ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೇಮಕದ ಬೆನ್ನಲ್ಲೇ ಬಹುನಿರೀಕ್ಷಿತ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸಾರಥಿ ನೇಮಕ ಮಾಡುವ ಪ್ರಕ್ರಿಯೆಗೆ ಹೈಕಮಾಂಡ್ ಚಾಲನೆ ನೀಡಿದ್ದು, ಶೀಘ್ರ ಹೊಸಬರ ನೇಮಕ ಬಹುತೇಕ ಖಚಿತವಾಗಿದೆ. ಕೆಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಎಐಸಿಸಿ ನೂತನ ಉಸ್ತುವಾರಿ ವೇಣುಗೋಪಾಲ್ ಹಾಗೂ ನಾಲ್ವರು ಕಾರ್ಯದರ್ಶಿಗಳ ತಂಡ ಮೇ 8ಕ್ಕೆ ನಗರಕ್ಕೆ ಆಗಮಿಸಲಿದ್ದು, ಶಾಸಕರು, ಸಂಸದರು, ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿ ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದೆ. ಅನಂತರ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗಲಿದೆ ಎಂದು ದಿಲ್ಲಿ ಮೂಲಗಳು ತಿಳಿಸಿವೆ. ಅಲ್ಲದೆ ಇನ್ನು 15 ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗಲಿದೆ ಎಂದು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಸುಳಿವು ನೀಡಿದ್ದಾರೆ.
ಯುವ ಮುಖಕ್ಕೆ ಆದ್ಯತೆ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯುವ ಮುಖಕ್ಕೆ ಮಣೆ ಹಾಕಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತೀವ್ರ ಆಸಕ್ತಿ ವಹಿಸಿದ್ದು, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಅಪ್ಪಾಜಿ ನಾಡಗೌಡ ಮೂವರಲ್ಲಿ ಒಬ್ಬರಿಗೆ ಅದೃಷ್ಟ ಖುಲಾಯಿಸಲಿದೆ ಎಂದು ಮೂಲಗಳು ತಿಳಿಸಿವೆ. ಡಾ| ಜಿ. ಪರಮೇಶ್ವರ್ ಮತ್ತೂಂದು ಅವಧಿಗೆ ಮುಂದುವರಿಯಲು ಪ್ರಯತ್ನಿಸುತ್ತಿದ್ದರಾದರೂ ಈಗಾಗಲೇ ಆರೂವರೆ ವರ್ಷ ಪೂರೈಸಿರುವುದರಿಂದ ಹೊಸಬರನ್ನು ನೇಮಿಸುವುದು ಸೂಕ್ತ ಎಂಬುದು ಹೈಕಮಾಂಡ್ ಯೋಚನೆ. ಇನ್ನು, ಕೆ.ಎಚ್. ಮುನಿಯಪ್ಪ ಹಾಗೂ ಎಸ್.ಆರ್. ಪಾಟೀಲ್ ಹೆಸರು ಸಹ ಕೇಳಿ ಬರುತ್ತಿದೆಯಾದರೂ ವಯಸ್ಸಿನ ಕಾರಣಕ್ಕೆ ಅವರಿಗೆ ಅವಕಾಶ ಸಿಗುವುದು ಅನುಮಾನ. ಆದರೂ ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ರಾಜ್ಯಕ್ಕೆ ಭೇಟಿ ನೀಡಿ ವಾಪಸಾದ ಅನಂತರ ಕೊಡುವ ವರದಿ ಮೇಲೆಯೇ ಅಂತಿಮ ನಿರ್ಧಾರವಾಗಲಿದೆ ಎಂದು ಹೇಳಲಾಗಿದೆ.
ಎಐಸಿಸಿ ಉಸ್ತುವಾರಿಯೂ ಯುವಕರು, ನಾಲ್ವರು ಕಾರ್ಯದರ್ಶಿಗಳು ಯುವಕರು. ಹೀಗಾಗಿ, ಕೆಪಿಸಿಸಿಗೂ ಯುವಕರನ್ನೇ ನೇಮಕ ಮಾಡಿ ಉತ್ಸಾಹಿ ತಂಡ ಸಜ್ಜುಗೊಳಿಸಬೇಕು ಎಂಬುದು ರಾಹುಲ್ ಗಾಂಧಿ ಆಲೋಚನೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಉತ್ತರ ಕರ್ನಾಟಕ ಭಾಗದವರಿಗೆ, ಅದರಲ್ಲೂ ಲಿಂಗಾಯಿತ ಸಮುದಾಯಕ್ಕೆ ಕೊಟ್ಟರೆ ಪಕ್ಷಕ್ಕೆ ಅನುಕೂಲವಾಗಬಹುದು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ಅಮೆರಿಕ ಪ್ರವಾಸದಿಂದ ವಾಪಸಾಗಿರುವ ಡಿ.ಕೆ. ಶಿವಕುಮಾರ್ ದಿಲ್ಲಿಯಲ್ಲಿ ನೂತನ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಹಿಂದೆ ಕೇರಳ ಚುನಾವಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ಅವರು ವೇಣುಗೋಪಾಲ್ ಜತೆಗೂಡಿ ಕೆಲಸ ಮಾಡಿದ್ದರು. ಇಬ್ಬರ ನಡುವೆ ಆತ್ಮೀಯತೆ ಇದೆ ಎಂದು ಹೇಳಲಾಗಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಆಯ್ಕೆ ಸೂಕ್ತ. ಶಿವಕುಮಾರ್ ಅವರು ಯುವ ಸಮೂಹ ಹಾಗೂ ಹಿರಿಯ ನಾಯಕರ ಜತೆ ಸಮನ್ವಯತೆಯಿಂದ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಭಾವಿ ಒಕ್ಕಲಿಗ ಸಮುದಾಯದ ನಾಯಕರಾಗಿ ರಾಜ್ಯಾದ್ಯಂತ ವರ್ಚಸ್ಸು ಹೊಂದಿದ್ದಾರೆ. ಅವರ ನೇಮಕ ಪಕ್ಷಕ್ಕೆ ಶಕ್ತಿ ತಂದುಕೊಡಲಿದೆ ಎಂದು ಭೇಟಿ ಸಂದರ್ಭದಲ್ಲಿ ಪ್ರತಿಪಾದಿಸಿದರು.