Advertisement

ಜೀವಜಲ ಸಂವರ್ಧನೆಗೆ ಜಲಾಮೃತ

02:07 PM May 28, 2019 | Team Udayavani |
ಹುಬ್ಬಳ್ಳಿ: ಜಲ ಸಾಕ್ಷರತೆ, ಜೀವಜಲ ಸಂರಕ್ಷಣೆ, ಹಸಿರೀಕರಣ ಅಭಿಯಾನಕ್ಕೆ ರಾಜ್ಯ ಸರ್ಕಾರ ‘ಜಲಾಮೃತ’ ಯೋಜನೆಯೊಂದಿಗೆ ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಜಲಮೂಲ ಸಂರಕ್ಷಣೆ-ಸಂವರ್ಧನೆಗೆ ಕ್ರಾಂತಿಕಾರ ಹೆಜ್ಜೆ ಇರಿಸಿದೆ. ಜಲಾಮೃತ ಯೋಜನೆ ಅಡಿಯಲ್ಲಿಯೇ 2019ನ್ನು ಜಲ ವರ್ಷವಾಗಿ ಆಚರಿಸಲು ಅದರ ಮೂಲಕ ವಿವಿಧ ಚಟುವಟಿಕೆಗಳಿಗೆ ಸರ್ಕಾರ ಮುಂದಾಗಿದೆ.

ಕರ್ನಾಟಕ ದೇಶದಲ್ಲೇ ಎರಡನೇ ಅತಿ ಹೆಚ್ಚಿನ ಬರಪೀಡಿತ ರಾಜ್ಯವಾಗಿದೆ. 2011ರಲ್ಲಿ ಸುಮಾರು 157 ತಾಲೂಕುಗಳ ಬರ ಪೀಡಿತವಾಗಿದ್ದರೆ, 2018-19ರಲ್ಲಿ ಸುಮಾರು 160ಕ್ಕೂ ಹೆಚ್ಚು ತಾಲೂಕುಗಳು ಬರದ ಛಾಯೆಗೆ ಸಿಲುಕಿವೆ. ಜನ-ಜಾನುವಾರು ನೀರು, ಮೇವಿಲ್ಲದೆ ಪರದಾಡುವಂತಾಗಿದೆ. ರಾಜ್ಯದಲ್ಲಿ ಇಂದಿಗೂ ಶೇ.30ರಷ್ಟು ಭೂಮಿ ಮಾತ್ರ ನೀರಾವರಿಗೆ ಒಳಪಟ್ಟಿದ್ದರೆ, ಶೇ.70ರಷ್ಟು ಭೂಮಿ ಮಳೆಯಾಶ್ರಿತ ಕೃಷಿ ಅವಲಂಬಿಸಿದೆ. 2011ರಿಂದ 2018ರವರೆಗೆ ರಾಜ್ಯದ ಅನೇಕ ಕಡೆಗಳಲ್ಲಿ ಬರದ ಛಾಯೆ ಮುಂದುವರಿದಿದೆ. ಬರಕ್ಕೆ ಪರಿಹಾರ ರೂಪವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ‘ಜಲಾಮೃತ’ ಯೋಜನೆ ರೂಪಿಸಿದೆ. ಇದರಡಿಯಲ್ಲಿಯೇ 2019ನೇ ವರ್ಷವನ್ನು ಜಲ ವರ್ಷವಾಗಿ ಆಚರಿಸಲಾಗುತ್ತಿದೆ. ಜಲಾಮೃತ ಯೋಜನೆಯಡಿ ಜಲ ಆಯವ್ಯಯ, ಮಳೆ ನೀರು ಕೊಯ್ಲು, ಜಲ ಸಂರಕ್ಷಣೆ ಕುರಿತಾಗಿ ಸೆಟ್ಲೈಟ್ ಇಮೇಜ್‌, ಸ್ಥಳಾಕೃತಿ, ಭೂ ವೈಜ್ಞಾನಿಕ ದತ್ತಾಂಶಗಳ ಸಂಗ್ರಹಣೆ, ಪ್ರತಿ ಗ್ರಾಪಂನಲ್ಲಿ ಜಲ ಆಯವ್ಯಯ ತಯಾರು, ಅನುಷ್ಠಾನದ ಮಹದಾಸೆಯನ್ನು ಇದು ಹೊಂದಿದೆ.

Advertisement

12 ಸಾವಿರ ಚೆಕ್‌ ಡ್ಯಾಂ: ಜಲ ಸಾಕ್ಷರತೆ, ಜಲಮೂಲಗಳ ನವೀಕರಣ, ಹೊಸ ಜಲಮೂಲಗಳ ಸೃಷ್ಟಿ ಹಾಗೂ ಜಲಾನಯನ ಪ್ರದೇಶ ಅಭಿವೃದ್ಧಿ ಹಾಗೂ ಹಸಿರೀಕರಣ ಪ್ರಮುಖ ನಾಲ್ಕು ಅಂಶಗಳನ್ನು ಯೋಜನೆ ಹೊಂದಿದೆ. ವಿಶ್ವವಿದ್ಯಾಲಯ, ಶಿಕ್ಷಣ ಇಲಾಖೆ, ನೀರು ಮತ್ತು ಮಣ್ಣು ನಿರ್ವಹಣೆ ಸಂಸ್ಥೆ (ವಾಲ್ಮಿ), ಸರ್ಕಾರೇತರ ಸಂಸ್ಥೆಗಳ, ಸರ್ಕಾರಿ ಇಲಾಖೆಗಳ ಮೂಲಕ ಗ್ರಾಮ, ತಾಲೂಕು ಹಾಗೂ ಜಿಪಂ ಸದಸ್ಯರಿಗೆ, ವಿದ್ಯಾರ್ಥಿಗಳಿಗೆ ಜಲ ಸಾಕ್ಷರತೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳುವುದಾಗಿದೆ. ನರೇಗಾ, ಕಾರ್ಪೊರೇಟ್ ವಲಯದ ದೇಣಿಗೆ, ಸಮುದಾಯ ದೇಣಿಗೆ, ಸರ್ಕಾರದ ವಂತಿಗೆ ಇನ್ನಿತರ ಮೂಲಗಳ ಮೂಲಕ ಜಲಮೂಲಗಳ ನವೀಕರಣ ಕಾರ್ಯ ಕೈಗೊಳ್ಳಲಾಗುತ್ತದೆ.

ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್‌ ಅಪ್ಲಿಕೇಶನ್ಸ್‌ ಸೆಂಟರ್‌(ಕೆಎಸ್‌ಆರ್‌ಎಸಿ) ಮತ್ತು ಇತರೆ ವೈಜ್ಞಾನಿಕ ರೀತಿಯಲ್ಲಿ ಹೊಸ ಜಲಮೂಲಗಳ ನಿರ್ಮಾಣ ಹಾಗೂ ಜಲಾನಯನ ಪ್ರದೇಶ ಅಭಿವೃದ್ಧಿ ಕುರಿತು ಪರಿಶೀಲಿಸಿ ಎಲ್ಲಿ ಸಾಧ್ಯವೋ ಅಲ್ಲಿ ಚೆಕ್‌ಡ್ಯಾಂಗಳು, ವೆಂಟೆಂಡ್‌ ಡ್ಯಾಂಗಳು, ಸಣ್ಣ ಜಲಾಶಯಗಳು ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ. ನರೇಗಾ ಅಡಿಯಲ್ಲಿ ಜಲ ಮೂಲಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. 2019-20 ಮತ್ತು 2020-21ರ ವೇಳೆಗೆ ರಾಜ್ಯದಲ್ಲಿ ಒಟ್ಟು 12,000 ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಯೋಜಿಸಲಾಗಿದೆ.

ಜಲ ಮೂಲಗಳ ಸಂರಕ್ಷಣೆ ಹಾಗೂ ಸಂವರ್ಧನೆಗೆ ಹಸಿರೀಕರಣ ಅವಶ್ಯವಾಗಿದೆ. ಅರಣ್ಯ, ವನ್ಯಜೀವಿ ಮತ್ತು ಪರಿಸರ ಇಲಾಖೆ ಈಗಾಗಲೇ ಅರಣ್ಯೀಕರಣ ಚಟುವಟಿಕೆ ಕೈಗೊಳ್ಳುತ್ತಿದ್ದು, ನರೇಗಾ ಅಡಿಯಲ್ಲಿಯೂ ಅರಣ್ಯೀಕರಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ವಿವಿಧ ಇಲಾಖೆ, ಎನ್‌ಜಿಒ, ಕಾರ್ಪೊರೇಟ್ ಸಹಕಾರದೊಂದಿಗೆ ಒಂದು ಜಿಲ್ಲೆಯಲ್ಲಿ ಕನಿಷ್ಟ 1 ಕೋಟಿ ಸಸಿ ನೆಡುವ ಅಭಿಯಾನ ಕೈಗೊಳ್ಳಲು ಯೋಜಿಸಲಾಗಿದೆ.

ಜಲ ವರ್ಷ: 2019ನ್ನು ಜಲ ವರ್ಷವಾಗಿ ಆಚರಿಸಲಾಗುತ್ತಿದ್ದು, ಇದರ ಅಡಿಯಲ್ಲಿ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ಎಲ್ಲ ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳು, ಎನ್‌ಜಿಒ, ಸ್ವಯಂ ಸೇವಾ ಸಂಘಟನೆಗಳು, ಸ್ವಾಯತ್ತ ಸಂಸ್ಥೆಗಳು, ಖಾಸಗಿ ವಲಯದಿಂದ ವಿವಿಧ ಚಟುವಟಿಕೆ ಆಯೋಜಿಸಲಾಗುತ್ತಿದೆ. ಸರ್ಕಾರದ ಎಲ್ಲ ಇಲಾಖೆಗಳು ಜಲವರ್ಷ ಆಚರಣೆ ಹಾಗೂ ಚಟುವಟಿಕೆಗೆ ತಮ್ಮ ಇಲಾಖೆಯಡಿ ಅಗತ್ಯ ಬಜೆಟ್ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

Advertisement

•ಅಮರೇಗೌಡ ಗೋನವಾರ

 

Advertisement

Udayavani is now on Telegram. Click here to join our channel and stay updated with the latest news.

Next