Advertisement

ಹಳೆಯ ವಸ್ತುಗಳಿಗೆ ಹೊಸ ಮೆರುಗು

10:45 PM Nov 15, 2019 | mahesh |

ಮನೆಯ ಮೆರುಗನ್ನು ಹೆಚ್ಚಿಸಬೇಕೆಂದು ಹೆಚ್ಚಿನ ಹಣವನ್ನು ವಿನಿಯೋಗಿಸುತ್ತೇವೆ. ಆದರೆ ನಮ್ಮ ಮನೆಯಲ್ಲಿರುವ ಹಳೆ ಕಾಲದ ವಸ್ತುಗಳಿಗೆ ಹೊಸ ಅವತಾರ ನೀಡಿ, ನಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದಾಗಿದೆ. ಇದಕ್ಕೆ ಬೇಕಾದ ವಸ್ತುಗಳು, ಪೂರಕವಾದ ತಯಾರಿ ಬಗ್ಗೆ ಈ ಲೇಖನದಲ್ಲಿ ತಿಳಿಯಬಹುದು.

Advertisement

ನಗರೀಕರಣದ ವೇಗ ಎಷ್ಟು ಹೆಚ್ಚುತ್ತಲಿದೆ ಎಂದರೆ ಕಟ್ಟುವ ಮನೆಗಳಲ್ಲಿಯೂ ವೈವಿಧ್ಯತೆ. ಅಕ್ಕ ಪಕ್ಕದ ಮನೆಗಿಂತ ನಾನು ಚೆನ್ನಾಗಿ ಕಟ್ಟಬೇಕು ಎನ್ನುವ ಯೋಚನೆಗಳಿಗೆ ಹೊಸ ಹೊಸ ಯೋಜನೆಗಳು ಜನ್ಮ ತಾಳುತ್ತಿವೆ. ಅದಕ್ಕೆ ಪೂರಕವೆಂಬ ಹಾಗೇ ಮನೆಯಲ್ಲಿ ಅಜ್ಜನ ಕಾಲದ ಕೆಲವು ವಸ್ತುಗಳು ಇರುತ್ತವೆ, ಕೆಲವರು ಇದನ್ನೆಲ್ಲಾ ಮನೆಯಲ್ಲಿ ಇಟ್ಟುಕೊಳ್ಳುವುದು ಯಾಕೆ ಎಂದು ಅದನ್ನು ಗುಜರಿಗೆ ಹಾಕಿ ಬಿಡುತ್ತಾರೆ. ಇನ್ನು ಕೆಲವರು ನೆನಪಿಗೆ ಇರಲಿ ಎಂದು ಮನೆಯ ಯಾವುದೋ ಒಂದು ಕೋಣೆಯಲ್ಲಿ ಇಟ್ಟು ಬಿಡುತ್ತಾರೆ. ಅದರ ಬದಲು ಮನೆಯ ಅಲಂಕಾರಕ್ಕೆ ಇದನ್ನು ಬಳಸಿಕೊಳ್ಳಿ ನಿಮ್ಮ ಮನೆ ನೀವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಕಾಣುವುದರಲ್ಲಿ ಸಂಶಯವಿಲ್ಲ.

ಮನೆಯನ್ನು ಕಟ್ಟುವಾಗಲೇ ಅಂದುಕೊಳ್ಳುತ್ತೇವೆ ಮನೆಯ ಅಲಂಕಾರ ಹೀಗೆ ಆಗಬೇಕು, ಹಾಗೆ ಆಗಬೇಕು ಎಂದು. ಆದರೆ ಹೇಗೆ ಮಾಡಿದರೆ ಚೆಂದ ಎಂಬುವುದು ತಿಳಿದಿರುವುದಿಲ್ಲ. ಅದರ ಬದಲು ಮನೆಯ ಹಳೆ ವಸ್ತುಗಳನ್ನು ಮನೆಯ ಅಲಂಕಾರಕ್ಕೆ ಬಳಸಿಕೊಳ್ಳಿ. ಇದು ನಿಮ್ಮ ಮನೆಯ ಅಂದವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವಿಲ್ಲ.

ಅಂದ ಹೆಚ್ಚಿಸುವ ಲಾಟೀನು
ಹಳೆಕಾಲದಲ್ಲಿ ರಾತ್ರಿ ದೀಪಕ್ಕೆಂದು ಲಾಟೀನುಗಳನ್ನು ಬಳಸುತ್ತಿದ್ದರು. ಅದನ್ನು ಈಗ ನಡುಮನೆಗೆ ತಂದು ಅದಕ್ಕೆ ಅಲ್ಪ ಸ್ವಲ್ಪ ಬಣ್ಣ ತುಂಬಿ ಚೆಂದವಾಗಿಸುತ್ತಿದ್ದಾರೆ. ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಇದು ಭಿನ್ನವಾಗಿರುತ್ತದೆ. ಅದಲ್ಲದೆ ಎಷ್ಟೇ ಪೇಟೆ ಜೀವನ ಇಷ್ಟ ಪಟ್ಟವರೂ ಕೂಡ ಹಳ್ಳಿಯ ವಾತಾವರಣ ಮನೆಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಹಳ್ಳಿಯ ಮನೆಗಳಲ್ಲಿರುವ ವಸ್ತುಗಳನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳುತ್ತಿದ್ದಾರೆ.

ಮನೆಗೊಂದು ಹೊಸ ಲುಕ್‌
ಕೆಲವು ಮನೆಗಳಲ್ಲಿ ತೆಂಗಿನ ಗರಿಗಳಿಂದ ಮಾಡಿದ ವಸ್ತುಗಳು, ಅದಲ್ಲದೆ ತೆಂಗಿನ ಚಿಪ್ಪಿನಿಂದ ತಯಾರಾದ ವಸ್ತುಗಳಿಗೆ ಇನ್ನಷ್ಟು ಅಂದ ನೀಡಿ ಅದನ್ನು ಮನೆಯ ಆವರಣದಲ್ಲಿ ನೇತು ಹಾಕಲು ಅಥವಾ ರೂಮ್‌ ಅಥವಾ ಇನ್ನಿತರೆ ಅಲಂಕಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಬಯಲು ಸೀಮೆಯಲ್ಲಿ ರಾಗಿ ಬೀಸುವ ಕಲ್ಲು, ಮಡಿಕೆ ಇವುಗಳಿಗೆ ಪೇಂಟ್‌ ಮಾಡಿ ಹೊಸ ರೀತಿಯ ಲುಕ್‌ ನೀಡುತ್ತಿದ್ದಾರೆ ಅದಲ್ಲದೆ ಇವುಗಳಿಗೆ ಅಂಗಡಿಗಳಲ್ಲಿಯೂ ಭಾರೀ ಬೇಡಿಕೆ ಇದ್ದು, ಇದನ್ನು ಕೂಡ ಜನರು ಕೊಂಡು ಹೋಗುತ್ತಿದ್ದಾರೆ. ವಾಸ್ತುಶಿಲ್ಪ ಎನ್ನುವುದು ಒಂದು ಸುಂದರತೆ ಅದನ್ನು ಚೆಂದವಾಗಿ ಮಾಡುವುದು ಒಂದು ಕಲೆ. ಅದಕ್ಕೆ ಪೂರಕವಾಗಿ ಪ್ರಾಚೀನ ವಸ್ತುಗಳಿಗೆ ಮೆರಗು ನೀಡುತ್ತಿರುವುದು ಮನೆಯ ಅಂದಕ್ಕೆ ಮೂಗುತಿ ಕೂರಿಸಿದಂತಾಗಿದೆ.

Advertisement

ಕೆಲವು ಮನೆಗಳಲ್ಲಿ ಹಳೆ ಕಾಲದ ಖುರ್ಚಿ, ಆರಾಮವಾದ ಆಸನ, ಇನ್ನು ಕೆಲವೆಡೆ ತೂಗು ಮಂಚಕ್ಕೆವುಗಳು ಮನೆಯ ಹೊಲ್‌ ಅಥವಾ ವರಾಂಡಾಗಳಲ್ಲಿ ಇಡುವುದರಿಂದ ಕೋಣೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ವ್ಯಾಪಾರವಾಗಿಯೂ ಬೆಳೆಯುತ್ತಿದ್ದು, ಮಾರುಕಟ್ಟೆಗಳಲ್ಲಿ ಹವಾ ಹುಟ್ಟಿಸುತ್ತಿದೆ. ಈ ರೀತಿ ಇರಬೇಕು ಎಂದು ಹಣ ಕೊಟ್ಟು ಮಾಡಿಸುವವರು ಇದ್ದಾರೆ, ಇನ್ನು ಕೆಲವು ಕಡೆ ಮರದ ಕೆಲಸ ಮಾಡುವವರಿಗೆ ಹಳೆ ಕಾಲದ ವಸ್ತುಗಳನ್ನು ತಯಾರು ಮಾಡುವ ಕೌಶಲವಿದ್ದು ಅವರು ಅದೇ ರೀತಿಯಲ್ಲಿ ಮನೆಗೆ ಒಪ್ಪುವಂತೆ ಮಾಡಿಕೊಡುತ್ತಿದ್ದಾರೆ.

ದೇಸಿ ಸೊಬಗು
ಈ ಪ್ರಕ್ರಿಯೆಗೆ ನಾವು ಥಿಮ್ಯಾಟಿಕ್‌ ಆರ್ಟಿಟೆಕ್ಟ್ ಎನ್ನುವುದು ಹುಟ್ಟಿಕೊಂಡಿದ್ದೆ ಮಹಾನಗರಿಗಳಲ್ಲಿ ಪ್ರಾದೇಶಿಕ ವೈವಿಧ್ಯಗಳನ್ನು ಮನೆಯಲ್ಲಿ ತಂದು ಅದಕ್ಕೆ ಇನ್ನೊಂದು ಹೊಸ ರೂಪ ನೀಡಿ ಅದನ್ನು ಬೇರೆಯವರು ಬೆರಗುಗಣ್ಣಿನಿಂದ ನೋಡುವ ಹಾಗೆ ಮಾಡಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲ ಮನೆಗಳಲ್ಲಿಯೂ ಕಂಡು ಬರುತ್ತಿದ್ದು, ವಿವಿಧ ಆಕೃತಿಯ ಮರದ ಕಾಂಡಗಳು, ಯಕ್ಷಗಾನದ ವೇಷದ ಕೆಲವು ಸಾಮಗ್ರಿಗಳು ಹೀಗೆ ಹಲವಾರು ರೀತಿಯ ಚಿಕ್ಕ ಚಿಕ್ಕ ವಸ್ತುಗಳು ಮನೆಗೆ ದೇಸಿ ಸೊಬಗನ್ನು ನೀಡುತ್ತಿವೆ.

ಲುಕ್‌ ನೀಡುವ ಗ್ರಾಮಾ ಫೋನ್‌
ಹಳೆ ಕಾಲದ ಗ್ರಾಮಾಫೋನ್‌ಗಳು ಮನೆಯ ಅಂದಕ್ಕೆ ಹೆಚ್ಚಿನ ಮೆರುಗು ನೀಡುತ್ತವೆ. ಹಾಲ್‌ಗ‌ಳಲ್ಲಿ ಅಥವಾ ಶೋ ಕಪಾಟ್‌ಗಳಲ್ಲಿ ಇದನ್ನು ಇಡುವುದರಿಂದ ಮನೆಗೆ ವಿನೂತನ ರೀತಿಯ ಲುಕ್‌ ಬರುತ್ತದೆ. ಅದಲ್ಲದೆ ಹಿಂದೆ ಮನೆಯಲ್ಲಿ ಬಳಸುತ್ತಿದ್ದ ಪಾತ್ರೆಗಳು ಅದನ್ನು ಕೂಡ ಅಡಿಗೆ ಮನೆಯಲ್ಲಿ ಬಳಸಿಕೊಳ್ಳುವುದರಿಂದ ಅಡಿಗೆ ಮನೆಯ ಅಂದ ಹೆಚ್ಚಿಸುವುದಲ್ಲದೆ ಇದು ಆರೋಗ್ಯವನ್ನು ಹೆಚ್ಚಿಸುತ್ತದೆ, ಈಗಿನ ಸ್ಟಿಲ್‌, ಪ್ಲಾಸ್ಟಿಕ್‌ಗಳಿಗಿಂತ ಇದು ಹೇಳಿ ಮಾಡಿಸಿದ ಪಾತ್ರೆಗಳಾಗಿದ್ದು ತುಂಬಾ ವರ್ಷ ಬಾಳಿಕೆಯೂ ಬರುತ್ತದೆ. ನೀರು ಕುಡಿಯಲು ತಾಮ್ರದ ಲೋಟಗಳನ್ನು, ಅಡುಗೆ ಮಾಡಲು ಕೂಡ ಹಳೆಯ ಪಾತ್ರೆಗಳನ್ನು ಬಳಸುವುದರಿಂದ ಮನೆಯಲ್ಲಿ ಪ್ಲಾಸ್ಟಿಕ್‌ಗಳನ್ನು ನಿಯಂತ್ರಿಸ ಬಹುದಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

-  ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next