ಸಿನಿಮಾ ಬಿಡುಗಡೆಗೆ ಅನುಮತಿ ಕೊಟ್ಟು ಹದಿನೈದು ಕಳೆದರೂ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗಲೇ ಇಲ್ಲ. ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುತ್ತದೆ ಎಂದು ಘೋಷಿಸಿಕೊಂಡಿದ್ದ ಒಂದಷ್ಟು ಸಿನಿಮಾಗಳು ಬಿಡುಗಡೆಯನ್ನು ಮುಂದಕ್ಕೆಹಾಕಿವೆ. ಈಗ ಚಿತ್ರರಂಗ ನವೆಂಬರ್ ನಿರೀಕ್ಷೆಯಲ್ಲಿದೆ. ನವೆಂಬರ್‌ನಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಚಿತ್ರರಂಗದಲ್ಲಿ ಹೊಸ ಸಿನಿಮಾಗಳ ಬಿಡುಗಡೆ ಬೋಣಿ ಆಗಲಿದೆ.
ಸ್ಟಾರ್ ಗಳು ಹೊಸ ವರ್ಷಕ್ಕೆ ಬರಲು ಅಣಿಯಾಗಿದ್ದರೆ ಹೊಸಬರು ಮಾತ್ರ ನವೆಂಬರ್‌ನಿಂದಲೇ ಪ್ರೇಕ್ಷಕರಿಗೆ ಮನರಂಜನೆ ಒದಗಿಸಲು ಸಿದ್ಧರಾಗಿದ್ದಾರೆ. ಸಾಲು ಸಾಲು ಹೊಸಬರ ಚಿತ್ರಗಳು ನವೆಂಬರ್ ಬಿಡುಗಡೆಗೆ ಸರತಿಯಲ್ಲಿವೆ. ವಿಶೇಷವೆಂದರೆ ಇದರಲ್ಲಿ ಸಾಕಷ್ಟುಹೊಸ ಪ್ರಯೋಗದ ಚಿತ್ರಗಳುಕೂಡಾ ಇವೆ. ಈ ಮೂಲಕ ವಿಭಿನ್ನ ಪ್ರಯೋಗಗಳನ್ನು ಇಷ್ಟಡುವವರಿಗೆಈ ಚಿತ್ರಗಳು ಖುಷಿಕೊಡಲಿವೆ. ಅಷ್ಟಕ್ಕೂ ಯಾವ್ಯಾವ ಚಿತ್ರಗಳು ನವೆಂಬರ್‌ನಲ್ಲಿ ಬಿಡುಗಡೆಯಾಗಲಿವೆ ಎಂದು ನೋಡೋದಾದರೆ “ಆಕ್ಟ್ 1978′, “ಮಹಿಷಾಸುರ’, “ಎವಿಡೆನ್ಸ್’, , “ಅಮೃತಾ ಅಪಾರ್ಟ್ ಮೆಂಟ್’, “ಮುಖವಾಡ’ … ಹೀಗೆ ಸಾಕಷ್ಟು ಹೊಸಬರ ಚಿತ್ರಗಳು ಬಿಡುಗಡೆಯಾಗಲಿವೆ. ಈ ಮೂಲಕ ಚಿತ್ರರಂಗದಲ್ಲಿ ಹೊಸ ಸಿನಿಮಾದತ್ತ ಪ್ರೇಕ್ಷಕರನ್ನು ಸೆಳೆಯಲಿವೆ.
ಚಿತ್ರರಂಗದಲ್ಲಿ ವ್ಯಾಪಾರ ವಹಿವಾಟಿನ ದೃಷ್ಟಿಯಲ್ಲಿ ಸ್ಟಾರ್‌ಗಳ ಸಿನಿಮಾ ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತದೋ, ಅದೇ ರೀತಿ ವರ್ಷವಿಡೀಚಿತ್ರರಂಗವನ್ನು ಸದಾ ಚಲನಾಶೀಲವನ್ನಾಗಿಡುವಲ್ಲಿ ಹೊಸಬರ ಪ್ರಯತ್ನ ಮಹತ್ವದ್ದು. ವರ್ಷಕ್ಕೆ ಸ್ಟಾರ್‌ಗಳ ಹತ್ತು ಸಿನಿಮಾ ರಿಲೀಸ್ ಆದರೆ ಮಿಕ್ಕಂತೆ ಇಡೀ ವರ್ಷ ಚಿತ್ರರಂಗವನ್ನು ಕಲರ್‌ಫುಲ್ ಆಗಿರುವಂತೆ ನೋಡಿಕೊಳ್ಳೋದು ಹೊಸಬರು. ಕಳೆದ ವರ್ಷ 220ಕ್ಕೂ ಹೆಚ್ಚು ಚಿತ್ರಗಳು ತೆರೆಕಂಡಿದ್ದವು. ಅದರಲ್ಲಿ ಸ್ಟಾರ್ ಗಳ ಸಿನಿಮಾ ಬೆರಳೆಣಿಕೆಯಷ್ಟು. ಮಿಕ್ಕಂತೆ ಹೊಸಬರೇ ಮೇಲುಗೈ. ಸೋಲು-ಗೆಲುವು ಏನೇ ಇರಲಿ, ಗಟ್ಟಿ ಧೈರ್ಯ ಮಾಡಿ, ಚಿತ್ರರಂಗಕ್ಕೆ ಬರುವವರು ಮತ್ತು ಸಿನಿಮಾದಲ್ಲೇ ಗೆಲ್ಲಬೇಕೆಂದು ಹೊಸಬರು ಕನಸು ಕಾಣುತ್ತಾರೆ. ಪರಿಣಾಮವಾಗಿ, ಸಾಲು ಸಾಲು ಸಿನಿಮಾಗಳು ಸೆಟ್ಟೇರುತ್ತವೆ. ಕಲಾವಿದರಿಂದ ಹಿಡಿದು ಕಾರ್ಮಿಕರವರೆಗೆ ಕೆಲಸ ಸಿಗುತ್ತವೆ.
ಚಿತ್ರಮಂದಿರಗಳಿಗೂ ವಾರ ವಾರ ಸಿನಿಮಾ ಸಿಗುವಂವಾಗುವಲ್ಲಿ ಹೊಸಬರ ಪಾಲು ಮಹತ್ವದ್ದು.ಈಗ ಮತ್ತೆ ಚಿತ್ರರಂಗ ಹೊಸಬರತ್ತ ನೋಡುತ್ತಿದೆ.ನವೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ಚಿತ್ರರಂಗದಲ್ಲಿ ಶುಭ ಸುದ್ದಿ ನೀಡುತ್ತಾರೆಂಬ ನಿರೀಕ್ಷೆ ಇದೆ. ಇಂತಹ ಹೊಸಬರಿಗೆ ಬೇಕಾಗಿರೋದು ಪ್ರೇಕ್ಷಕರ ಬೆಂಬಲ. ಪ್ರೇಕ್ಷಕರು ಹೊಸಬರನ್ನು ಪ್ರೋತ್ಸಾಹಿಸಿದರೆ, ಅವರ ಉತ್ಸಾಹ ಹೆಚ್ಚಾಗುತ್ತದೆ.ಮತ್ತಷ್ಟು ಮಂದಿ ಸಿನಿಮಾ ಬಿಡುಗಡೆಗೆ ಮುಂದಾಗುತ್ತಾರೆ. ಈ ಮೂಲಕ ಚಿತ್ರರಂಗದಲ್ಲಿ ಬಿಡುಗಡೆಯ ಪರ್ವ ಆರಂಭವಾಗುತ್ತದೆ.