Advertisement

ವರಮಹಾಲಕ್ಷ್ಮೀ ಹಬ್ಬಕ್ಕೆ ಹೊಸ ಸಿನಿಮಾಗಳು

10:51 AM Jul 31, 2017 | |

ಆಷಾಢ ಮುಗಿದಿದೆ. ಶ್ರಾವಣ ಶುರುವಾಗಿದೆ. ಶ್ರಾವಣ ಶುಭ ಸಂಕೇತ. ಬಹುತೇಕ ಒಳ್ಳೆಯ ಕೆಲಸಗಳಿಗೆ ಶ್ರಾವಣ ಆಯ್ಕೆ ಸೂಕ್ತ. ಅದರಲ್ಲೂ ಸಿನಿಮಾ ಮಂದಿಗೆ ಶ್ರಾವಣ ಅಂದರೆ, ಎಲ್ಲಿಲ್ಲದ ಭಕ್ತಿ ಮತ್ತು ಪ್ರೀತಿ. ಯಾಕೆಂದರೆ, ಹೊಸ ಸಿನಿಮಾಗಳು ಶ್ರಾವಣ ಮಾಸದಲ್ಲೇ ಸೆಟ್ಟೇರುತ್ತವೆ.

Advertisement

ಶ್ರಾವಣ ಬರೋವರೆಗೆ ಕಾಯುವ ಸಿನಿಮಾ ಮಂದಿ ಹೆಚ್ಚು ಸಿನಿಮಾಗಳ ಮುಹೂರ್ತ ನಡೆಸುತ್ತಾರೆ. ಆಷಾಢದಲ್ಲಿ ಸಿನಿಮಾ ರಂಗ ಕೊಂಚ ಲವಲವಿಕೆ ಕಳಕೊಂಡಿರುತ್ತೆ. ಶ್ರಾವಣ ಬಂತೆಂದರೆ ಸಾಕು, ಗಾಂಧಿನಗರ ಗರಿಗೆದರುತ್ತೆ. ಈಗ ಶ್ರಾವಣ ಶುರುವಾಗಿದ್ದು, ಆಗಸ್ಟ್‌ 4 ರಂದು ವರಮಹಾಲಕ್ಷ್ಮೀ ಹಬ್ಬವೂ ಇದೆ. ಅಂದು ಬೆರಳೆಣಿಕೆ ಸಿನಿಮಾಗಳು ಸೆಟ್ಟೇರುತ್ತಿವೆ. ಆ ಬಗ್ಗೆ ಒಂದು ವರದಿ.

“ಕಿರಿಕ್‌ಪಾರ್ಟಿ’ ಬೆಡಗಿ ಸಂಯುಕ್ತಾ ಹೆಗಡೆ ಅಭಿನಯದ ಹೊಸ ಚಿತ್ರವೊಂದು ಆ.4 ರಂದು ಸೆಟ್ಟೇರುತ್ತಿದೆ. ಆ ಚಿತ್ರಕ್ಕೆ “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಎಂಬ ಹೆಸರು ಇಡಲಾಗಿದೆ. ಆ ಚಿತ್ರವನ್ನು ಶ್ರೀನಾಗ್‌ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಶ್ರೀನಾಗ್‌, “ನಿತ್ಯ ಜೊತೆ ಸತ್ಯ’ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈಗ “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಎಂಬ ಚಿತ್ರಕ್ಕೆ ಕೈ ಹಾಕಿದ್ದಾರೆ.

ಇನ್ನು, ಈ ಚಿತ್ರದ ನಾಯಕಿ ಸಂಯುಕ್ತಾ ಹೆಗಡೆ ಅವರಿಗೆ ಪ್ರಭು ಮುಂದ್ಕರ್‌ ನಾಯಕರಾಗಿದ್ದಾರೆ. ಪ್ರಭು ಈ ಹಿಂದೆ “ಉರ್ವಿ’ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದರು. ಇನ್ನು, ಚಿತ್ರದಲ್ಲಿ ಅರವಿಂದ್‌ ಸೇರಿದಂತೆ ಬಹುತೇಕ ಕಲಾವಿದರು ನಟಿಸುತ್ತಿದ್ದಾರೆ. “ರೋಲಿಂಗ್‌ ಡ್ರೀಮ್ಸ್‌’ ಬ್ಯಾನರ್‌ನಡಿ ವಿಜಯಕುಮಾರ್‌, ಸುರೇಶ್‌ಕುಮಾರ್‌ ಹಾಗೂ ಪ್ರವೀಣ್‌ರಾಜ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 

ಇನ್ನು, ಈಗಾಗಲೇ ತಿಳಿದಿರುವಂತೆ, ಯೋಗರಾಜ್‌ಭಟ್‌ ಶಿಷ್ಯ ಮಹೇಶ್‌ ನಿರ್ದೇಶನದ “ಅಯೋಗ್ಯ’ ಸಿನಿಮಾ ಕೂಡ ವರಮಹಾಲಕ್ಷ್ಮೀ ಹಬ್ಬದಂದು ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ನೀನಾಸಂ ಸತೀಶ ನಾಯಕರಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಯಲಿರುವ ಈ ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ, ರಂಗಾಯಣ ರಘು, ರವಿಶಂಕರ್‌ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

Advertisement

ವಿಶೇಷವೆಂದರೆ, ಹಿರಿಯ ನಟಿ ಸರಿತಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಕಾಮಿಡಿ ಸಿನಿಮಾ ಆಗಿದ್ದು, ಹಿನ್ನೆಲೆಯಲ್ಲಿ ಒಂದು ಸಂದೇಶ ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕರು. ಹಳ್ಳಿಗಳಲ್ಲಿ ಜನ ಇನ್ನೂ ಬಹಿರ್ದೆಸೆಗೆ ಬಯಲಿಗೆ ಹೋಗುವುದರ ಕುರಿತು ಮತ್ತು ಎದುರಿಸುತ್ತಿರುವ ನೂರಾರು ಸಮಸ್ಯೆಗಳ ಬಗ್ಗೆ ಅವರು ಈ ಚಿತ್ರದಲ್ಲಿ ಬೆಳಕು ಚೆಲ್ಲಲಿದ್ದಾರಂತೆ. ಅಂದಹಾಗೆ, ಈ ಚಿತ್ರವನ್ನು ಸೃಷ್ಠಿ ಎಂಟರ್‌ಪ್ರೈಸಸ್‌ನಡಿ ಸುರೇಶ್‌ ಬಿ.ಸಿ ಮತ್ತು ಎಸ್‌.ಕೆ. ಮೋಹನ್‌ ಕುಮಾರ್‌ ಅವರು ನಿರ್ಮಿಸುತ್ತಿದ್ದಾರಂತೆ.

ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದರೆ, ಪ್ರೀತಂ ಎನ್ನುವವರು ಛಾಯಾಗ್ರಹಣ ಮಾಡುತ್ತಿದ್ದಾರೆ.  ಯೋಗರಾಜ್‌ ಭಟ್‌ ಹಾಡುಗಳನ್ನು ಬರೆಯುವುದರ ಜೊತೆಗೆ ಚಿತ್ರವನ್ನೂ ಅರ್ಪಿಸುತ್ತಿದ್ದಾರೆ. ಇದರೊಂದಿಗೆ ಹೊಸಬರ “ಟುಡೇ’ ಎಂಬ ಚಿತ್ರವೂ ಕೂಡ ವರಮಹಾಲಕ್ಷ್ಮೀ ಹಬ್ಬದಂದೇ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ತಿಮ್ಮಂಪಲ್ಲಿ ಚಂದ್ರ ನಿರ್ದೇಶಕರು. ಚಿತ್ರದಲ್ಲಿ ದಶರಥ ಹಾಗೂ ಸುಬ್ರಮಣಿ ಎಂಬ ಹೊಸ ಪ್ರತಿಭೆಗಳು ನಾಯಕರಾಗಿ ಕಾಣಿಸಿಕೊಳ್ಳುತ್ತಿವೆ.

ಇನ್ನು, “ದ್ವಂದ್ವ’ ಎಂಬ ಇನ್ನೊಂದು ಹೊಸ ಚಿತ್ರವೂ ಶುರುವಾಗುತ್ತಿದೆ. ಈ ಚಿತ್ರಕ್ಕೆ ಡಾ.ವಿಜಯಕುಮಾರ್‌ ನಿರ್ದೇಶಕರು. ಅಷ್ಟೇ ಅಲ್ಲ, ನಾಯಕ ಹಾಗೂ ನಿರ್ಮಾಪಕರೂ ಅವರೇ. ಡಾ.ವಿಜಯಕುಮಾರ್‌ ಅವರು ಹಿಂದೆ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿದ್ದರು. ಈಗ ಅವರೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಐಶ್ವರ್ಯ ನಾಯಕಿಯಾದರೆ, ಈ ಸಿನಿಮಾದಲ್ಲಿ ಕಲಾವಿದ ಗಣೇಶ್‌ರಾವ್‌ ಸಹ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಲೆಕ್ಕಕ್ಕೆ ಸಿಕ್ಕ ಚಿತ್ರಗಳಿವು. ಇನ್ನು ಗೊತ್ತಿಲ್ಲದಂತೆ ಶುರುವಾಗುವ ಎಷ್ಟೋ ಹೊಸಬರ ಸಿನಿಮಾಗಳೂ ಇವೆ. ಅಂತೂ ವರಮಹಾಲಕ್ಷ್ಮೀ ಹಬ್ಬದಂದು ಹೊಸ ಚಿತ್ರ ಸೆಟ್ಟೇರುವುದಷ್ಟೇ ಅಲ್ಲ, ಒಂದಷ್ಟು ಸಿನಿಮಾಗಳು ಬಿಡುಗಡೆಯೂ ಆಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next