Advertisement

New Office Bearers: ಜೆಡಿಎಸ್‌ಗೆ ಹೊಸ ರಾಜ್ಯಾಧ್ಯಕ್ಷ ಜತೆಗೆ ಮೂರು ಕಾರ್ಯಾಧ್ಯಕ್ಷ?

12:51 AM Jan 01, 2025 | Team Udayavani |

ಬೆಂಗಳೂರು: ಸಂಕ್ರಾಂತಿಯ ಅನಂತರ ಜೆಡಿಎಸ್‌ನಲ್ಲಿ ಸಂಕ್ರಮಣ ಸಂಭವಿಸುವ ಸಾಧ್ಯತೆಗಳಿದ್ದು, ಹೊಸ ರಾಜ್ಯಾಧ್ಯಕ್ಷರು, ಮೂವರು ಕಾರ್ಯಾಧ್ಯಕ್ಷರ ಆಯ್ಕೆ ಮೂಲಕ ಸಂಘಟನೆಗೆ ಬಲ ತುಂಬಲು ತೆನೆ ಹೊತ್ತ ಮಹಿಳೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಅಲ್ಲದೆ ರಾಜ್ಯಾಧ್ಯಕ್ಷ ಹುದ್ದೆಗೆ ನಿಖಿಲ್‌ ಕುಮಾರಸ್ವಾಮಿ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ನಿಖಿಲ್‌ ಭಡ್ತಿಯಿಂದ ತೆರವಾಗುವ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶರಣುಗೌಡ ಕಂದಕೂರು ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Advertisement

ಈಗಾಗಲೇ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಿರುವ ಜಾತ್ಯತೀತ ಜನತಾ ದಳವು ಉಪಚುನಾವಣೆ ಹಿನ್ನೆಲೆಯಲ್ಲಿ ಅಲ್ಪ ವಿರಾಮ ನೀಡಿತ್ತು. 2025ರ ಜನವರಿ 2ನೇ ವಾರದಲ್ಲಿ ಮತ್ತೊಂದು ಸುತ್ತಿನ ಸಭೆ ಸೇರಿ ಸಾಂಸ್ಥಿಕ ಚುನಾವಣೆ ಹಾಗೂ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಸಲು ಚಿಂತನೆಗಳು ನಡೆದಿವೆ.

ರಾಜ್ಯಾಧ್ಯಕ್ಷರಾಗಿ ನಿಖಿಲ್‌ಗೆ ಭಡ್ತಿ
ಪ್ರಸ್ತುತ ಜೆಡಿಎಸ್‌ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್‌ ಕುಮಾರಸ್ವಾಮಿ ಅವರನ್ನು ಪ್ರತೀ ಚುನಾವಣೆಯಲ್ಲೂ ಪ್ರಯೋಗಕ್ಕೆ ಒಡ್ಡುತ್ತಾ ಬಂದಿದ್ದ ಜೆಡಿಎಸ್‌, ಸಂಘಟನೆಯ ಬೇರು ಗಟ್ಟಿಗೊಳಿಸಲು ನಿಖಿಲ್‌ ಹೆಗಲ ಮೇಲೆ ಪ್ರವಾಸದ ಹೊಣೆಗಾರಿಕೆಯನ್ನೂ ಹೊರಿಸಿತ್ತು. ಸಾರ್ವತ್ರಿಕ ಚುನಾವಣೆ, ಉಪಚುನಾವಣೆಗಳಲ್ಲಿ ಸರಣಿ ಸೋಲುಂಡರೂ ಸಂಘಟನಾತ್ಮಕವಾಗಿ ನಿಖಿಲ್‌ ಫ‌ಲಪ್ರದರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಮತ್ತೊಂದು ಜವಾಬ್ದಾರಿ ಹೊರಿಸಲು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಸಿದ್ಧರಾಗಿದ್ದಾರೆ. ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್‌ರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಅಣಿಯಾಗಿದ್ದಾರೆ.

ಹೆಚ್ಚುವರಿ ಕಾರ್ಯಾಧ್ಯಕ್ಷರ ಸೃಷ್ಟಿ
ನಿಖಿಲ್‌ರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವುದರಿಂದ ಒಕ್ಕಲಿಗರ ಮಣೆ ಹಾಕಿದ ಆರೋಪಕ್ಕಿಂತ ಹೆಚ್ಚಾಗಿ ಕುಟುಂಬದವರಿಗೇ ಮನ್ನಣೆ ನೀಡಿದ ಆರೋಪ ಸಹಜವಾಗಿ ಬರಲಿದೆ. ಈ ಆರೋಪಗಳಿಂದ ದೂರಾಗಲು ಬಯಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಹುದ್ದೆಗೆ ಬೆಂಬಲವಾಗಿ 3 ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿಸಲು ಚಿಂತನೆಗಳು ನಡೆದಿವೆ. ಮುಂದಿನ ದಿನಗಳಲ್ಲಿ 3 ಹುದ್ದೆಗಳನ್ನು ಸೃಷ್ಟಿಸಿ, ಎಸ್‌ಸಿ ಅಥವಾ ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾಕರಿಗೆ ಸ್ಥಾನ ನೀಡುವ ಮೂಲಕ ಜಾತಿ ಸಮೀಕರಣದ ಲೆಕ್ಕಾಚಾರವನ್ನು ಸರಿದೂಗಿಸುವ ಪ್ರಯತ್ನಕ್ಕೆ ದಳ ಕೈಹಾಕಲಿದೆ.

Advertisement

Udayavani is now on Telegram. Click here to join our channel and stay updated with the latest news.

Next