Advertisement

ಮೊಬೈಲ್ ಟವರ್‌ಗೆ ನೂತನ ನೀತಿ: ಖಾದರ್‌

01:48 AM Jun 05, 2019 | Team Udayavani |

ಮಂಗಳೂರು: ಮೊಬೈಲ್ ಟವರ್‌ ಅಳವಡಿಕೆಗೆ ಸಂಬಂಧಿಸಿ ನೂತನ ನೀತಿಯನ್ನು ರಾಜ್ಯ ಸರಕಾರ ಜಾರಿಗೆ ತರುತ್ತಿದ್ದು, ಈಗಿರುವವುಗಳನ್ನು ನಿಯಮಬದ್ಧಗೊಳಿಸಲು 3 ತಿಂಗಳ ಕಾಲಾವಕಾಶ ಒದಗಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆ-ಕಾಲೇಜು, ಪ್ರಾರ್ಥನಾ ಕೇಂದ್ರ, ಆಸ್ಪತ್ರೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ದೂರದಲ್ಲಿ ಮೊಬೈಲ್ ಟವರ್‌ ಅಳವಡಿಸುವಂತೆ ನೂತನ ನೀತಿಯಲ್ಲಿ ಸೂಚಿಸಲಾಗಿದೆ ಎಂದರು.

ಇನ್ನು ಮುಂದೆ ಟವರ್‌ ಅಳವಡಿಕೆಗೆ ಸ್ಥಳೀಯಾಡಳಿತದಿಂದ ಅನುಮತಿ ಪಡೆದು, ನೋಂದಣಿ ಮಾಡಿಕೊಂಡು ನಿಗದಿತ ದರ ಪಾವತಿಸಬೇಕು. ಕಟ್ಟಡ ಯೋಜನಾ ಪ್ರಾಧಿಕಾರದ ಅನುಮತಿಯೂ ಬೇಕು. ನಿಯಮ ಪ್ರಕಾರ ಇಲ್ಲದಾಗ ಸಾರ್ವಜನಿಕರು ಅಂಥವನ್ನು ಸ್ಥಗಿತಗೊಳಿಸುವ ಅಧಿಕಾರ ಹೊಂದಿರುತ್ತಾರೆ ಎಂದರು.

ನಿಯಮ ಮೀರಿ ಭೂಮಿ ನೀಡಿಲ್ಲ

ಸರಕಾರಿ ಭೂಮಿಯನ್ನು ಕೈಗಾರಿಕೆಗೆ ಕಡಿಮೆ ದರದಲ್ಲಿ ನೀಡಲಾಗಿದೆ ಎಂಬ ಕೋಟ ಶ್ರೀನಿವಾಸ ಪೂಜಾರಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್‌, ಸರಕಾರ ನಿಯಮ ಮೀರಿ ಜಾಗವನ್ನು ಕೈಗಾರಿಕೆಗಳಿಗೆ ನೀಡಿಲ್ಲ. ವಿಪಕ್ಷ ನಾಯಕರೂ ಆಗಿರುವ ಅವರು ಆರೋಪ ಮಾಡುವಾಗ ಮಾಹಿತಿ ಪಡೆದಿರಬೇಕು. ಸುಮಾರು 10 ವರ್ಷಗಳ ಹಿಂದೆ ಬರಡು ಭೂಮಿಯನ್ನು ಕೈಗಾರಿಕೆ ನಿರ್ಮಾಣಕ್ಕೆ ನೀಡಲು ಸರಕಾರ ಮುಂದಾದಾಗ ಹಲವುಕೈಗಾರಿಕೆಗಳು ಅದನ್ನು ತಿರಸ್ಕರಿಸಿದ್ದವು. ಜೆಎಸ್‌ಡಬ್ಲ್ಯು ಸಂಸ್ಥೆ ಅದನ್ನು ಕೋರಿದಾಗ ಲೀಸ್‌ ಕಂ ಸೇಲ್ ಆಧಾರದಲ್ಲಿ ಹೆಕ್ಟೇರ್‌ಗೆ 1,22,195 ರೂ. ದರದಲ್ಲಿ ಒದಗಿಸಲಾಗಿತ್ತು. ಬಳಿಕ 2005ರ ಜ.15ರಂದುಕೈಗಾರಿಕೆಯಿಂದ ಉದ್ಯೋಗ ಸೃಷ್ಟಿ ಮತ್ತುಯುವ ಸಮೂಹಕ್ಕೆ ಪ್ರಯೋಜನ ಎಂಬ ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆದು ಭೂಮಿಯನ್ನು ಎಕರೆಗೆ 90,000 ರೂ.ನಂತೆ ಆ ಸಂಸ್ಥೆಗೆ ನೀಡಲಾಗಿತ್ತು. ಕೆಲವು ರಾಜ್ಯಗಳಲ್ಲಿ ಕೈಗಾರಿಕೆಗಳಿಗೆ ಭೂಮಿಯನ್ನು ಉಚಿತವಾಗಿ ನೀಡಲಾಗುತ್ತದೆ. ಗುಜರಾತ್‌ನಲ್ಲಿ ನ್ಯಾನೋ ಕಂಪೆನಿಗೆ ಹಾಗೆ ನೀಡಿದ ಉದಾಹರಣೆ ಇದೆ ಎಂದರು.

Advertisement

ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಸಂಬಂಧಿಸಿ ಸಾಕಷ್ಟು ಬೇಡಿಕೆ ಇದೆ. ಆದರೆ ಸದ್ಯ 30 ಮಕ್ಕಳಿಗೆ ಮಾತ್ರ ಅವಕಾಶವಿದೆ. ಕೊಠಡಿ ಮತ್ತು ಶಿಕ್ಷಕರ ನೇಮಕಕ್ಕೂ ಆದ್ಯತೆ ನೀಡಬೇಕಾಗಿರುವುದರಿಂದ ಎಲ್ಲ ಶಾಲೆಗಳಲ್ಲಿ ಎರಡು ಮೂರು ಬ್ಯಾಚ್‌ಗಳಲ್ಲಿ ತರಗತಿ ಆರಂಭಿಸಲು ಕಷ್ಟಸಾಧ್ಯ. ಹಾಗಾಗಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಮೂಲ ಸೌಕರ್ಯಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ತಾ.ಪಂ. ಅಧ್ಯಕ್ಷ ಮುಹಮ್ಮದ್‌ ಮೋನು, ಈಶ್ವರ್‌ ಉಳ್ಳಾಲ್, ಸದಾಶಿವ ಉಳ್ಳಾಲ, ಪದ್ಮನಾಭ ನರಿಂಗಾನ ಪತ್ರಿಕಾಗೋಷ್ಠಿಯಲ್ಲಿದ್ದರು.

ವಿಶ್ವನಾಥ್‌ ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಬೇಡ
ಜೆಡಿಎಸ್‌ ಅಧ್ಯಕ್ಷ ಎಚ್. ವಿಶ್ವನಾಥ್‌ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಖಾದರ್‌, ಹಿರಿಯರಾದ ವಿಶ್ವನಾಥ್‌ ಈ ರೀತಿಯ ಹೇಳಿಕೆ ನಿಲ್ಲಿಸಬೇಕು. ಅವರ ಪಕ್ಷದ ಬಗ್ಗೆ ಮಾತನಾಡಲಿ, ಅದು ಬಿಟ್ಟು ನಮ್ಮ ಪಕ್ಷದ ವಿಚಾರ ಮಾತನಾಡುವುದು ಬೇಡ. ಮುಖ್ಯಮಂತ್ರಿಯಾಗಲಿ, ದೇವೇಗೌಡರಾಗಲಿ ಈ ವಿಚಾರ ಮಾತನಾಡಿಲ್ಲ. ಮುಖ್ಯಮಂತ್ರಿಗೆ ಎಲ್ಲರೂ ಸಹಕಾರ ನೀಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಮುಖಂಡರಿದ್ದಾರೆ. ನಾವು ನೋಡಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next