ಶಿರಸಿ: ಜಿಲ್ಲೆಯ ಪ್ರಸಿದ್ಧ ಎಪಿಎಂಸಿಗಳಲ್ಲಿ ಒಂದಾದ ಶಿರಸಿ ಎಪಿಎಂಸಿಗೆ ಸಂತೋಳ್ಳಿಯ ಪ್ರಶಾಂತ ಗೌಡರ್ ಅವಿರೋಧವಾಗಿ ಆಯ್ಕೆ ಆದರು.
ಬನವಾಸಿಯ ಶಿವಕುಮಾರ ಗೌಡ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಎಪಿಎಂಸಿಯ ಎಲ್ಲ ನಿರ್ದೇಶಕರು ಒಕ್ಕೊರಲಿನಿಂದ ಪ್ರಶಾಂತ ಗೌಡರನ್ನು ಆಯ್ಕೆ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಶಿವಕುಮಾರ ಗೌಡ, ಹಿರಿಯ ಸದಸ್ಯ ಕೆರಿಯಾ ಬೋರಕರ್ ಅವರು ಸೂಚನೆ, ಅನುಮೋದನೆ ಮಾಡಿದರು. 13 ಸದಸ್ಯರಲ್ಲಿ ನಾಮಪತ್ರ ಒಂದೇ ಬಂದಿದ್ದರಿಂದ ಅವರೋಧ ಆಯ್ಕೆಯನ್ನು ಚುನಾವಣಾ ಅಧಿಕಾರಿಗಳು ಘೋಷಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರಶಾಂತ ಗೌಡರ್, ಪ್ರಾಮಾಣಿಕ, ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಪರಿಷತ್ ಚುನಾವಣೆಯ ಕಾರಣದಿಂದ ಬಾಕಿ ಉಳಿದ ಕಾಮಗಾರಿಗಳಿಗೂ ಚಾಲನೆ ನೀಡುತ್ತೇವೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವುದಾಗಿ ಪ್ರಕಟಿಸಿದರು.
ಈ ವೇಳೆ ಉಪಾಧ್ಯಕ್ಷೆ ಸವಿತಾ ಹೆಗಡೆ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಬಿಜೆಪಿಯ ಗ್ರಾಮೀಣ ಘಟಕ ಅಧ್ಯಕ್ಷ ನರಸಿಂಹ ಹೆಗಡೆ ಬಕ್ಕಳ, ಲಕ್ಷ್ಮೀನಾರಾಯಣ ಹೆಗಡೆ ಮತ್ತೀಹಳ್ಳಿ, ಸುನೀಲ ನಾಯ್ಕ, ವಿಶ್ವನಾಥ ಶೀಗೇಹಳ್ಳಿ ಸೇರಿದಂತೆ ಅನೇಕರಿದ್ದರು.
ತಹಸೀಲ್ದಾರ ಶ್ರೀಧರ ಚುನಾವಣಾಧಿಕಾರಿಯಾಗಿದ್ದರು. ಪ್ರಶಾಂತ ಅವರು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಆಪ್ತ ಶಿಷ್ಯ. ಕಳೆದ ಅವಧಿಗೇ ಇವರ ಹೆಸರು ಕೇಳಿಬಂದಿತ್ತು. ಆಗ ಶಿವಕುಮಾರ ಗೌಡ ಹಾಗೂ ಪ್ರಶಾಂತಗೆ 9 ತಿಂಗಳ ಹಂಚಿಕೆ ಮಾಡಲಾಗಿತ್ತು ಎಂಬ ಮಾತುಗಳೂ ಕೇಳಿ ಬಂದಿದ್ದವು.