ನವದೆಹಲಿ: ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದಿನ ಯುಪಿಎ ಸರ್ಕಾರದಲ್ಲಿ ನಡೆದ ಒಪ್ಪಂದಕ್ಕಿಂತ ಶೇ.2.8ರಷ್ಟು ಕಡಿಮೆ ಮೌಲ್ಯದಲ್ಲಿ ಖರೀದಿಸಿದೆ ಎಂದು ಸಿಎಜಿ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
ಲೋಕಸಭೆಯ ಅಧಿವೇಶನ ಮುಕ್ತಾಯಕ್ಕೂ ಮುನ್ನ ಬುಧವಾರ ಮೋದಿ ಸರ್ಕಾರ ರಾಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿಯನ್ನು ಮಂಡಿಸಿದೆ. ಈ ಮೂಲಕ ರಫೇಲ್ ಡೀಲ್ ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸುತ್ತಲೇ ಬಂದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಸಿಎಜಿ ವರದಿ ಪ್ರಕಾರ, ಯುಪಿಎ ಸರ್ಕಾರದ ಅವಧಿಯಲ್ಲಿ 126 ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಮಾತುಕತೆ ನಡೆಸಿತ್ತು. ಏತನ್ಮಧ್ಯೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ 36 ರಫೇಲ್ ಯುದ್ಧ ವಿಮಾನ ಖರೀದಿಸಲು ಫ್ರಾನ್ಸ್ ಸರ್ಕಾರದ ಜೊತೆ ಹೊಸ ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರತ ಸರಿಸುಮಾರು ಶೇ.17.08ರಷ್ಟು ಕಡಿಮೆಯದ್ದಾಗಿದೆ ಎಂದು ಹೇಳಿದೆ.
ಅಲ್ಲದೇ ಹಿಂದಿನ ಯುಪಿಎ ಸರ್ಕಾರದ ರಕ್ಷಣಾ ಸಚಿವಾಲಯ 2015ರ ಮಾರ್ಚ್ ನಲ್ಲಿ ಫ್ರಾನ್ಸ್ ಸರ್ಕಾರದ ಜೊತೆ ಮಾಡಿಕೊಂಡಿದ್ದ 126 ಯುದ್ಧ ವಿಮಾನ ಖರೀದಿಯ ಒಪ್ಪಂದವನ್ನು ಎನ್ ಡಿಎ ಸರ್ಕಾರ ರದ್ದುಗೊಳಿಸಿರುವುದು ಯಾಕೆ ಎಂಬ ಬಗ್ಗೆ ಸಿಎಜಿ ವರದಿಯಲ್ಲಿ ವಿವರಣೆ ನೀಡಿದೆ. ಡಸಾಲ್ಟ್ ಏವಿಯೇಷನ್ ಸಂಸ್ಥೆ ಕಡಿಮೆ ಬಿಡ್ ಸಲ್ಲಿಸಿದ ಸಂಸ್ಥೆಯಾಗಿರಲಿಲ್ಲ. ಅಲ್ಲದೇ ಯುರೋಪಿಯನ್ ಏರೋನಾಟಿಕ್ ಡಿಫೆನ್ಸ್ ಮತ್ತು ಸ್ಪೇಸ್ ಕಂಪನಿ ಪೂರ್ಣ ಪ್ರಮಾಣದ ಟೆಂಡರ್ ಗೆ ಅರ್ಹವಾಗಿಲ್ಲವಾಗಿತ್ತು ಎಂದು ಹೇಳಿದೆ.