ಕೋಸ್ಟಲ್‌ವುಡ್‌ನಲ್ಲಿ ಯಾರೂ ನಿರೀಕ್ಷಿಸದ ಸಾಧನೆ ಮಾಡಿದ ರೂಪೇಶ್ ಶೆಟ್ಟಿ ಅವರ “ಗಿರಿಗಿಟ್’ ಸಿನೆಮಾ ಈಗಲೂ ಕೆಲವು ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ಒಂದೊಮ್ಮೆ ತುಳು ಸಿನೆಮಾಗಳಿಗೆ ಪ್ರೇಕ್ಷಕರಿಲ್ಲ ಎಂಬ ಅಪವಾದವನ್ನು ದೂರ ಮಾಡಿದ ರೂಪೇಶ್ ಶೆಟ್ಟಿ ತಂಡ “ಗಿರಿಗಿಟ್’ ಮೂಲಕ ಜಾದೂ ಮಾಡಿದೆ.
ಅಂದ ಹಾಗೆ, ಸಕ್ಸಸ್ ಬರೆದ ಗಿರಿಗಿಟ್ ನಿರ್ದೇಶಕ ರೂಪೇಶ್ ಶೆಟ್ಟಿ ಅವರ ಮುಂದಿನ ಯೋಚನೆ ಏನು?ಎಂಬ ಪ್ರಶ್ನೆ ಬಹುತೇಕ ಪ್ರೇಕ್ಷಕರನ್ನು ಕಾಡುತ್ತಿದೆ. “ಗಿರಿಗಿಟ್’ನಂತಹ ಸೂಪರ್ ಮೂವಿ ನೀಡಿದ ಅವರು ಮುಂದೆ ಏನು ಮಾಡಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ “ಕುಡ್ಲ ಟಾಕೀಸ್’ ಜತೆಗೆ ರೂಪೇಶ್ ಶೆಟ್ಟಿ ಮಾತನಾಡಿದ್ದಾರೆ.
“ಗಿರಿಗಿಟ್’ ಕೋಸ್ಟಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಬರೆದಿದೆ. ದೇಶ-ವಿದೇಶದಲ್ಲಿಯೂ ಉತ್ತಮ ಸ್ಪಂದನೆ ಕಂಡಿದೆ. ದ.ಕ., ಉಡುಪಿ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ಭಾಗದಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಮುಂದೆ “ಗಿರಿಗಿಟ್-2′ ಸಿನೆಮಾ ಮಾಡುವ ಬಗ್ಗೆ ಬಹುಜನರಿಂದ ಆಗ್ರಹ ಬಂದಿದೆ. ಆದರೆ ಈ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಇದರ ಜತೆಗೆ ಹೊಸ ತುಳು ಸಿನೆಮಾ ಮಾಡಬೇಕು ಎಂಬ ಬಗ್ಗೆಯೂ ಒತ್ತಾಸೆ ನಮ್ಮ ತಂಡಕ್ಕಿದೆ. ಹೀಗಾಗಿ “ಗಿರಿಗಿಟ್-2′ ಮೊದಲು ಮಾಡಬೇಕಾ? ಅಥವಾ ಹೊಸ ಸಿನೆಮಾ ಮಾಡಬೇಕಾ? ಎಂಬ ಪ್ರಶ್ನೆ ನಮ್ಮಲ್ಲಿ ಕಾಡುತ್ತಿದೆ. ಯಾವುದು ಮೊದಲು ಎಂಬ ಬಗ್ಗೆ ಇನ್ನೂ ಫೈನಲ್ ಆಗಿಲ್ಲ’ ಅನ್ನುತ್ತಾರೆ.
“2020ರಲ್ಲಿ ನಮ್ಮದೇ ತಂಡದ ಸಿನೆಮಾವನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬ ಕಾರಣದಿಂದ ಈಗಾಗಲೇ ಒಂದು ಹಂತದ ತಯಾರಿ ಮಾಡಿದ್ದೇವೆ. ಅದರಂತೆ, “ಗಿರಿಗಿಟ್-2′ ಸಿನೆಮಾದ ಸ್ಕ್ರಿಪ್ಟ್ ಅನ್ನು ಶೇ.40ರಷ್ಟು ಪೂರ್ಣಗೊಳಿಸಿದ್ದೇವೆ. ಜತೆಗೆ ಹೊಸ ಕಾನ್ಸೆಪ್ಟ್ನ ಸಿನೆಮಾದ ಸ್ಕ್ರಿಪ್ಟ್ ಅನ್ನು ಶೇ.60ರಷ್ಟು ಪೂರ್ಣಗೊಳಿಸಿದ್ದೇವೆ. ಸದ್ಯ ಈ ಎರಡೂ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. “ಗಿರಿಗಿಟ್’ ಸಿನೆಮಾದಲ್ಲಿ ಸ್ಕ್ರಿಪ್ಟ್ ಕೆಲಸ ಮಾಡಿದವರೇ ಈ ಕೆಲಸದಲ್ಲೂ ಇದ್ದಾರೆ. ಮುಂದಿನ 2-3 ತಿಂಗಳೊಳಗೆ ಎರಡೂ ಸ್ಕ್ರಿಪ್ಟ್ ಫೈನಲ್ ಮಾಡಿ ಯಾವುದು ಮೊದಲು ಎಂಬುದನ್ನು ಅಂತಿಮಗೊಳಿಸಲಿದ್ದೇವೆ. ಸಿನೆಮಾ ನಿರ್ದೇಶನ ನಾನೇ ಮಾಡಬೇಕಾ? ಅಥವಾ ಬೇರೆಯವರಾ? ಎನ್ನುವುದು ಕೂಡ ಫೈನಲ್ ಆಗಿಲ್ಲ’ ಎನ್ನುತ್ತಾರೆ ರೂಪೇಶ್.
“ವಿಶೇಷವೆಂದರೆ “ಗಿರಿಗಿಟ್’ ಸಿನೆಮಾದ ಯಶಸ್ಸಿನಿಂದಾಗಿ ಶೈಲೇಂದ್ರ ಬಾಬು ನಿರ್ಮಾಣದ ಅದ್ದೂರಿ ಬಜೆಟ್‌ನ ಹೊಸ ಸಿನೆಮಾದಲ್ಲಿ ಹೀರೋ ಆಗಿ ಅಭಿನಯಿಸುವ ಅವಕಾಶ ದೊರಕಿದೆ. ಭಾವನಾ ಮೆನನ್ ಜತೆಗಿರಲಿದ್ದಾರೆ. ಈಗಾಗಲೇ ಪ್ರಥಮ ಹಂತದ ಶೂಟಿಂಗ್ ಮುಗಿದಿದ್ದು, ಎರಡನೇ ಹಂತದ ಶೂಟಿಂಗ್ ಕೆಲವೇ ದಿನದಲ್ಲಿ ಆರಂಭವಾಗಲಿದೆ. ಜತೆಗೆ, ನನ್ನದೇ ಅಭಿನಯದ ತುಳುವಿನ “ಲಾಸ್ಟ್‌ಬೆಂಚ್’ ಎಂಬ ಸಿನೆಮಾ ಕೂಡ ಬಿಡುಗಡೆ ಆಗಬೇಕಿದೆ. ಅದರ ಮಧ್ಯೆಯೇ ಗಿರಿಗಿಟ್ ಸಕ್ಸಸ್ ಆಗಿರುವುದನ್ನು ಕಂಡು ಇದೇ ಟೀಮ್‌ನಲ್ಲಿ ವರ್ಷಕ್ಕೆ ಒಂದು ತುಳು ಸಿನೆಮಾ ಮಾಡಬೇಕು ಎಂಬ ಬಗ್ಗೆ ಯೋಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ನಿರ್ಮಾಪಕರು ಕೂಡ ಮನಸ್ಸು ಮಾಡಿದ್ದಾರೆ. ತುಳುವಿನಲ್ಲಿ ವರ್ಷಕ್ಕೊಂದು ನೀಟ್ ಆದ ಸಿನೆಮಾವನ್ನು “ಗಿರಿಗಿಟ್’ ಟೀಮ್ ಮೂಲಕವೇ ಮಾಡಲಿದ್ದೇವೆ’ ಎನ್ನುವುದು ರೂಪೇಶ್ ಅಭಿಪ್ರಾಯ.
- ದಿನೇಶ್ ಇರಾ