Advertisement

ಸದಾಶಯದ ನಲ್ನುಡಿ ಹೊಸತಿಗೆ ಮುನ್ನುಡಿ

01:03 AM Jan 01, 2022 | Team Udayavani |

ಸಮಾಜ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ದಾರಿ ತೋರುವ ಗುರುತರ ಹೊಣೆಗಾರಿಕೆ ನಮ್ಮ ಸಾಧು ಸಂತರು, ಸ್ವಾಮೀಜಿಗಳು, ಧರ್ಮಗುರುಗಳದು. ಯಾವುದು ವಿಹಿತ- ಯಾವುದು ಅಹಿತ ಎಂಬುದನ್ನು ಪಾಂಡಿತ್ಯ, ಶಾಸ್ತ್ರಾಧಾರಗಳು, ಅನುಭವದ ಬೆಳಕಿನಲ್ಲಿ ವಿಮರ್ಶಿಸಿ ದಿಗ್ದರ್ಶನ ನೀಡುವ ಪಥದರ್ಶಕರು ಅವರು. ಹೋಗಬೇಕಾದ ದಿಕ್ಕು ಯಾವುದು, ಕ್ರಮಿಸಬೇಕಾದ ದಾರಿ ಯಾವುದು ಎಂಬುದು ಸ್ಪಷ್ಟವಾದರೆ ಯಾತ್ರಿಕರಿಗೆ ಗಮ್ಯ ತಲುಪುವುದು ಸುಲಭ ತಾನೇ? ಹಳೆಯ ವರ್ಷ ಮುಗಿದು ಹೊಸ ಕ್ಯಾಲೆಂಡರ್‌ ವರ್ಷ ತೆರೆದುಕೊಂಡಿದೆ. ಹೊಸ ವರ್ಷ ಹೆಜ್ಜೆ ಹಾಕಬೇಕಾದ ದಾರಿ ಎಂದುಕೊಂಡರೆ ಅದರಲ್ಲಿ ಸಾಗಬೇಕಾದವರು ನಾವು. ಈ ಹೊಸ ವರುಷದಲ್ಲಿ ನಾವು ಹೇಗೆ ಮುನ್ನಡೆಯಬೇಕು, ಏನು ಮಾಡಬೇಕು, ಹೇಗೆ ಇದ್ದರೆ ಬಾಳು ಹಸನಾಗಬಲ್ಲುದು ಎಂಬ ಮಾರ್ಗದರ್ಶನವನ್ನು ನಾಡಿನ ಮಠಾಧಿಪತಿಗಳು, ಧರ್ಮಗುರುಗಳು ಮಾಡಿದ್ದಾರೆ. ನೂತನ ವರ್ಷಕ್ಕೆ ಸದಾಶಯದ ಮುನ್ನುಡಿಯನ್ನು ಅವರು ಬರೆದಿದ್ದಾರೆ. ಅದರಂತೆ ನಡೆಯೋಣ ಎನ್ನುವುದು ಹೊಸ ವರ್ಷದ ಹೊಸ್ತಿಲಿನಲ್ಲಿ ಉದಯವಾಣಿಯ ಹಾರೈಕೆ.

Advertisement

ಎಲ್ಲೆಲ್ಲೂ ಸುಖ-
ಶಾಂತಿ, ನೆಮ್ಮದಿ ನೆಲೆಸಲಿ
ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಸಂಕಟದಿಂದಾಗಿ ಎಲ್ಲ ವ್ಯವಹಾರಗಳು ಸ್ಥಗಿತಗೊಂಡಿದ್ದು, ಎಲ್ಲರಿಗೂ ಸಮಸ್ಯೆಯಾಗಿತ್ತು. ಭಯ, ಆತಂಕ ಹಾಗೂ ಒತ್ತಡದ ವಾತಾವರಣವಿತ್ತು. ಸದ್ಯ ಪರಿಸ್ಥಿತಿ ಕೊಂಚ ಸುಧಾರಣೆ ಯಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ವ್ಯವಹಾರಗಳು ಸುಗಮವಾಗಿ ಸಹಜ ಸ್ಥಿತಿಗೆ ಬಂದಿವೆ. ಆದರೂ ಎಲ್ಲರೂ ಹೊಣೆಗಾರಿಕೆಯಿಂದ ಸರಕಾರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತಾಗಲಿ. ಹೊಸ ವರ್ಷಎಲ್ಲರಿಗೂ ಹರ್ಷದಾಯಕವಾಗಲಿ. ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸಲಿ. ಎಲ್ಲರೂ ಪರಸ್ಪರ ಪ್ರೀತಿ- ವಿಶ್ವಾಸದಿಂದ ಸೌಹಾರ್ದಯುತ ಜೀವನ ನಡೆಸುವಂತಾಗಲಿ. ಹೊಸ ವರ್ಷದ ಶುಭಾಶಯಗಳೊಂದಿಗೆ ಎಲ್ಲರಿಗೂ ಮಂಜುನಾಥ ಸ್ವಾಮಿಯ ಅನುಗ್ರಹಿಸುವಂತಾಗಲಿ.
-ಡಾ| ಡಿ. ವೀರೇಂದ್ರ ಹೆಗ್ಗಡೆ,
ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ

ನವ ಸಂವತ್ಸರಕ್ಕೆ ಪಂಚಸೂತ್ರಗಳು
ನೂತನ ಸಂವತ್ಸರ ದಲ್ಲಿ ಈ ಪಂಚ ಸೂತ್ರಗಳು ನಮ್ಮ ಸಂಕಲ್ಪಗಳಾಗಲಿ.
1) ಈ ಭಗವತ್‌ ನಿರ್ಮಿತ ಜಗತ್ತಿನಲ್ಲಿ ಪ್ರತೀ ಜೀವಿಗೆ ತನ್ನದೇ ಆದ ಸ್ಥಾನವಿದೆ ಎಂಬುದನ್ನು ಮನಗಂಡರೆ ತರತಮ ಭಾವನೆ ಬಳಿ ಸುಳಿಯದು. 2) ನಮ್ಮ ಜೀವನದ ಏರಿಳಿತ ಗಳಿಗೆ ನಾವೇ ಕಾರಣರು ಎಂಬುದನ್ನು ತಿಳಿ ದಾಗ ಮನಸ್ಸು ವಿಚಲಿತವಾಗದು. 3) ಇತರರಲ್ಲಿ ತಪ್ಪನ್ನು ಹುಡುಕದೆ ನಮ್ಮಲ್ಲೇ ತಪ್ಪನ್ನು ಹುಡುಕಿ ಸರಿಪಡಿಸಿಕೊಂಡರೆ ನಮ್ಮ ವ್ಯಕ್ತಿತ್ವ ಶ್ರೇಷ್ಠವಾಗುತ್ತದೆ. 4) ಸುಖ -ದುಃಖ ಜೀವನದ ಅವಿಭಾಜ್ಯ ಅಂಗ ಎಂಬುದನ್ನು ತಿಳಿಯೋಣ. 5) ಸಕಾರಾತ್ಮಕ ಚಿಂತನೆಯಿಂದ ಅನೇಕ ಲಾಭಗಳಿವೆ ಎಂಬುದನ್ನು ಅರಿಯೋಣ. ಇವೆಲ್ಲದರ ಜತೆಗೆ ಸತ್ಯ, ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆ, ದಯೆ, ಕರುಣೆ ಇತ್ಯಾದಿ ದೈವೀ ಗುಣಗಳನ್ನು ಮೈಗೂಡಿಸಿಕೊಂಡರೆ ನಮ್ಮ ವ್ಯಕ್ತಿತ್ವ ಮತ್ತಷ್ಟು ಎತ್ತರಕ್ಕೇರಿ ನಮ್ಮ ಬದುಕನ್ನು ಪಾವನಗೊಳಿಸುವುದು.
-ಸ್ವಾಮಿ ಜಿತಕಾಮಾನಂದಜಿ,
ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು

ಎಲ್ಲವೂ ಆಗುವುದು ಒಳಿತಿಗಾಗಿ
ಪ್ರಭು ಏಸು ಕ್ರಿಸ್ತರು ನಮ್ಮೆಲ್ಲರನ್ನು ಆಶೀರ್ವದಿಸಿ ಹೊಸ ವರ್ಷದ ಸಂತೋಷದಲ್ಲಿ ನಮ್ಮನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. ದೇವರ ಇಚ್ಛೆ ಏನಿದೆಯೋ ಅದರಂತೆ ನಡೆಯುವ ಶಕ್ತಿಯನ್ನು ದೇವರು ಎಲ್ಲರಿಗೂ ಕರುಣಿಸಬೇಕು ಎಂಬುದು ನಮ್ಮೆಲ್ಲರ ತುಡಿತವಾಗಿರುತ್ತದೆ ಎಂಬುದು ಸತ್ಯ.ಕೆಲವೊಮ್ಮೆ ನಾವು ಇಚ್ಛಿಸುವ ವಿಚಾರಗಳು ನಮಗೆ ದೊರೆಯಲು ಸಾಧ್ಯವಿಲ್ಲ. ಹಾಗೆಂದು ಅದಕ್ಕಾಗಿ ಕೊರಗದೆ ಹೊಸ ವಿಚಾರಗಳೆಡೆಗೆ ನಾವು ನಮ್ಮ ಜೀವನ ಕರ್ತವ್ಯವನ್ನು ಮುಂದುವರಿಸುತ್ತ ಸಾಗಬೇಕಿದೆ. 2022ರಲ್ಲಿ ಸಕಲ ವಿಧದ ಕೇಡುಗಳು ದೂರವಾಗಿ ನಾವೆಲ್ಲ ದೇವರ ಮಕ್ಕಳಂತೆ, ಹೆಮ್ಮೆಯ ಪ್ರಜೆಗಳಂತೆ ಬಾಳುವ ಸನ್ನಿವೇಶ ನಮ್ಮದಾಗಬೇಕಿದೆ. ನಿಮಗೆಲ್ಲ ಒಳ್ಳೆಯದಾಗಲಿ. ಈ ನಾಡಿನಲ್ಲಿ ಪ್ರೀತಿ, ಶಾಂತಿ ನೆಲೆಯೂರಲಿ ಎಂದು ಪ್ರಾರ್ಥಿಸುತ್ತೇನೆ.
-ಧರ್ಮಾಧ್ಯಕ್ಷ ಪರಮಪೂಜ್ಯ ಲಾರನ್ಸ್‌ ಮುಕ್ಕುಯಿ, ಬೆಳ್ತಂಗಡಿ

ಸಂಯಮ ಸಂಜೀವಿನಿ ಯಿಂದ ಯಜ್ಞರೂಪವಾಗಲಿ
ನಾವು ಪಶು ಪಕ್ಷ್ಯಾದಿ ಗಳಲ್ಲಿಲ್ಲದ ಸಂಯಮವನ್ನು ಅಳ ವಡಿಸಿಕೊಳ್ಳದಿದ್ದರೆ ನಮ್ಮ ಜೀವನ ದುರ್ಭರವಾದೀತು. ಸ್ವೇಚ್ಛಾಚಾರ- ಆಹಾರ- ವಿಹಾರಗಳನ್ನು ಅನುಸರಿಸಿದರೆ ರೋಗ- ರುಜಿನಗಳಿಗೆ ಬಲಿಯಾಗಬೇಕಾದೀತು.
ಋಣಬಾಧಿತರಾಗಬೇಕಾದೀತು. ಧನ-ಮಾನ ಹಾನಿಯಾ ದೀತು. ಮನಸ್ಸು ಹೇಳಿದ ಮಾರ್ಗದಲ್ಲಿ ನಡೆದರೆ ಆತ ವಾನರ, ಮಹಾತ್ಮರ ಅನು ಭಾವೋಕ್ತಿಯು ತೋರಿದ ಮಾರ್ಗದಲ್ಲಿ ನಡೆದರೆ ಆತ ನರ.
ಮನಾಂಸಿ ಯತ್ರ ಗಚ್ಚಂತಿ ತತ್ರ ಗಚ್ಚಂತಿ ವಾನರಾಃ |
ಶಾಸ್ತ್ರಾಣಿ ಯತ್ರ ಗಚ್ಚಂತಿ ತತ್ರ ಗಚ್ಚಂತಿ ತೇ ನರಾಃ ||
ಆಚಾರ- ವಿಚಾರ- ಆಹಾರ- ವಿಹಾರ- ವಾಗÌ$Âವಹಾರಾದಿ ಗಳಲ್ಲಿ ಶಿಸ್ತು- ಸಂಯಮ-ಭಗವತøಜ್ಞೆ- ಪ್ರಾಮಾಣಿಕತೆ
ಗಳನ್ನು ಅಳವಡಿಸಿಕೊಂಡು ಜೀವನವನ್ನು ಯಜ್ಞವನ್ನಾಗಿ ರೂಪಿಸೋಣ.
-ಶ್ರೀ ವಿದ್ಯೆàಶತೀರ್ಥಶ್ರೀಪಾದರು,
ಶ್ರೀ ಭಂಡಾರಕೇರಿ ಮಠ, ಬಾರಕೂರು

Advertisement

ಸುಖ ದುಃಖ ಸಮಾನವಾಗಿ ಸ್ವೀಕರಿಸುವ
ಜನವರಿ ಒಂದನ್ನು ಕ್ಯಾಲೆಂಡರ್‌ ಪ್ರಕಾರ ಹೊಸ ವರ್ಷ ಎಂದು ಒಪ್ಪಿಕೊಂಡಿದ್ದೇವೆ. ಏನೇ ಇರಲಿ ಇದನ್ನು ಕೂಡ ನಾವು ಯುಗಾದಿಯ ರೀತಿಯಲ್ಲೇ ಹೊಸ ವರ್ಷವಾಗಿ ಆಚರಿಸ ಬಹುದು, ಸಂಭ್ರಮಿಸಬಹುದು. ಮುಖ್ಯವಾಗಿ ದೇವರಲ್ಲಿ ನಂಬಿಕೆಯನ್ನು ಇಟ್ಟು, ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಈ ವರ್ಷ ಒಳಿತನ್ನು ಮಾಡು ಎಂದು ಕೇಳಿಕೊಂಡು ಹೊಸ ವರ್ಷವನ್ನು ಆಚರಿಸುವುದು ಉತ್ತಮ. ಒಳಿತು-ಕೆಡುಕು, ನೋವು-ನಲಿವು ಇವೆಲ್ಲವೂ ಬದುಕಿನ ಜತೆ ಜತೆಗೆ ಬರುವಂಥದ್ದು, ಹೀಗಾಗಿ ಹಿಂದೆ ನಡೆದ ನೋವು-ಬೇಸರಗಳನ್ನು ಮರೆತು ಒಳ್ಳೆತನ, ಸಕಾರತ್ಮಕ ಚಿಂತನೆಗಳಿಗಾಗಿ ನಾವೆಲ್ಲ ತುಡಿಯುವ. ಮುಖ್ಯವಾಗಿ ಪ್ರಕೃತಿಯ ಮೇಲೆ, ದೇವರ ಮೇಲೆ ನಂಬಿಕೆ ಯನ್ನು ಇರಿಸುವ. ಹೊಸ ವರ್ಷ ಎಲ್ಲರಿಗೂ ಒಳಿತನ್ನು ತರಲಿ; ಜಗತ್ತಿನಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಲಿ.
-ಶ್ರೀ ನೃಸಿಂಹಾಶ್ರಮ ಸ್ವಾಮಿಗಳು,
ಶ್ರೀಮಠ ಬಾಳೇಕುದ್ರು

ಆಕರ್ಷಣೆಗಳ ಮಾಲಿನ್ಯದಿಂದ ದೂರವಿರಿ
ಮನಸ್ಸೆಂಬುದು ಸದಾ ಪ್ರಶಾಂತ ವಾಗಿ ರಬೇಕು. ಮನಸ್ಸಿಗೆ ಕಲ್ಲು ಬಿಸಾಕಿ ಪ್ರಶಾಂತಿಯನ್ನು ಕೆಡಿಸುವ ಕಾರ್ಯ ಮಾಡಬಾರದು. ಮನಸ್ಸನ್ನು ತಲ್ಲಣಿ ಸುವ ಹೊರಗಿನ ಶಬ್ದ ಒಳಗೆ ಪ್ರವೇಶ ಮಾಡಿ, ಕೆಟ್ಟ ಪ್ರಭಾವ ಬೀರಿ, ಯೋಚನಾ ಲಹರಿ ಯನ್ನೇ ಬೇರೆಡೆಗೆ ಕೊಂಡೊಯ್ಯುತ್ತದೆ. ಆ ಹೊರಗಿನ ಶಬ್ದ ಮನಸ್ಸಿನೊಳಗೆ ಬಾರದಂತೆ ಇಂದ್ರಿಯಗಳ ಮೂಲಕ ನಿಗ್ರಹ ಮಾಡಬೇಕು. ಮನಸ್ಸು ಪರಿಶುದ್ಧವಾಗಿದ್ದಾಗ ನಮ್ಮೊಳಗಿನ ವಿಚಾರವೂ ಚೆನ್ನಾಗಿರುತ್ತದೆ. ಮನಸ್ಸಿಗೆ ಆಹಾರ ತಂದುಕೊಂಡುವ ಇಂದ್ರಿಯಗಳನ್ನು ಚೆನ್ನಾಗಿ ಇಟ್ಟುಕೊಂಡವರು ಸಾಧಕರಾಗು ತ್ತಾರೆ. ಆಕರ್ಷಣೆಗಳ ಮಾಲಿನ್ಯದಿಂದ ಮನಸ್ಸನ್ನು ದೂರ ವಿಟ್ಟಾಗ ನಿರೋಗಿಯಾಗಿ ಸ್ವಸ್ಥ ಜೀವನ ನಡೆಸಲು ಸಾಧ್ಯ.
-ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ,
ಶ್ರೀ ಪಲಿಮಾರು ಮಠ, ಉಡುಪಿ

ಮಾನಸಿಕ ಒತ್ತಡ ಪರಿಹಾರ ಶ್ರೀಕೃಷ್ಣನ ಸಲಹೆ
ಸಾಮಾನ್ಯ ವಾಗಿ ಪ್ರತಿ ಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆರುತ್ತದೆ. ಕೆಲವರಿಗೆ ಕುಟುಂಬದ ಚಿಂತೆ. ಕೆಲವರಿಗೆ ಪರೀಕ್ಷೆಯ ಚಿಂತೆ. ಕೆಲವರಿಗೆ ಮಕ್ಕಳ ಭವಿಷ್ಯದ ಚಿಂತೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಿಂತೆಗಳು. ಮಾನಸಿಕ ಒತ್ತಡದಿಂದ ಪಾರಾಗಲು ಜೀವನದಲ್ಲಿ ಕೆಲವು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಮೊದಲು ತನ್ನ ಕರ್ತವ್ಯವನ್ನು ಮರೆಯದೇ ನಡೆಸಬೇಕು. ಆಸೆ, ದ್ವೇಷ ಇವುಗಳನ್ನು ಬಿಡಬೇಕು. ಕಾಮ ಕ್ರೋಧಗಳನ್ನು ಜಯಿಸಬೇಕು. ಅದಕ್ಕಾಗಿ ಇಂದ್ರಿಯಗಳನ್ನು ನಿಗ್ರಹ ಮಾಡಬೇಕು.ಹೀಗೆ ಯಾರು ತನ್ನ ಇಂದ್ರಿಯಗಳನ್ನು ನಿಗ್ರಹಿಸಿ, ಕಾಮ ಕ್ರೋಧಗಳನ್ನು ಗೆಲ್ಲುತ್ತಾನೋ, ಅಂತಹ ವ್ಯಕ್ತಿಯ ಮನಸ್ಸು ಅತ್ಯಂತ ಹಗುರವಾಗುತ್ತದೆ. ಪ್ರಸನ್ನವಾಗುತ್ತದೆ. ಸುಖವನ್ನು ಅನುಭವಿಸುವನು. ಜಗದ್ಗುರು ಶ್ರೀ ಕೃಷ್ಣ ದೇವರು ತಿಳಿಸಿದ ಮಾರ್ಗದಲ್ಲಿ ಸಾಗಿ, ಎಲ್ಲ ಮನುಷ್ಯರು ಪ್ರಸನ್ನಮನಸ್ಕರಾಗಿ, ಸುಖವನ್ನು ಅನುಭವಿಸುವಂತಾಗಲಿ.
-ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು,
ಶ್ರೀ ಕಾಣಿಯೂರು ಮಠ, ಉಡುಪಿ

ಸವಾಲುಗಳಿಗೆ ತೆರೆದುಕೊಳ್ಳೋಣ
ಬದುಕು ಎಲ್ಲಕ್ಕಿಂತ ದೊಡ್ಡದು. ಆತ್ಮವಿಶ್ವಾಸ, ನಂಬಿಕೆ ಬದುಕಿನ ಗುಟ್ಟು. ದೋಣಿಯಲ್ಲಿ ತೂತು ಬಿದ್ದಾಗ ಬೊಬ್ಬೆ ಹಾಕುವುದಲ್ಲ, ಬದಲಾಗಿ ನೀರನ್ನು ಹೊರಕ್ಕೆ ಚೆಲ್ಲಬೇಕು. ಒಳ್ಳೆಯ ನಿರೀಕ್ಷೆ, ನಂಬಿಕೆಯಿಂದ ಬದುಕು ಸಫ‌ಲ ವಾಗುತ್ತದೆ. ಕಷ್ಟ-ನಷ್ಟ, ನೋವು- ನಲಿವು ಎಲ್ಲರಿಗೂ ಬರುತ್ತದೆ. ಜೀವನದಲ್ಲಿ ಏನೇ ಏಳು- ಬೀಳು ಗಳಾಗಲಿ; ಅದು ನಮ್ಮ ಕರ್ಮಫ‌ಲವೆಂದು ಕೊಂಡು ಮುಂದೆ ಸಾಗಬೇಕು. ಸವಾಲುಗಳು ಎದುರಾದಾಗ ತಲೆಬಾಗಬಾರದು. ಕಷ್ಟ, ನಷ್ಟ, ನೋವುಗಳನ್ನು ಮೆಟ್ಟಿ ನಿಂತು ಮುನ್ನಡೆಯೋಣ. ಜೀವನದ ಉತ್ಸಾಹ ಯಾವತ್ತೂ ಕಡಿಮೆಯಾಗಬಾರದು. ಹೊಸ ವರುಷದಲ್ಲಿ ಹೊಸತನಕ್ಕೆ ನಾಂದಿ ಹಾಡೋಣ.
– ಶ್ರೀ ಈಶ ವಿಟಲದಾಸ ಸ್ವಾಮೀಜಿ,,
ಸಾಂದೀಪನಿ ಸಾಧನಾಶ್ರಮ, ಶ್ರೀ ಕ್ಷೇತ್ರ ಕೇಮಾರು

ಅಲೆಗಳ ನಡುವೆ ಈಜು ಕಲಿಯಬೇಕು
ಹೂವೊಂದು ಬೆಳಗ್ಗೆ ಅರಳಿ, ಸಂಜೆ ಬಾಡಿ ಜೀವನ ಯಾತ್ರೆಯನ್ನು ಮುಗಿಸುತ್ತದೆ. ಇರುವ ಕೆಲವು ಗಂಟೆಗಳಲ್ಲಿ ಅದೆಷ್ಟೋ ಜನರ ಹೃದಯವನ್ನು ಗೆಲ್ಲುತ್ತದೆ. ಸ್ಥಾನಮಾನ ಮುಖ್ಯವಲ್ಲ, ಬೆಳಗುವ ಸಾಮರ್ಥ್ಯ ಮುಖ್ಯ. ಮಹಾನದಿಯಾಗಲು ಸಾಧ್ಯವಿಲ್ಲದಿದ್ದರೂ ಪುಟ್ಟ ಹನಿಯಾಗಿ ಇನ್ನೊಬ್ಬರ ಬದುಕಲ್ಲಿ ತಂಪನ್ನು ಉಂಟು ಮಾಡಬೇಕು. ಜೀವನದಲ್ಲಿ ಏರಿಳಿತಗಳು ಸಹಜ, ಅವುಗಳ ಮಧ್ಯೆ ಸಂತೋಷವಾಗಿ ಬದುಕುವುದನ್ನು ಕಲಿಯಬೇಕು. ಜೀವನದಲ್ಲಿ ಸುಖ ದುಃಖ, ಲಾಭ ನಷ್ಟ, ನೋವು ನಲಿವು ಇವು ಸಹಜ. ಕತ್ತಲೆ -ಬೆಳಕು ಇದ್ದ ಹಾಗೆ. ಭಗವಂತ ಕೊಟ್ಟಿರುವುದರಲ್ಲಿ ತೃಪ್ತಿಯನ್ನು ಹೊಂದಿ ಸಂತೋಷವಾಗಿರಬೇಕು. ಅದುವೇ ಬದುಕು ಅದುವೇ ನೆಮ್ಮದಿ. ಸಂತೋಷವೂ ಸಹ. ಹೊಸ ವರುಷವು ನಮ್ಮಲ್ಲಿ ಜೀವನೋತ್ಸಾಹವನ್ನು ತುಂಬಿ ನಿತ್ಯವೂ ಆರೋಗ್ಯದಿಂದ ಸಂತಸವನ್ನು ಅನುಭವಿಸುವ ಹಾಗೆ ಭಗವಂತ ಅನುಗ್ರಹಿಸಲಿ.
-ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ,
ಶ್ರೀ ಆನೆಗುಂದಿ ಮಹಾಸಂಸ್ಥಾನ, ಕಟಪಾಡಿ

ಲೋಕಕಲ್ಯಾಣದ ಕರ್ತವ್ಯದತ್ತ ಮಾತ್ರ ದೃಷ್ಟಿ
ಹೊಸ ವರ್ಷ ಎಂದರೆ ಸಂಸ್ಕಾರ ಪೂರಿತ, ಜ್ಞಾನಪೂರಿತವಾದ ಹೊಸತನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂಬದು ಶಾಸ್ತ್ರಾರ್ಥ. ಕೊರೊನಾ ಸಂದರ್ಭ ಜೀವನ ಅಂದರೆ ಏನೆಂಬ ಪಾಠವನ್ನು ಬೋಧಿಸಿದೆ. ಮನುಷ್ಯನಿಗೆ ಛಲ ಯಾವಾಗ ಬರುತ್ತದೋ ಆಗ ಜೀವನವನ್ನು ಎದುರಿಸುವ ಶಕ್ತಿ ಬರುತ್ತದೆ. ಭಗವಂತ ನಮಗೆ ನೀಡಿದ ಜೀವನದಲ್ಲಿ ಕಷ್ಟಗಳು, ನೋವುಗಳು ಸಾಮಾನ್ಯ. ಇದ್ಯಾವುದನ್ನು ಲೆಕ್ಕಿಸದೆ ನೈಜವಾದ ಯೋಗಿಗಳಾದಾಗ ಎಂಥ ಕಷ್ಟಗಳು ಎದುರಾದಾಗಲೂ ಎದುರಿಸುವ ಆತ್ಮವಿಶ್ವಾಸ ಜಾಗೃತಗೊಳ್ಳುತ್ತದೆ. ಆಗ ಕಷ್ಟ ತೃಣಮಾತ್ರವಾಗುತ್ತದೆ. ನಮ್ಮನ್ನು ನಾವು ನಂಬೋಣ. ಆತ್ಮ ವಿಶ್ವಾಸದಿಂದ ಸವಾಲುಗಳನ್ನು ಎದುರಿಸೋಣ. ರಾಮ, ಬುದ್ಧ, ಬಸವಣ್ಣ, ಬ್ರಹ್ಮಶ್ರೀ ನಾರಾಯಣ ಗುರುವರ್ಯರು, ಗಾಂಧಿ, ಅಂಬೇಡ್ಕರ್‌ ಅವರಂತಹ ಅನೇಕ ಜ್ಞಾನಿಗಳ ಜೀವನ ಆದರ್ಶಗಳನ್ನು ನಾವಿಂದು ಮೈಗೂಡಿಸಿ ಕೊಳ್ಳಬೇಕಿದೆ. 2022ರ ಹೊಸ ವರ್ಷ ಜನರಿಗೆ ಸುಖ, ಶಾಂತಿ ನೆಮ್ಮದಿ ಕರುಣಿಸಲಿ.
-ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ,ಕನ್ಯಾಡಿ ಶ್ರೀರಾಮ ಕ್ಷೇತ್ರ ಸಂಸ್ಥಾನಂ

ಪರಿವರ್ತನೆಯೇ ಹೊಸವರ್ಷ
ಆಧುನಿಕ ಭರಾಟೆಯ ನಡುವೆ ಮನುಷ್ಯ ಕಾಲದ ವೇಗೋತ್ಕರ್ಷಕ್ಕೆ ಬೌದ್ಧಿಕ, ಮಾನಸಿಕವಾಗಿ ಬಲಹೀನನಾಗುತ್ತಾನೆ. ಜೀವನದ ಬದುಕಿನ ಶೈಲಿಯನ್ನು ಅನುಕೂಲ ಸಿಂಧುವಾಗಿ ಬದಲಿಸುತ್ತ ಸಾಗುತ್ತಾನೆ. ಇದರ ನಡುವೆ ಧರ್ಮ, ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸಿಕೊಳ್ಳುವುದರ ಕಡೆ ದೃಷ್ಟಿ ಹಾಯಿಸುವುದು ಅಷ್ಟೇ ಮುಖ್ಯ. ಸಕಾರಾತ್ಮಕ ಶಕ್ತಿಗಳು ಆಂತರ್ಯದಲ್ಲಿ ಬದಲಾವಣೆ ತಂದರೆ ಭವಿಷತ್ತಿನ ಹಾದಿ ಸುಗಮವಾಗಬಹುದು. ಕೊರೊನಾ ಜೀವನ ಏನೆಂಬುದನ್ನು ಎಲ್ಲರಿಗೂ ಅರ್ಥ ಮಾಡಿಸಿದೆ. ವಾಸ್ತವ ಅನುಭವದ ಗುಂಗಿನಲ್ಲಿ ಎಲ್ಲರೂ ಬದುಕುವಂತಾಗಿದೆ. ನಮ್ಮ ಜೀವನದ ನಾವೀನ್ಯದೆಡೆಗೆ ಸಾಗಬೇಕು. ಸಚ್ಚಿಂತನೆ, ಸದ್ಭಾವನೆ, ಸತ್ಕರ್ಮಗಳನ್ನು ಮಾಡುವುದರ ಮೂಲಕ ಸತøಜೆಯಾಗಿ ಬೆಳೆದು ಬೆಳಗಬೇಕು. ಆಗ ಬಾಳು ಬೆಳಗಲು ಸಾಧ್ಯ. ಕತ್ತಲೆ ಬದಿಗೆ ಸರಿಯಲು ಸಾಧ್ಯ. ಇವೇ ಹೊಸವರ್ಷದ ಆಶಯದ ನುಡಿಗಳು. ಸರ್ವರಿಗೂ ಶುಭವಾಗಲಿ.
-ಶ್ರೀ ಧರ್ಮಪಾಲನಾಥ ಸ್ವಾಮೀಜಿ,
ಶ್ರೀ ಆದಿಚುಂಚನಗಿರಿ ಸಂಸ್ಥಾನ ಶಾಖಾಮಠ, ಮಂಗಳೂರು

ಹೊಸ ವರ್ಷ ಹೊಸ
ನಿರ್ಧಾರ ಅನುಷ್ಠಾನಿಸೋಣ
ಬದುಕು ನಿಂತ ನೀರಲ್ಲ; ಅಲ್ಲಿ ಸುಖ, ದುಃಖ ಎರಡೂ ಇರುತ್ತವೆ. ಸುಖ ಸಂತೋಷವೇ ತುಂಬಿದ್ದರೆ ಅಲ್ಲಿ ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಕಷ್ಟದಿಂದ ನಡೆದುಬಂದ ದಾರಿಯಲ್ಲಿ ಸಂತೋಷ ಇರುತ್ತದೆ; ಆತ್ಮ ಸ್ಥೈರ್ಯ ತುಂಬಿರುತ್ತದೆ. ಕಷ್ಟಗಳು ನಮಗೆ ಆತ್ಮಸ್ಥೈರ್ಯ ಬೆಳೆಸಿಕೊಳ್ಳಲು ಇರುವ ಅತೀ ಉತ್ತಮ ಮಾರ್ಗದರ್ಶಿ ಸೂತ್ರಗಳು. ಕೇವಲ ನಮಗಾಗಿಯೇ ಜೀವಿಸದೆ, ಇತರರ ಕಷ್ಟಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಿದರೆ ನಮ್ಮ ಜೀವನ ಸಾರ್ಥಕವಾಗುವುದು. ನಮ್ಮ ಈ ಪ್ರಯತ್ನದಿಂದಾಗಿ ಬೇರೊಬ್ಬರು “ನೀನೂ ಇತರರ ಒಳಿತಿಗಾಗಿ ಜೀವಿಸ ಬೇಕು’ ಎಂಬ ನಿರ್ಧಾರಕ್ಕೆ ಬಂದರೆ ನಾವು ನಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಕಂಡು ಕೊಳ್ಳಬಹುದು.
ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
-ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ,
ಧರ್ಮಾಧ್ಯಕ್ಷರು, ಮಂಗಳೂರು ಧರ್ಮ ಪ್ರಾಂತ್ಯ

ಭಾರತೀಯ ಸಂಸ್ಕೃತಿಯ ಹೊಸ ವರ್ಷ
ಹೊಸ ವರುಷ ಹರುಷ ತರಲಿ. ಹೊಸ ವರ್ಷದ ಹೆಸರಿನಲ್ಲಿ ಸಂಸ್ಕೃತಿ ಯನ್ನು ಬೆಳಗಿ ಸುವ ಕಾರ್ಯಕ್ರಮಗಳು ಸಂಪನ್ನ ಗೊಳ್ಳಲಿ. ಭಾರತೀಕರಣವು ಶ್ರೇಷ್ಠ. ಭಾರತೀಯತೆಯ ದೃಷ್ಟಿ ಇದ್ದರೆ ವ್ಯಷ್ಠಿ ಯಿಂದ ಸಮಷ್ಠಿಯೆಡೆಗೆ ಸಾಗಬಹುದು. ವ್ಯಕ್ತಿವಿಕಾಸ, ವ್ಯಕ್ತಿತ್ವ ನಿರ್ಮಾಣ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಇದು ಪೂರಕವಾಗಿರುವುದು. ವಿಕೃತ ಮನಸ್ಸುಗಳಿಂದ ಸಮಾಜವು ಹಾಳಾಗುವುದರಲ್ಲಿ ಸಂಶಯವಿಲ್ಲ. ಆದ್ದ ರಿಂದ ಸುಸಂಸ್ಕೃತರಾಗೋಣ. ಸಂಭ್ರಮಗಳನ್ನು ಆಚರಿಸುವಾಗ ವಿಕೃತಿಯಾಗದೆ, ಸಂಸ್ಕೃತಿಯನ್ನು ಅರಳಿಸುವ ರೀತಿ ಯಲ್ಲಿರಬೇಕು. ಸಂಸ್ಕೃತಿಯನ್ನು ಬೆಳಗೋಣ. ಪ್ರಜ್ಞಾವಂತ ಪ್ರಜೆಗಳಿಂದಲೇ ಆದರ್ಶ ರಾಷ್ಟ್ರ ನಿರ್ಮಾಣಗೊಳ್ಳುವುದು. ಪುಟ್ಟ ಮಕ್ಕಳಲ್ಲಿ ಸಂಸ್ಕೃತಿಯ ಬೀಜಗಳನ್ನು ಬಿತ್ತುವುದರಿಂದ, ಸಂಸ್ಕಾರದ ಮೂಲಕ ಭವ್ಯ ಭಾರತ ನಿರ್ಮಿಸೋಣ.
-ಶ್ರೀ ಗುರುದೇವಾನಂದ
ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ

ಸುದಿನಗಳು ನಮ್ಮೆಲ್ಲರ ಪಾಲಿಗೆ ಒದಗಿಬರಲಿ
ಯುಗಾದಿ ಮತ್ತು ದೀಪಾವಳಿ ನಮಗೆ ಹೊಸ ವರ್ಷದ ಸಂಭ್ರಮದ ದಿನಗಳು. ಅದರೊಂದಿಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅಂಶವಾಗಿ ಗ್ರೆಗೊರಿಯನ್‌ ಕ್ಯಾಲೆಂಡರ್‌ ಅನ್ವಯ ಜನವರಿ ಒಂದನ್ನೂ ಹೊಸ ವರ್ಷದ ಆರಂಭ ವೆಂದು ಭಾರ ತೀಯರು ರೂಢಿಸಿಕೊಂಡು ಬಂದಿದ್ದಾರೆ. ಈ ಹೊತ್ತು ಆರೋಗ್ಯ ಸಂಬಂಧಿತ ಗೊಂದಲ, ಸಮಸ್ಯೆ, ಸಂದಿಗ್ಧಗಳೆಲ್ಲವೂ ದೂರವಾಗಲಿ; ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮತ್ತೆ ಜನಜೀವನ ಹೊಸ ಹುರುಪು, ದೃಢತೆಯೊಂದಿಗೆ ಅರಳುವ ಸುದಿನಗಳು ನಮ್ಮೆಲ್ಲರ ಪಾಲಿಗೆ ಒದಗಿಬರಲಿ. ಎಲ್ಲ ಸಮು ದಾಯಗಳು ಭಾವೈಕ್ಯದಿಂದ ಬದುಕು ನಡೆಸುವಂತಾಗಲಿ.
-ಪ.ಪೂ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯ ವರ್ಯ ಸ್ವಾಮೀಜಿ, ಶ್ರೀ ಜೈನಮಠ, ಮೂಡುಬಿದಿರೆ.

ಹೊಸ ವರ್ಷ
ಶುಭವನ್ನು ತರಲಿ
ಹಿಂದುಗಳಿಗೆ ಹೊಸ ವರ್ಷ ಯುಗಾದಿ. ಆದರೂ ಕ್ಯಾಲೆಂಡರ್‌ ವರ್ಷ ಡಿಸೆಂಬರ್‌ಗೆ ಮುಗಿಯುತ್ತಿದೆ. ಹೊಸತು ವರ್ಷ ಎಂದಾಗ ಹಲವು ಆಸೆಗಳಿರುತ್ತವೆ. ಎಲ್ಲರಿಗೂ 2022ನೇ ವರ್ಷ ಶುಭವನ್ನು ತರಲಿ. ಕೊರೊನಾ ರೂಪಾಂತರಿ, ಒಮಿಕ್ರಾನ್‌ ಮುಂತಾದ ವೈರಸ್‌ಗಳಿಂದ ನಾಡಿಗೆ ಮುಕ್ತಿ ಸಿಗಲಿ. ನಾಡಿನಲ್ಲಿ ಶುಭ ಘಳಿಗೆ ಮೂಡಲಿ. ಹಿಂದೂ ಕ್ಯಾಲೆಂಡರ್‌ ಪ್ರಕಾರ ಯುಗಾದಿ ಹೊಸ ವರ್ಷ ಆರಂಭ. ಆದರೆ ಹಳೆಯ ಕಾಲ ದಿಂದ ಆಚರಿಸಿಕೊಂಡು ಬಂದಿರುವುದು ಕ್ಯಾಲೆಂಡರ್‌ ಆರಂಭದ ಹೊಸ ವರ್ಷ. ಜನರ ಉತ್ತಮ ನಿರೀಕ್ಷೆ, ಯೋಜನೆ, ಯೋಚನೆಗಳು ಶ್ರೀ ದೇವರ ಅನುಗ್ರಹದಿಂದ ಈಡೇರಲಿ.
-ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ,
ಸಂಪುಟ ಶ್ರಿ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ

ಆವರಿಸಿದ ಕಾರ್ಮೋಡಗಳೆಲ್ಲ ಬದಿಗೆ ಸರಿಯಲಿ
ಮತ್ತೆ ಹೊಸ ವರುಷದ ಹೊಸ್ತಿಲೊಳಗೆ ಹೆಜ್ಜೆಯಿಡುವ ಸಂಭ್ರಮದ ಕ್ಷಣ ಬಂದಿದೆ. ಆವರಿಸಿದ ಕಾರ್ಮೋಡಗಳೆಲ್ಲವೂ ಬದಿಗೆ ಸರಿಯಲಿ. ಮನುಕುಲದ ಉಳಿವಿಗಾಗಿ ನಿರಂತರ ಪ್ರಾರ್ಥನೆಗಳಿಂದ ತಮ್ಮನ್ನು ತಾವು ಶುದ್ಧಿ ಗೊಳಿಸಿಕೊಳ್ಳುವ ಹಂತ ಬಂದಿದೆ ಎಂದು ಅನ್ನಿಸುತ್ತಿದೆ. ಭಯ, ಆತಂಕಗಳೆಲ್ಲವೂ ದೂರವಾಗಿ ನೆಮ್ಮದಿಯ ಬದುಕನ್ನು ಆ ಮಹಾತಾಯಿ ಪರಾಶಕ್ತಿ ಕರುಣಿಸಲಿ ಎಂಬ ಪ್ರಾರ್ಥನೆ ನಮ್ಮದು.
-ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿ, ಶ್ರೀ ಗುರು ಪರಾಶಕ್ತಿ ಮಠ, ಮರಕಡ

ಹೊಸ ವರ್ಷದ ಸಂಕಲ್ಪ: ಗೀತಾ ಸುಗೀತಾ ಕರ್ತವ್ಯಾ
ಭಗವ ದ್ಗೀತೆ ಸದಾನಂದ ನಾದ ಶ್ರೀಕೃಷ್ಣನ ಸಂದೇಶ. ಶ್ರೀಮದ್ಭಗವದ್ಗೀತೆ ಯನ್ನು ಸಂಪೂರ್ಣವಾಗಿ ಬರೆಯುವ ಹೊಸ ವರ್ಷದ ಸತ್ಯಸಂಕಲ್ಪ ನಿಮ್ಮದಾಗಲಿ. ನಮ್ಮೆಲ್ಲ ನಿರೀಕ್ಷೆ, ಪರೀಕ್ಷೆ ಸವಾಲು, ಕವಲುಗಳಿಗೆಲ್ಲ
ಉತ್ತರ ಈ ಲೇಖನ ಯಜ್ಞದಲ್ಲಿದೆ. ನಮ್ಮ ಚತುರ್ಥ ಪರ್ಯಾಯ ನಿಮಿತ್ತ ನಾವು ಈಗ ಹೊಸ ವರ್ಷದಲ್ಲಿ ಘೋಷಿಸುತ್ತಿರುವ ಕೋಟಿ ಗೀತಾ ಲೇಖನ ಯಜ್ಞದ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸೋಣ. “ಯಜ್ಞಾ ದ್ಭವತಿ ಪರ್ಜನ್ಯಃ’ ಯಜ್ಞದಿಂದ ಸುವೃಷ್ಟಿ ಎಂಬ ಗೀತಾ ವಾಕ್ಯವನ್ನು ಸಾಕ್ಷಾತ್ಕರಿಸೋಣ. “ಯೋಗಕ್ಷೇಮ ವಹಾ ಮ್ಯಹ್‌’ ಎಂಬ ಗೀತಾಚಾರ್ಯನ ಅಮರ ಸಂದೇಶವನ್ನು ನಾವೇಕೆ ಸ್ವೀಕರಿಸಬಾರದು? “ಗೀತಾ ಸುಗೀತಾ ಕರ್ತವ್ಯಾ’ ಇದುವೇ 2022ರ ಘೋಷವಾಕ್ಯ, ಧ್ಯೇಯವಾಕ್ಯ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಶ್ರೀ ಪುತ್ತಿಗೆ ಮಠ, ಉಡುಪಿ

ವ್ಯಾವಹಾರಿಕ ವರ್ಷದ ಆರಂಭ
ನಮ್ಮ ಶೈಕ್ಷಣಿಕ ವರ್ಷ ಪ್ರಾರಂಭ ವಾಗುವುದು ಜೂನ್‌ ತಿಂಗಳಿಂದ. ನಮ್ಮ ಆರ್ಥಿಕ ವರ್ಷ ಪ್ರಾರಂಭವಾಗುವುದು ಎಪ್ರಿಲ್‌ ತಿಂಗ ಳಿಂದ. ಸಂವತ್ಸರ ಪ್ರಾರಂಭ ಗೊಳ್ಳುವುದು ಯುಗಾದಿಯಿಂದ. ಸೌರಮಾನರೀತ್ಯಾ ದಿನಗಣನೆ ಮಾಡುವವರಿಗೆ ಮೇ, ಸಂಕ್ರಮಣದಿಂದ- ಚಾಂದ್ರ ಮಾನರೀತ್ಯಾ ದಿನಗಣನೆ ಮಾಡುವವರಿಗೆ ಚೈತ್ರ ಮಾಸ ದಿಂದ, ಧಾರ್ಮಿಕ ಅನುಷ್ಠಾನಗಳಿಗೆಲ್ಲ, ಬದುಕನ್ನು ರೂಪಿಸುವ, ನಮ್ಮ ಬದುಕನ್ನು ಕಟ್ಟುವ ಮಳೆ-ಚಳಿಗಳಿಗೆಲ್ಲ ಲೆಕ್ಕಾಚಾರ ಯುಗಾದಿಯಿಂದ. ಇಂದಿನ ವ್ಯಾವಹಾರಿಕ ಜಗತ್ತಿನ ವ್ಯವಹಾರಗಳ ಲೆಕ್ಕಾಚಾರಕ್ಕಾಗಿ ಕ್ಯಾಲೆಂಡರ್‌ ಬದಲಿಸುವ ಕಾಲ ಜನವರಿ ತಿಂಗಳು. ಜನವರಿಯಲ್ಲಿ ಅವಶ್ಯವಾಗಿ ಕ್ಯಾಲೆಂಡರ್‌ ಬದಲಿಸಿಕೊಳ್ಳೋಣ. ಹೊಸ ವರ್ಷ ಶುಭ ತರಲಿ, ಆದರೆ ಸಂಭ್ರಮ ಆಚರಣೆಯ ಹೆಸರಿನಲ್ಲಿ ಅಪಸವ್ಯಗಳು ಬೇಡ.
ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು,
ಶ್ರೀ ಪೇಜಾವರ ಮಠ, ಉಡುಪಿ

ಹೊಸ ವರ್ಷ ಹರ್ಷ ತರಲಿ
ಹೊಸ ವರ್ಷ ಅಂದರೆ ನಮ್ಮ ಧಾರ್ಮಿಕ ಕಾರ್ಯಗಳನ್ನು, ಸಮಾಜ ಸೇವೆಗಳನ್ನು, ಎಲ್ಲ ಉತ್ತಮ ಕಾರ್ಯಗಳಿಗೆ ಹೊಸ ಹುಮ್ಮಸ್ಸಿನಿಂದ ಮಾಡಲು ಮುಂದಾಗುವ ಹಾಗೂ ನಮ್ಮ ಜೀವನದ ಒಂದು ವರ್ಷ ಸಾಗಿದ್ದನ್ನು ನೆನಪಿಸುವ ಸಮಯವಾಗಿದೆ. ಕಳೆದ ವರ್ಷದಲ್ಲಿ ನಾವು ಅನುಭವಿಸಿದ ಕಷ್ಟ ನಷ್ಟಗಳು, ಮಾರಕ ರೋಗಗಳು ನಮ್ಮ ಮುಂದಿನ ವರ್ಷಗಳಲ್ಲಿ ಬಾರದಿರಲು ಸರ್ವ ಶಕ್ತನಾದ ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾದ ಸಮಯವಾಗಿದೆ ಹೊಸ ವರುಷದ ಆರಂಭದ ಈ ದಿನ. ಹೊಸ ವರ್ಷವು ನಮಗೆ ಹರುಷವ ತರಲಿ. ನಾವು ಎಲ್ಲರಿಗೂ ಒಳಿತನ್ನೇ ಬಯಸೋಣ. ಆ ಮೂಲಕ ಸಮಾಜದ ಒಳಿತಿಗಾಗಿ ಪ್ರಯತ್ನಿಸೋಣ.
-ಝೈನುಲ್‌ ಉಲಮಾ ಎಂ. ಅಬ್ದುಲ್‌ ಹಮೀದ್‌ಮುಸ್ಲಿಯಾರ್‌ ಮಾಣಿ ಉಸ್ತಾದ್‌,ಜಿಲ್ಲಾ ಸಂಯುಕ್ತ ಜಮಾಅತ್‌ ಖಾಝಿ

ಮಾನವೀಯತೆ ಸಹೋದರತೆ ಗೆಲ್ಲಲಿ
ವರ್ಷವೊಂದು ಕಳೆದು ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಮತ್ತೊಮ್ಮೆ ಹೊಸ ಉತ್ಸಾಹ ಮತ್ತು ಹುಮ್ಮಸ್ಸು ತುಂಬಿ ಹೊಸ ಕನಸುಗಳ ಕನವರಿಕೆಗೆ ಈ ಹೊಸವರ್ಷವು ನಮಗೆ ಕರೆ ನೀಡು ತ್ತಿದೆ. ಜಗವೆಲ್ಲ ಒಂದೇ ಕುಟುಂಬ ಎಂಬ ಸತ್ಯವನ್ನು ಹಿಂದಿನಿಂದಲೂ ನಂಬಿ, ಆಚರಿಸಿಕೊಂಡು ಬಂದ ದೇಶದ ಎಲ್ಲರೂ ಆ ಸತ್ಯವನ್ನು ಒಪ್ಪಿಕೊಳ್ಳುವಂತಾಗಲಿ. ಬೇಧಗಳನ್ನು ಮರೆತು ಮಾನವೀಯತೆ ಹಾಗೂ ಸಹೋದರತ್ವಗಳು ಗೆಲ್ಲುವಂತಾಗಲಿ. ಅನಂತ ಮೌಲ್ಯಗಳಾದ ಮಾನವೀಯತೆ ಹಾಗೂ ಬಾಂಧವ್ಯಗಳನ್ನು ಮರೆಯದಿರೋಣ.
-ಡಾ| ಜೆರಾಲ್ಡ್‌ ಲೋಬೊ
ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರು

ಭ್ರಾತೃತ್ವದ
ಭಾವ ನೆಲೆಗೊಳ್ಳಲಿ
ಪ್ರಸ್ತುತ ಕೊರೊನಾ ಸಾಂಕ್ರಾಮಿಕದ ಸಂದಿಗ್ಧ ಪರಿಸ್ಥಿತಿಯಲ್ಲಿ ದೇವರು ನಮಗೆ ಹೊಸ ವರ್ಷವನ್ನು ದಯಪಾಲಿಸಿದ್ದಾರೆ. ಈ ನೂತನ ವರ್ಷದಲ್ಲಿ ಶಾಂತಿ ಮತ್ತು ಸಮಾಧಾನವನ್ನು ಹಾಗೂ ಆರ್ಥಿಕ ಮತ್ತಿತರ ಕ್ಷೇತ್ರಗಳಲ್ಲಿ ಸಮೃದ್ಧಿಯನ್ನು ದೇವರು ಕರುಣಿಸಲಿ. ನಮ್ಮೆಲ್ಲರಲ್ಲೂ ಭ್ರಾತೃತ್ವದ ಭಾವನೆ ನೆಲೆಗೊಳ್ಳಲಿ. ಮಾನವರಲ್ಲಿ ಸಹ ಮಾನವತಾ ಗುಣ ಕಾಣಬರಲಿ. ಹೊಸ ವರ್ಷ ಸರ್ವರಿಗೂ ಶುಭವನ್ನು ತರಲಿ ಎಂದು ಹಾರೈಸುತ್ತಾ ದೇವರಲ್ಲಿ ಪ್ರಾರ್ಥಿಸುತ್ತೇನೆ.
-ರೆ| ಎಂ. ಪ್ರಭುರಾಜ್‌, ಸಭಾ ಪಾಲಕರು, ಸಿ.ಎಸ್‌.ಐ. ಶಾಂತಿ ಮಹಾದೇವಾಲಯ, ಬಲ್ಮಠ, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next