ಚಂಡೀಗಢ: ಪಂಜಾಬ್ ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿರುವ ಚರಣ್ ಜಿತ್ ಸಿಂಗ್ ಚನ್ನಿ ರವಿವಾರ ತನ್ನ ಸಚಿವ ಸಂಪುಟ ರಚನೆ ಮಾಡಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಗೆ ಚರ್ಚೆ ನಡೆಸಿ ಸಚಿವರ ಪಟ್ಟಿಯನ್ನು ಚನ್ನಿ ಈಗಾಗಲೇ ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
ರವಿವಾರ ಚನ್ನಿ ಸಂಪುಟದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸುಮಾರು 15 ಮಂದಿ ಶಾಸಕರಿಗೆ ಸಚಿವಗಿರಿ ಸಿಗಲಿದೆ ಎನ್ನಲಾಗಿದೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಸಂಪುಟದಲ್ಲಿದ್ದ ಹಲವರಿಗೆ ಚರಣ್ ಜಿತ್ ಸಿಂಗ್ ಚನ್ನಿ ಸಂಪುಟದಲ್ಲಿ ಕೊಕ್ ನೀಡುವ ಸಾಧ್ಯತೆಯಿದೆ, ಚನ್ನಿ ಸಂಪುಟಕ್ಕೆ ಏಳು ಮಂದಿ ಹೊಸಬರು ಸೇರಲಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:ತಾಲಿಬಾನ್ ಜತೆ ಭಾರತ ಮಾತುಕತೆ ನಡೆಸಲಿ… ಇದರಿಂದ ತೊಂದರೆ ಇಲ್ಲ: ಫಾರೂಖ್ ಅಬ್ದುಲ್ಲಾ
ರಾಜ್ ಕುಮಾರ್ ವರ್ಕಾ, ಕುಲ್ಜಿತ್ ನಾಗ್ರಾ, ಗುರ್ಕೀರತ್ ಸಿಂಗ್ ಕೊಟ್ಲಿ, ಪರ್ಗತ್ ಸಿಂಗ್, ರಾಜಾ ವಾರಿಂಗ್, ರಾಣಾ ಗುರ್ಜಿತ್ ಮತ್ತು ಸುರ್ಜಿತ್ ಸಿಂಗ್ ಧೀಮಾನ್ ಹೊಸದಾಗಿ ಸಚಿವರಾಗುವ ಸಾಧ್ಯತೆಯಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಂಪುಟದಲ್ಲಿದ್ದ ಬ್ರಹ್ಮ್ ಮಹೀಂದ್ರ, ವಿಜೇಂದ್ರ ಸಿಂ ಗ್ಲಾಮತ್ತು ಭರತ್ ಭೂಷಣ್ ಅಶು ಸಚಿವ ಸ್ಥಾನ ಉಳಿಸಿಕೊಳ್ಳಲಿದ್ದಾರೆ.
ಹೊಸದಿಲ್ಲಿಗೆ ಭೇಟಿ ನೀಡಿದ್ದ ನೂತನ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಜೊತೆಗೆ ಮಾತುಕತೆ ನಡೆಸಿ ನೂತನ ಸಚಿವರ ಪಟ್ಟಿ ಅಂತಿಮಗೊಳಿಸಿದ್ದಾರೆ. ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿಯಾಗಿದ್ದಾರೆ.