟು ಕೆಟ್ಟುಹೋಗಲಿದೆ.ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ.ಅದ್ದರಿಂದ ಈ ಬಾರಿ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಪ್ರಯಾಣಿಕರ ತಂಗುದಾಣ
ಮುತ್ತೂರು ಶಾಲಾ ಸಮೀಪ ಬಸ್‌ ನಿಲ್ಲುವ ಸ್ಥಳದಲ್ಲಿ ಇದುವರೆಗೂ ಪ್ರಯಾಣಿಕರ ತಂಗುದಾಣ ನಿರ್ಮಿಸದ ಕಾರಣ ಇದುವರೆಗೆ ಪ್ರಯಾಣಿಕರು ಬಿಸಿಲಲ್ಲೇ ಬಸ್‌ ಕಾಯಬೇಕಾದ ಸ್ಥಿತಿ ಇದೆ.

ಇನ್ನು ಮಳೆಗಾಲದಲ್ಲಿ ಗಾಳಿ- ಮಳೆಗೆ ಕೊಡೆ ಹಿಡಿದು ಕಾಯ ಬೇಕು.ಆದ್ದರಿಂದ ಇಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು ಎನ್ನುವ ಆಗ್ರಹವೂ ಕೇಳಿಬಂದಿದೆ.

 25 ಲಕ್ಷ ರೂ. ಬಿಡುಗಡೆ
ರಸ್ತೆ ಕಾಂಕ್ರೀಟ್‌ಗೊಳಿಸಲು ಶಾಸಕ ಡಾ|ವೈ.ಭರತ್‌ ಶೆಟ್ಟಿ ಅವರ ಮುತುವರ್ಜಿಯಿಂದ ಅಲ್ಪಸಂಖ್ಯಾಕ ಅಭಿವೃದ್ಧಿ ನಿ ಧಿಯಿಂದ 25 ಲಕ್ಷ ರೂ.ಬಿಡುಗಡೆಗೊಂಡಿದೆ. ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಲಿಲ್ಲ. ಕಾಮಗಾರಿ ಶೀಘ್ರ ಆರಂಭಗೊಳ್ಳಲಿದ್ದು, ಮಳೆಗಾಲದಲ್ಲಿ ರಸ್ತೆಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲಾಗುವುದು.
– ನಾಗೇಶ್‌ ಶೆಟ್ಟಿ ಮುತ್ತೂರು,
ತಾಲೂಕು ಪಂಚಾಯತ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next