ಹೊಸದಿಲ್ಲಿ: ಭಾರತದ ಭೂಪ್ರದೇಶಗಳನ್ನೊಳಗೊಂಡ ನೇಪಾಳದ ವಿವಾದಿತ ನಕ್ಷೆ ಜಾರಿ ಸನ್ನಿಹಿತವಾಗಿದೆ. ನಕ್ಷೆ ನವೀಕರಣ ಸಂಬಂಧ ಕಾನೂನು ಸಚಿವ ಶಿವ ಮಾಯಾ ತುಂಬಹಂಗ್ದೆ, ಸಂವಿಧಾನ ತಿದ್ದುಪಡಿ ಮಸೂದೆಯನ್ನು ರವಿವಾರ ಸದನದಲ್ಲಿ ಮಂಡಿಸಿದ್ದಾರೆ.
ನಕ್ಷೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪ್ರಮುಖ ವಿಪಕ್ಷ ನೇಪಾಲಿ ಕಾಂಗ್ರೆಸ್ ತನ್ನ ನಿಲುವನ್ನು ದಿಢೀರನೆ ಬದಲಿಸಿದ್ದರಿಂದ, ನೇಪಾಲ ಸರಕಾರಕ್ಕೆ “ತಿದ್ದುಪಡಿ’ ದಾರಿ ಸುಗಮವಾಗಿದೆ. ನೇಪಾಳಿ ಕಾಂಗ್ರೆಸ್ ಕೇಂದ್ರ ಸಮಿತಿಯ ಸಭೆಯಲ್ಲಿ ಮಸೂದೆ ಪರವಾಗಿ ಮತ ಚಲಾಯಿಸುವಂತೆ ತನ್ನ ಪಕ್ಷದ ಸಂಸದರಿಗೆ ಶನಿವಾರ ಸೂಚಿಸುತ್ತಿದ್ದಂತೆ, ಕೆ.ಪಿ. ಶರ್ಮಾ ಓಲಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಹಿಂದೇಟು ಹಾಕಿದ್ದೇಕೆ?: ಕೆಲ ದಿನಗಳ ಹಿಂದೆ ನಕ್ಷೆಯ ತಿದ್ದುಪಡಿ ಸಂಬಂಧ, ಅಂಥ ನಿರ್ಧಾರಕ್ಕೆ ಸದ್ಯ ಕೈಹಾಕುವುದಿಲ್ಲ ಎಂದು ನೇಪಾಳದ ಉನ್ನತ ಸಚಿವರೇ ಸ್ಪಷ್ಟಪಡಿಸಿದ್ದರು. ನಕ್ಷೆ ವಿಷಯವನ್ನು ಆಂತರಿಕವಾಗಿ ಚರ್ಚಿಸಲು ವಿಪಕ್ಷ ನೇಪಾಲಿ ಕಾಂಗ್ರೆಸ್ ಹೆಚ್ಚಿನ ಸಮಯ ಕೋರಿದ್ದರಿಂದ ಬುಧವಾರ ಮಸೂದೆ ಮಂಡನೆ ಸಾಧ್ಯವಾಗಿರಲಿಲ್ಲ. ಅಲ್ಲದೆ, ಮಸೂದೆ ಅಂಗೀಕಾರಕ್ಕೆ ಸಂಸತ್ತಿನ 2/3ರಷ್ಟು ಬಹುಮತ ಅಗತ್ಯವಿರುವುದರಿಂದ ಓಲಿ ಸರಕಾರವೂ ಆ ಸಾಹಸಕ್ಕೆ ಮುಂದಾಗಿರಲಿಲ್ಲ. ಕಮ್ಯೂನಿಸ್ಟ್ ಸಿದ್ಧಾಂತವನ್ನು ಒಪ್ಪದ ನೇಪಾಲ ಕಾಂಗ್ರೆಸ್ ನಿರ್ಧಾರ ಬದಲಿಸಿದ್ದೇಕೆ ಎನ್ನುವುದೇ ಈಗ ನಿಗೂಢವಾಗಿದೆ.
ಇನ್ನೊಂದೆಡೆ, ಓಲಿ ಸರಕಾರ ಚೀನವನ್ನು ಹತ್ತಿರವಾಗಿಸಿ ಕೊಳ್ಳಲು ಇಂಥ ನಿರ್ಧಾರಕ್ಕೆ ಕೈಹಾಕುತ್ತಿದೆ ಎನ್ನಲಾಗುತ್ತಿದೆ.