ಇಟ್ನಾಗರ: ಭಾರತ ಮತ್ತು ಚೀನ ನಡುವಿನ ಗಡಿ ಪ್ರದೇಶದ ಅತ್ಯಂತ ಎತ್ತರದ ಸ್ಥಳಗಳಲ್ಲಿ ನಿಯೋಜಿತವಾಗಿರುವ ಯೋಧರಿಗಾಗಿಯೇ ಸೇನೆಯ ಇಂಜಿನಿಯರ್‌ಗಳು ಹೊಸ ರೀತಿಯ ಮಾದರಿ ಸೇನಾ ಶಿಬಿರವನ್ನು ನಿರ್ಮಿಸಿದ್ದಾರೆ.
ಸದ್ಯ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಮೊದಲ ಮಾದರಿ ಶಿಬಿರ ನಿರ್ಮಿಸಲಾಗಿದೆ. ಈ ಡಿಸೆಂಬರ್‌ನೊಳಗೆ ಇನ್ನೆರೆಡು ಶಿಬಿರಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಶಿಬಿರಗಳು ಹೆಚ್ಚು ವಿಸ್ತಾರವಾಗಿವೆ. ಹಾಗೆಯೇ ಚಳಿ, ಗಾಳಿಯಂತಹ ಹವಾಮಾನಗಳಿಂದ ಯೋಧರಿಗೆ ರಕ್ಷಣೆ ನೀಡುತ್ತದೆ. ಸೌರಶಕ್ತಿ ಆಧಾರಿತ ವಿದ್ಯುತ್‌ಶಕ್ತಿ ಶಿಬಿರದಲ್ಲಿದೆ. ಎರಡು ಅಂತಸ್ತಿನ ಮನೆಯಂತೆ ಕಾಣುವ ಈ ಶಿಬಿರದಲ್ಲಿ 30 ಯೋಧರು ವಾಸವಿರಬಹುದು ಎಂದು ತಿಳಿಸಲಾಗಿದೆ.
ಅತ್ಯಂತ ಎತ್ತರದ ಪ್ರದೇಶದಲ್ಲಿ ಈ ಶಿಬಿರ ನಿರ್ಮಾಣ ಕೆಲಸವು ಇಂಜಿನಿಯರ್‌ಗಳಿಗೆ ದೊಡ್ಡ ಸವಾಲಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಹೆಚ್ಚು ಕಾಲ ರಸ್ತೆ ಸಂಚಾರ ಸ್ಥಗಿತವಾಗಿರುತ್ತಿದ್ದರಿಂದ ಸಾಮಾಗ್ರಿ ಸ್ಥಳಾಂತರ ಮಾಡುವುದೂ ಕಷ್ಟವಾಗುತ್ತಿತ್ತು. ಈ ಮೊದಲ ಪ್ರಾಯೋಗಿಕ ಶಿಬಿರದ ಕಾಮಗಾರಿಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.