Advertisement

ಹೊಸ ಸಂಸತ್‌ ಭವನದಲ್ಲಿ ಅಕ್ಕಮಹಾದೇವಿ ವರ್ಣಚಿತ್ರ!

09:28 PM May 29, 2022 | Team Udayavani |

ನವದೆಹಲಿ: ಸೆಂಟ್ರಲ್‌ ವಿಸ್ತಾ ಯೋಜನೆಯಡಿ ದೆಹಲಿಯಲ್ಲಿ ತಲೆಎತ್ತಲಿರುವ ದೇಶದ ನೂತನ ಸಂಸತ್‌ ಭವನದ ಗೋಡೆಯನ್ನು ಕನ್ನಡದ ಮೊದಲ ಕವಯಿತ್ರಿ, ಶಿವಶರಣೆ ಅಕ್ಕಮಹಾದೇವಿಯ ವರ್ಣಚಿತ್ರವು ಅಲಂಕರಿಸಲಿದೆ.

Advertisement

ಅಕ್ಕಮಹಾದೇವಿಯವರು ಮಾತ್ರವಲ್ಲದೇ ಭಾರತದ ಇತಿಹಾಸ ಹಾಗೂ ಪುರಾಣಗಳಲ್ಲಿ ಸ್ಥಾನ ಪಡೆದಿರುವಂಥ ದ್ರೌಪದಿ, ಸೀತೆ, ರಜಿಯಾ ಸುಲ್ತಾನಾ, ಅಹಿಲ್ಯಾ ಹೋಳ್ಕರ್‌ ಮತ್ತು ಇತರೆ ಮಹಿಳಾಮಣಿಗಳ ವರ್ಣಚಿತ್ರಗಳನ್ನೂ ಸಂಸತ್‌ ಭವನದ ಗೋಡೆಗಳಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.

75 ಮಹಿಳೆಯರಿಗೆ ಗೌರವ:
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ವೇದಕಾಲದಿಂದ 1947ರವರೆಗಿನ 75 ಮಹಿಳೆಯರ ಚಿತ್ರಗಳನ್ನು ಸಂಸತ್‌ ಭವನದಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ. ಅವರ ವರ್ಣಚಿತ್ರಗಳು ಮಾತ್ರವಲ್ಲದೇ, ಅವರ ಕುರಿತಾದ ಮಾಹಿತಿ, ದೇಶದ ಇತಿಹಾಸದಲ್ಲಿ ಅವರ ಪಾತ್ರದ ಕುರಿತ ಸಂಕ್ಷಿಪ್ತ ವಿವರಣೆಯೂ ಇಲ್ಲಿರಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್‌ ವೇಳೆಗೆ ಸಂಸತ್‌ ಭವನದ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದ್ದು, ಸೆಂಟ್ರಲ್‌ ಅವೆನ್ಯೂ ನವೀಕರಣ ಕಾರ್ಯ ಜೂನ್‌ ಅಂತ್ಯದಲ್ಲಿ ಮುಗಿಯಲಿದೆ. ಸೆಂಟ್ರಲ್‌ ವಿಸ್ತಾ ಯೋಜನೆಯ ಭಾಗವಾಗಿ, ಸರ್ಕಾರವು ಹೊಸ ಸಂಸತ್‌ ಭವನ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗಾಗಿ ಹೊಸ ನಿವಾಸ, 51 ಸಚಿವಾಲಯಗಳುಳ್ಳ ಸೆಂಟ್ರಲ್‌ ಸೆಕ್ರೆಟರಿಯೇಟ್‌ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ಯಾರ್ಯಾರ ಚಿತ್ರಗಳು ರಾರಾಜಿಸಲಿವೆ?
12ನೇ ಶತಮಾನದ ಕನ್ನಡ ಕವಯಿತ್ರಿ ಅಕ್ಕಮಹಾದೇವಿ, 18ನೇ ಶತಮಾನದ ಮರಾಠರ ರಾಣಿ ಅಹಿಲ್ಯಾ ಹೋಳ್ಕರ್‌, ಮಹಾಭಾರತದ ಪಂಚಪಾಂಡವರ ಪತ್ನಿಯಾದ ದ್ರೌಪದಿ, ಶ್ರೀರಾಮನ ಮಡದಿ ಸೀತೆ, ವೇದಕಾಲದ ಇತರೆ ಕವಯಿತ್ರಿಗಳಾದ ಅದಿತಿ, ಅಪ್ಪಳ ಮತ್ತು ಗಾರ್ಗಿ, ಕಾಶ್ಮೀರದ ಮಧ್ಯಕಾಲೀನ ಶೈವ ಕವಯಿತ್ರಿ ಲಲ್ಲೇಶ್ವರಿ, 16ನೇ ಶತಮಾನದ ಹಿಂದಿ ಕವಯಿತ್ರಿ ಹಾಗೂ ಕೃಷ್ಣನ ಭಕ್ತೆ ಮೀರಾಬಾಯಿ, 13ನೇ ಶತಮಾನದಲ್ಲಿ ದೆಹಲಿಯನ್ನು ಆಳಿದ ರಜಿಯಾ ಸುಲ್ತಾನಾ ಅವರ ವರ್ಣಚಿತ್ರಗಳು ಸಂಸತ್‌ ಭವನದ ಗೋಡೆಗಳಲ್ಲಿ ರಾರಾಜಿಸುವ ಸಾಧ್ಯತೆಯಿದೆ ಎಂದೂ ಮೂಲಗಳು ಹೇಳಿವೆ.

Advertisement

ಇದೇ ವೇಳೆ, ಮುಸ್ಲಿಮರ ಬುರ್ಖಾ ಪದ್ಧತಿಯ ವಿರುದ್ಧ ಹೋರಾಡಿದ್ದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಸುಗ್ರಾ ಮಿರ್ಜಾ ಅವರ ಚಿತ್ರವನ್ನೂ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next