Advertisement

ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಹೊಸ ಯೋಜನೆ ಸಿದ್ಧ

09:12 AM Sep 12, 2019 | sudhir |

ಗಂಗೊಳ್ಳಿ: ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಗಂಗೊಳ್ಳಿ ಕೂಡ ಒಂದು. ಆದರೆ ಕರಾವಳಿ ಜಿಲ್ಲೆಗಳ ಪೈಕಿಯೇ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಬಂದರು ಕೂಡ ಹೌದು. ಕೊನೆಗೂ 10 ವರ್ಷಗಳ ಅನಂತರ ಬಂದರಿನ ಪುನರ್‌ ನಿರ್ಮಾಣಕ್ಕೆ ಯೋಜನೆಯೊಂದು ಸಿದ್ಧವಾಗಿದೆ.

Advertisement

ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ 12 ಕೋ.ರೂ. ವೆಚ್ಚದಲ್ಲಿ 405 ಮೀ. ಉದ್ದದ ಹೊಸ ‘ಫೈಲ್’ ಜೆಟ್ಟಿ ನಿರ್ಮಾಣ ಸಹಿತ ಇನ್ನಿತರ ಅಭಿವೃದ್ಧಿ ಕಾಮಗಾರಿ ಕುರಿತಂತೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಇಂಜಿನಿಯರ್‌ಗಳು ನೀಲಿ ನಕಾಶೆಯೊಂದನ್ನು ತಯಾರಿಸಿದ್ದಾರೆ.

ಈ ಬಂದರನ್ನು 10 ವರ್ಷಗಳ ಹಿಂದೆ ಸುಮಾರು 9.5 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಆಗ 8.32 ಕೋ.ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಾಣ ಹಾಗೂ ಒಟ್ಟು 9.5 ಕೋ.ರೂ. ವೆಚ್ಚದಲ್ಲಿ ಇನ್ನಿತರ ಕಾಮಗಾರಿಗಳನ್ನು ಮಾಡಲಾಗಿತ್ತು.

ಯಾಕೆ ಬೇಕು?

ಗಂಗೊಳ್ಳಿ ಬಂದರಿನಲ್ಲಿ 300ಕ್ಕೂ ಅಧಿಕ ಪರ್ಸಿನ್‌ ಬೋಟುಗಳು, 600ಕ್ಕೂ ಮಿಕ್ಕಿ ಮೀನು ಗಾರಿಕಾ ಬೋಟು ಹಾಗೂ 500ಕ್ಕೂ ಅಧಿಕ ನಾಡದೋಣಿಗಳಿದ್ದು, ಸಾವಿರಾರು ಮಂದಿ ಮೀನು ಗಾರಿಕಾ ವೃತ್ತಿಯನ್ನೇ ಅವಲಂಬಿಸಿದ್ದಾರೆ. ಕಳೆದ ವರ್ಷ ಇಲ್ಲಿನ ಬಂದರಿನ ಜೆಟ್ಟಿಯ ಸ್ಲ್ಯಾಬ್‌ ಕುಸಿದಿತ್ತು. ಆ ಕಾರಣಕ್ಕೆ ಇಡೀ ಕಟ್ಟಡವೇ ಕುಸಿಯುವ ಭೀತಿಯಿಂದ ಎರಡನೇ ಹರಾಜು ಪ್ರಾಂಗಣದ ವಠಾರದಲ್ಲಿ ಮೀನುಗಾರಿಕಾ ಚಟುವಟಿಕೆ ಹಾಗೂ ಜನಸಂಚಾರ ನಿರ್ಬಂಧಿಸಲಾಗಿದೆ. ಇದರಿಂದ ಈಗ ಬಂದರಿನಲ್ಲಿ ಬೋಟುಗಳನ್ನು ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ಜೆಟ್ಟಿಯ ವಿಸ್ತರಣೆ ಅಥವಾ ಪುನರ್‌ ನಿರ್ಮಾಣ ಅಗತ್ಯವಾಗಿದೆ.

Advertisement

ಅನುಮೋದನೆ ಸಿಗಬೇಕಿದೆ

ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಇಂಜಿನಿಯರ್‌ಗಳು ಹೊಸ ಯೋಜನೆಯನ್ನು ಸಿದ್ಧಪಡಿಸಿ, ಮೀನುಗಾರಿಕಾ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಲಾಗಿದ್ದು, ಅದಕ್ಕೀಗ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವರಿಂದ ಅನುಮೋದನೆ ಸಿಗಬೇಕಿದೆ. ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಗಂಗೊಳ್ಳಿ ಬಂದರು ಇರುವ ಕುಂದಾಪುರ ತಾಲೂಕಿನವರೇ ಆದ ಕಾರಣ ಇಲ್ಲಿನ ಬಂದರು ಅಭಿವೃದ್ಧಿಗೆ ಒತ್ತು ನೀಡಬಹುದು ಎನ್ನುವುದು ಇಲ್ಲಿನ ಮೀನುಗಾರರ ಆಶಾಭಾವನೆಯಾಗಿದೆ.

ನಿರಂತರ ವರದಿ

ಗಂಗೊಳ್ಳಿ ಬಂದರಿನಲ್ಲಿ ಮೀನುಗಾರರಿಗೆ ಆಗುತ್ತಿರುವ ಸಮಸ್ಯೆ, ಅಲ್ಲಿನ ಅವ್ಯವಸ್ಥೆ ಬಗ್ಗೆ ‘ಉದಯವಾಣಿ ಪತ್ರಿಕೆ’ಯು ನಿರಂತರವಾಗಿ ವಿಶೇಷ ವರದಿಗಳನ್ನು ಪ್ರಕಟಿಸುವ ಮೂಲಕ ಗಮನಸೆಳೆದಿದೆ.

ಫೈಲ್ ಜೆಟ್ಟಿ ನಿರ್ಮಾಣ

ಹಿಂದೆ ನಿರ್ಮಿಸಿದ್ದ ಜೆಟ್ಟಿಯ ಸ್ಲ್ಯಾಬ್‌ ನೀರು ಅಪ್ಪಳಿಸಿ ಅಪ್ಪಳಿಸಿ ಕುಸಿದ ಕಾರಣ, ಮತ್ತೆ ಅಂತಹ ಜೆಟ್ಟಿ ಬೇಡವೆಂದು, ಹೊಸದಾಗಿ ಕಂಬ (ಪಿಲ್ಲರ್‌) ಗಳನ್ನು ನಿರ್ಮಿಸಿ ಅದರ ಮೇಲೆ ‘ಫೈಲ್ ಜೆಟ್ಟಿ’ ನಿರ್ಮಾಣ ಮಾಡಲಾಗುತ್ತದೆ. 3-4 ಮೀ.ಗೊಂದು ಪಿಲ್ಲರ್‌, 400 ಮೀ.ಗೆ ಸುಮಾರು 200 ಪಿಲ್ಲರ್‌ಗಳಿರುತ್ತವೆ. ಇದರಿಂದ ಸಮುದ್ರದ ನೀರು ಬಂದು ಅಡಿಪಾಯಕ್ಕೆ ಬಡಿದು ಕುಸಿಯುವ ಸಮಸ್ಯೆಯೇ ಇರುವುದರಿಂದ ಕಾಂಕ್ರೀಟ್ ಪಿಲ್ಲರ್‌ ಆಗಿರುವುದರಿಂದ ಬಲಶಾಲಿಯಾಗಿರುತ್ತದೆ.
– ಉದಯ ಕುಮಾರ್‌,ಸಹಾಯಕ ಎಂಜಿನಿಯರ್‌, ಮೀನುಗಾರಿಕೆ ಮತ್ತು ಬಂದರು ಇಲಾಖೆ
Advertisement

Udayavani is now on Telegram. Click here to join our channel and stay updated with the latest news.

Next