ಚಿಕ್ಕಬಳ್ಳಾಪುರ: ಖಾತೆ ಹಂಚಿಕೆ ಬಗ್ಗೆ ನನಗೆ ಯಾವುದೇ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಶನಿವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ಪೀಕರಿಸಿರುವ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಡಾ.ಎಂ.ಸಿ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಸಚಿವರಾದ ಬಳಿಕ ಮೊದಲ ಬಾರಿಗೆ ತಮ್ಮ ತವರು ಕ್ಷೇತ್ರ ಚಿಂತಾಮಣಿಗೆ ಆಗಮಿಸಿದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಮಗೆ ಯಾವ ಖಾತೆ ಕೊಡಲಾಗಿದೆಯೆಂಬ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನೂತನ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರತಿಕ್ರಿಯಿಸಿ ನನಗೆ ಕೊಟ್ಟಿರುವ ಖಾತೆ ಬಗ್ಗೆ ನನಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ ಎಂದರು.
ರಾಜ್ಯಪಾಲರು ಖಾಸಗಿ ಕಾರ್ಯಕ್ರಮಕ್ಕೆ ರಾಜ್ಯದಿಂದ ಹೊರಗೆ ಹೋಗಿದ್ದಾರೆ. ಮುಖ್ಯಮಂತ್ರಿಗಳು ಪಟ್ಟಿ ರವಾನೆ ಮಾಡಿದ್ದಾರೆ. ಆದರೆ ನಿಖರವಾಗಿ ಯಾವ ಖಾತೆ ಬಗ್ಗೆ ಸ್ಪಷ್ಟತೆ ಇಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಉಹಾಪೋಹ. ರಾಜ್ಯಪಾಲರು ಇನ್ನೂ ಸಚಿವರಿಗೆ ನೀಡಿರುವ ಖಾತೆಗಳಿಗೆ ಅಂಕಿತ ಹಾಕಿಲ್ಲ ಎಂದು ನೂತನ ಸಚಿವ ಸುಧಾಕರ್ ಸ್ಪಷ್ಟಪಡಿಸಿದರು.
ಸಚಿವರಿಗೆ ಅದ್ದೂರಿಗೆ ಸ್ವಾಗತ: ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಯ ತಮ್ಮ ತವರು ಕ್ಷೇತ್ರ ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಭಾನುವಾರ ಆಗಮಿಸಿದ ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರಲ್ಲದೇ ಹೆಗಲ ಮೇಲೆ ಹೊತ್ತು ಸಚಿವರನ್ನು ಕುಣಿದು ಕುಪ್ಪಳಿಸಿದರು.
ಬೆಳಗ್ಗೆ ಬೆಂಗಳೂರಿನಿಂದ ನೇರವಾಗಿ ಚಿಂತಾಮಣಿ ಕ್ಷೇತ್ರಕ್ಕೆ ಆಗಮಿಸಿದ ನೂತನ ಸಚಿವ ಡಾ.ಎಂ.ಸಿ.ಸುಧಾಕರ್. ಚಿಂತಾಮಣಿ ತಾಲೂಕಿಗೆ ಪ್ರವೇಶಿಸುವ ಮುನ್ನ ಶಿಡ್ಲಘಟ್ಟ ತಾಲೂಕಿನ ಹೆಚ್.ಕ್ರಾಸ್ ಬಳಿ ಇರುವ ಶನಿಮಹಾತ್ಮ ದೇವಾಲಯಕ್ಕೆ ತೆರಳಿ ದೇವಿ ದರ್ಶನ ಪಡೆದರು. ಬಳಿಕ ಕೈವಾರ ಮಠ, ಮುರಗಮಲ್ಲ ಮುಕ್ತೀಶ್ವರ, ದರ್ಗಾಗೆ ಬೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.