Advertisement

28ರಂದು ಹೊಸ ಮೇಯರ್‌ ಆಯ್ಕೆ

12:19 PM Sep 04, 2018 | |

ಬೆಂಗಳೂರು: ಬಿಬಿಎಂಪಿ ಮೇಯರ್‌, ಉಪಮೇಯರ್‌ ಆಯ್ಕೆಗೆ ಸೆಪ್ಟೆಂಬರ್‌ 28ರಂದು  ಚುನಾವಣೆ ನಡೆಸಲು ದಿನಾಂಕ ನಿಗದಿಗೊಳಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ ಅವರು ಅಧಿಸೂಚನೆ ಹೊರಡಿಸಿದ್ದಾರೆ. 

Advertisement

ಮೇಯರ್‌ ಆರ್‌.ಸಂಪತ್‌ರಾಜ್‌ ಅವರ ಒಂದು ವರ್ಷದ ಅಧಿಕಾರವಧಿಗೆ ಸೆ.27ಕ್ಕೆ ಮುಗಿಯಲಿರುವ ಹಿನ್ನೆಲೆಯಲ್ಲಿ ಸೆ.28ರಂದು ಬೆಳಗ್ಗೆ 11.30ಕ್ಕೆ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅದರಂತೆ ಈಗಾಗಲೇ ಚುನಾವಣೆಯ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಪಟ್ಟಿಯಲ್ಲಿ ಒಟ್ಟು 259 ಮತದಾರರಿದ್ದಾರೆ. ಸರಳ ಬಹುಮತಕ್ಕಾಗಿ 130 ಮತಗಳನ್ನು ಪಡೆಯಬೇಕಿದೆ.

ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೇಯರ್‌ ಹಾಗೂ ಉಪಮೇಯರ್‌ ಅವಧಿ ಪೂರ್ಣಗೊಂಡ ಮರು ದಿನವೇ ಚುನಾವಣೆ ನಡೆಸಲಾಗುತ್ತಿದೆ. 2017ರ ಸೆ.28ರಂದು ಸಂಪತ್‌ರಾಜ್‌ ಮೇಯರ್‌ ಹಾಗೂ ಪದ್ಮಾವತಿ ಉಪಮೇಯರ್‌ ಆಗಿ ಆಯ್ಕೆಯಾಗಿದ್ದರು. ಅದರಂತೆ ಅವರ ಅವಧಿ ಸೆ.27ಕ್ಕೆ ಪೂರ್ಣಗೊಳ್ಳಲಿದೆ. 

ಮತದಾರರ ಪಟ್ಟಿಯಂತೆ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಂಖ್ಯೆ ಹೆಚ್ಚಿರುವುದರಿಂದ ಈ ಬಾರಿಯೂ ಪಾಲಿಕೆಯ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವೆನ್ನಲಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಸಂಖ್ಯೆ 128, ಬಿಜೆಪಿ 123 ಸದಸ್ಯರಿದ್ದು, 8 ಮಂದಿ ಪಕ್ಷೇತರರಿದ್ದು, ಚುನಾವಣೆಯಲ್ಲಿ ಅವರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. 

ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಕ್ಕಾಗಿ ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದರೆ ಬಿಜೆಪಿ ಸಂಖ್ಯೆ 131 ಆಗಲಿದೆ. ಆಗ ಮ್ಯಾಜಿಕ್‌ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆ ಬಿಜೆಪಿಗೆ ದೊರೆತು, ಸುಲಭವಾಗಿ ಮೇಯರ್‌ ಮತ್ತು ಉಪಮೇಯರ್‌ ಹುದ್ದೆ ಪಡೆಯಬಹುದಾಗಿದೆ. ಆದರೆ, ಪಕ್ಷೇತರರಲ್ಲಿ ಇಬ್ಬರು ಮೂಲ ಕಾಂಗ್ರೆಸ್‌ ಸದಸ್ಯರು ಇರುವುದರಿಂದ ಬಿಜೆಪಿ ಅಧಿಕಾರಿ ಪಡೆಯುವುದು ಕಷ್ಟ ಎನ್ನಲಾಗಿದೆ.

Advertisement

ಮತ ಇಲ್ಲಿ, ಅನುದಾನ ಅಲ್ಲಿ: ಕೆಲ ವಿಧಾನ ಪರಿಷತ್‌ ಹಾಗೂ ರಾಜ್ಯಸಭಾ ಸದಸ್ಯರು ಬಿಬಿಎಂಪಿ ಮೇಯರ್‌ ಚುನಾವಣೆಯಲ್ಲಿ ಮತದಾನ ಮಾಡಿದರೆ, ತಮ್ಮ ಅನುದಾನವನ್ನು ಮಾತ್ರ ತಮ್ಮ ಮೂಲ ಕ್ಷೇತ್ರಗಳಿಗೆ ನೀಡುತ್ತಿದ್ದಾರೆ.

ವಿಧಾನ ಪರಿಷತ್‌ ಸದಸ್ಯರಾದ ರಘು ಆಚಾರ್‌ ಚಿತ್ರದುರ್ಗ ಹಾಗೂ ಸಿ.ಆರ್‌.ಮನೋಹರ್‌ ಅವರು ಕೋಲಾರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿದ್ದಾರೆ. ಅದೇ ರೀತಿ ಉಗ್ರಪ್ಪ ಅವರ ಕ್ಷೇತ್ರ ತುಮಕೂರು ಆಗಿದೆ. ಆದರೆ, ನಗರದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಂದಾಗದ ಅವರು ಪಾಲಿಕೆಯಲ್ಲಿ ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿ ಮತದಾನ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ.

ಅದೇ ರೀತಿ ರಾಜ್ಯಸಭಾ ಸದಸ್ಯರಾದ ಜೈರಾಮ್‌ ರಮೇಶ್‌ ಅವರೂ ಸಹ ಚಿಕ್ಕಮಗಳೂರಿನಿಂದ ಆಯ್ಕೆಯಾಗಿದ್ದಾರೆ. ಅವರ ಸಂಸದರ ಅನುದಾನವನ್ನೂ ಸಹ ಅದೇ ಕ್ಷೇತ್ರಕ್ಕೆ ಖರ್ಚು ಮಾಡುತ್ತಿದ್ದಾರೆ. ಆದರೆ, ಮತದಾನ ಮಾತ್ರ ಬಿಬಿಎಂಪಿಯಲ್ಲಿ ಮಾಡುತ್ತಾರೆ. ಆದರೆ, ಇವರ್ಯಾರೂ ಪಾಲಿಕೆಯ ಒಂದೂ ಸಭೆಗೂ ಹಾಜರಾಗಿ ಇಲ್ಲಿನ ಸಮಸ್ಯೆಗಳ ಕುರಿತು ತಿಳಿಯಲು ಮುಂದಾಗಿಲ್ಲ ಎಂದು ದೂರಿದರು. 

ಮತದಾರರ ವಿಂಗಡಣೆ
-ಪಾಲಿಕೆ ಸದಸ್ಯರು 198
-ಶಾಸಕರು 28
-ಸಂಸದರು 5
-ರಾಜ್ಯಸಭಾ ಸದಸ್ಯರು 9
-ವಿಧಾನಪರಿಷತ್‌ ಸದಸ್ಯರು 19
-ಒಟ್ಟು 259
-ಸರಳ ಬಹುಮತದ ಮ್ಯಾಜಿಕ್‌ ಸಂಖ್ಯೆ 130

ಪಕ್ಷವಾರು ಸದಸ್ಯರ ಅಂಕಿ-ಅಂಶ
-ಕಾಂಗ್ರೆಸ್‌ 
-ಪಾಲಿಕೆ ಸದಸ್ಯರು 75
-ಶಾಸಕರು 15
-ಸಂಸದರು 02
-ರಾಜ್ಯಸಭಾ ಸದಸ್ಯರು 06
-ವಿಧಾನ ಪರಿಷತ್‌ ಸದಸ್ಯರು 08
-ಒಟ್ಟು 106

ಬಿಜೆಪಿ
-ಪಾಲಿಕೆ ಸದಸ್ಯರು 100
-ಶಾಸಕರು 11
-ಸಂಸದರು 03
-ರಾಜ್ಯಸಭಾ ಸದಸ್ಯರು 02
-ವಿಧಾನ ಪರಿಷತ್‌ ಸದಸ್ಯರು 07 (ಒಬ್ಬರು ಬಿಜೆಪಿ ಬೆಂಬಲಿತ ಪಕ್ಷೇತರ)
-ಒಟ್ಟು 123

ಜೆಡಿಎಸ್‌
-ಪಾಲಿಕೆ ಸದಸ್ಯರು 15
-ಶಾಸಕರು 02
-ಸಂಸದರು 00
-ರಾಜ್ಯಸಭಾ ಸದಸ್ಯರು 01
-ವಿಧಾನ ಪರಿಷತ್‌ ಸದಸ್ಯರು 04
-ಒಟ್ಟು 22

Advertisement

Udayavani is now on Telegram. Click here to join our channel and stay updated with the latest news.

Next