Advertisement

ನೂತನ ಆಮ್ಲಜನಕ ಘಟಕ ನಿರ್ಮಾಣಕ್ಕೆ ಕೈಗಾರಿಕಾ ಇಲಾಖೆಯಿಂದ ವಿಶೇಷ ರಿಯಾಯಿತಿ: ಶೆಟ್ಟರ್‌

04:14 PM Jun 02, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ನೂತನ ಆಮ್ಲಜನಕ ಘಟಕ ನಿರ್ಮಾಣ ಪ್ರಾರಂಭಿಸಲು ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯಿಂದ ವಿಶೇಷ ರಿಯಾಯಿತಿ ಪ್ರಸ್ತಾವನೆಯನ್ನು ರಚಿಸಲಾಗಿದ್ದು ಆರ್ಥಿಕ ಇಲಾಖೆಯ ಪರಾಮರ್ಶೆಗೆ ಕಳುಹಿಸಲಾಗಿದೆ. ಆರ್ಥಿಕ ಇಲಾಖೆಯ ಅನುಮತಿಯ ನಂತರ ಇನ್ನು ಕೆಲವೇ ದಿನಗಳಲ್ಲಿ ಘೋಷಣೆ ಮಾಡುವುದಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ರಾಜ್ಯ ಆಮ್ಲಜನಕ ಸರಬರಾಜು ಮತ್ತು ಉತ್ಪಾದನೆ ಉಸ್ತುವಾರಿ ಶ್ರೀ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

Advertisement

ಬೆಂಗಳೂರಿನ ವಿಧಾನಸೌಧದಲ್ಲಿಂದು ರಾಜ್ಯ ಆಮ್ಲಜನಕ ಉತ್ಪಾದನೆ ಮತ್ತು ಸರಬರಾಜು ಸಂಬಂಧವಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ನಂತರ ಮಾತನಾಡಿದರು. ರಾಜ್ಯದಲ್ಲಿ ಆಮ್ಲಜನಕದ ಪರಿಸ್ಥಿತಿ ಸುಧಾರಿಸುತ್ತಿದೆ. ಕೇಂದ್ರ ಸರಕಾರದ ಸಹಕಾರದಿಂದ ಹಾಗೂ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆ ಆಗುತ್ತಿರುವ ನಿಟ್ಟಿನಲ್ಲಿ ಆಮ್ಲಜನಕದ ಬೇಡಿಕೆ ನಿಧಾನವಾಗಿ ತಗ್ಗುತ್ತಿದೆ. ತಜ್ಞರ ಅಂದಾಜಿನಂತೆ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ರಾಜ್ಯ ವನ್ನು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬಿ ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹೊಸದಾಗಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಶೇಷ ರಿಯಾಯಿತಿಯ ಪ್ರಸ್ತಾವನೆಯನ್ನು ಕೈಗಾರಿಕಾ ಇಲಾಖೆಯ ವತಿಯಿಂದ ರಚಿಸಲಾಗಿದ್ದು ಆರ್ಥಿಕ ಇಲಾಖೆಯ ಪರಾಮರ್ಶೆಗೆ ಕಳುಹಿಸಿಕೊಡಲಾಗಿದೆ. ಅಲ್ಲದೆ, ಈ ಬಗ್ಗೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚೆಯನ್ನು ನಡೆಸಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ವಿಶೇಷ ವಿಶೇಷ ಸೌಲಭ್ಯದ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಲಾಕ್ ಡೌನ್ ವಿಸ್ತರಣೆ ಮಾಡುತ್ತೇವೆ, ಕೆಲವೊಂದು ನಿರ್ಬಂಧಗಳ ಸಡಿಲಿಕೆ ಮಾಡುತ್ತೇವೆ: ಬಿ ಎಸ್ ವೈ

ಜಿಂದಾಲ್‌ ಗೆ ನೋಟೀಸ್‌:

Advertisement

ರಾಜ್ಯಕ್ಕೆ ನೀಡಬೇಕಾಗಿದ್ದ ದ್ರವೀಕೃತ ಆಮ್ಲಜನಕವನ್ನು ಜಿಂದಾಲ್‌ ನಿನ್ನೆ ನೀಡಿರಲಿಲ್ಲ. ಇದರಿಂದ ರಾಜ್ಯದಿಂದ ಲಭ್ಯವಾಗಬೇಕಾಗಿದ್ದ 830 ಎಂ.ಟಿ ಗಳಲ್ಲಿ ನಮಗೆ ದೊರಕಿದ್ದು ಕೇವಲ 386 ಎಂ.ಟಿಗಳಷ್ಟು ಮಾತ್ರ.   ಕೆಲವು ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟು ಈ ಸಂಕಷ್ಟದ ಸಮಯದಲ್ಲಿ ಆಮ್ಲಜನಕ ನೀಡದೇ ಇರುವುದರ ಬಗ್ಗೆ ನಿನ್ನೆ ಜಿಂದಾಲ್‌ ಗೆ ನೋಟೀಸ್‌ ನೀಡಲಾಗಿದ್ದು, ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ಇನ್ನು ಮುಂದೆ ಇಂತಹ ಘಟನೆಗಳು ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ರಾಜ್ಯದಲ್ಲಿನ ಆಮ್ಲಜನಕ ಘಟಕಗಳ ಸ್ಥಾಪನೆಯ ಕಾರ್ಯವನ್ನು ಚುರುಕುಗೊಳಿಸಿ:

ಕೇಂದ್ರ, ರಾಜ್ಯ ಮತ್ತು ಹಲವಾರು ಸಾರ್ವಜನಿಕ ಸಂಸ್ಥೆಗಳು ಘಟಕ ಸ್ಥಾಪನೆಗೆ ಮುಂದಾಗಿವೆ. ಆದರೆ, ಅದರ ಸ್ಥಾಪನೆ ಕಾರ್ಯಗಳನ್ನು ಚುರುಕುಗೊಳಿಸುವುದರತ್ತ ಹೆಚ್ಚಿನ ಗಮನ ಬೇಕಾಗಿದೆ. ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸರಕಾರಿ ಆಸ್ಪತ್ರೆಗಳನ್ನು ಸ್ವಾವಲಂಬಿಗೊಳಿಸಿ:

ಸರಕಾರಿ ಆಸ್ಪತ್ರೆಗಳನ್ನು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬಿಗೊಳಿಸಬೇಕಾಗಿದೆ. ಹೊರಗಿನಿಂದ ಬರುವ ಆಮ್ಲಜನಕವನ್ನು ನಂಬಿಕೊಳ್ಳುವುದರ ಜೊತೆಯಲ್ಲಿಯೇ ಅವುಗಳು ಸ್ವತಃ ಆಮ್ಲಜನಕ ಉತ್ಪಾದನೆ ಮಾಡಿದಲ್ಲಿ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ: ನಡುರಸ್ತೆಯಲ್ಲಿ ವಾಹನ ತಡೆದು ಚಾಲಕನನ್ನು ಬೆದರಿಸಿ 30 ಸಾವಿರ ಲೂಟಿ, ಪರಾರಿಯಾದ ಅಪರಿಚಿತರು

ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ ಕುಮಾರ್ ಖತ್ರಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಆರೋಗ್ಯ ಇಲಾಖೆ ಜಾವೇದ್‌ ಆಖ್ತರ್‌, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ಆಕ್ಸಿಜನ್ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಹಿರಿಯ ಐಎಎಸ್‌ ಅಧಿಕಾರಿ ಮೌನಿಶ್‌ ಮೌದ್ಗಿಲ್‌, ಆಕ್ಸಿಜನ್ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ, ಕೆಐಎಡಿಬಿ ಸಿಇಓ ಡಾ ಶಿವಶಂಕರ್, ಡ್ರಗ್ಸ್ ಕಂಟ್ರೋಲರ್ ಅಮರೇಶ್ ತುಬಗಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next