Advertisement

ಹೊಸಬರ ನೋಟ, ಆತ್ಮಗಳ ಆಟ

05:40 AM Feb 16, 2019 | Team Udayavani |

ನಾಸ್ತಿಕರ ಕಣ್ಣಿಗೆ ಆತ್ಮಗಳು ಕಂಡರೆ ಅವರ ಪ್ರತಿಕ್ರಿಯೆ ಹೇಗಿರಬಹುದು? ಅವರ ಜೊತೆಗೇ ಆ ಆತ್ಮಗಳು ಮಾತಿಗಿಳಿದರೆ ಅವರು ಏನು ಮಾಡಬಹುದು? ಇಂಥವರ ವರ್ತನೆಗೆ ಅವರ ಜೊತೆಯಲ್ಲಿದ್ದವರು ಹೇಗೆ ಪ್ರತಿಕ್ರಿಯಿಸಬಹುದು? ಹೀಗೆ ಒಂದಷ್ಟು ತರ್ಕಕ್ಕೆ ನಿಲುಕುವ, ಒಂದಷ್ಟು ತರ್ಕಕ್ಕೆ ನಿಲುಕದ ಅಂಶಗಳನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವುದು “ಗಹನ’ ಚಿತ್ರ. 

Advertisement

ಅದೊಂದು ನಾಲ್ವರು ಕಾಲೇಜ್‌ ಹುಡುಗರ ತಂಡ. ತಮ್ಮಷ್ಟಕ್ಕೆ ಜಾಲಿಯಾಗಿರುವ ಈ ತಂಡದಲ್ಲಿ ಒಬ್ಬಳು ಮಾತ್ರ ನಾಸ್ತಿಕವಾದಿ. ಮುಂದೆ ಈ ಹುಡುಗಿಯ ಕಣ್ಣಿಗೆ ಮಾತ್ರ ಆತ್ಮಗಳು ಕಾಣಿಸಲು ಶುರುವಾಗುತ್ತವೆ. ಅತೃಪ್ತ ಆತ್ಮಗಳು ಈಕೆಯ ಬಳಿಗೆ ಬಂದು ಕಷ್ಟಸುಖ ತೋಡಿಕೊಳ್ಳುವ ಸುಯೋಗ ಈ ಹುಡುಗಿಗೆ ಸಿಗುತ್ತದೆ. ಹಾಗಾದರೆ, ಯಾವ್ಯಾವ ಆತ್ಮಗಳು ಈ ಹುಡುಗಿಯ ಬಳಿ ತಮ್ಮ ಅಳಲನ್ನು ಹೇಳಿಕೊಳ್ಳುತ್ತವೆ.

ಇವಳ ಜೊತೆಗಿದ್ದವರ ಕಥೆಯೇನು? ಇದು ಅವಳಿಗೆ ವರವೋ, ಶಾಪವೋ ಎನ್ನುವುದನ್ನು ತಿಳಿಯಯವ ಕುತೂಹಲವಿದ್ದರೆ “ಗಹನ’ ಚಿತ್ರ ನೋಡಲು ಅಡ್ಡಿಯಿಲ್ಲ. ಬಹುತೇಕ ಹೊಸ ಪ್ರತಿಭೆಗಳೆ ಇರುವ “ಗಹನ’ ಇತ್ತೀಚೆಗೆ ಬರುತ್ತಿರುವ ಹಾರರ್‌, ಥ್ರಿಲ್ಲರ್‌ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ. ಬಹುತೇಕ ಹಾರರ್‌ ಚಿತ್ರಗಳಲ್ಲಿ ಇರುವಂತೆ ಇಲ್ಲೂ ಆತ್ಮಗಳ, ದೆವ್ವಗಳ ಕಾಟ ಇದ್ದರೂ, ಅದು ಕೊಂಚ ಮಟ್ಟಿಗೆ ವಿಭಿನ್ನವಾಗಿದೆ ಎನ್ನುವುದು ಸಮಾಧಾನದ ಅಂಶ.

ಚಿತ್ರದ ನಿರೂಪಣೆ ಕೆಲವೊಂದು ಕಡೆಗಳಲ್ಲಿ ವೇಗವಾಗಿ ಸಾಗಿದರೆ, ಕೆಲವು ಕಡೆ ಆಮೆ ನಡಿಗೆಯಲ್ಲಿ ಸಾಗುತ್ತದೆ. ಚಿತ್ರಕಥೆ ಇನ್ನಷ್ಟು ಬಿಗಿಯಾಗಿದ್ದರೆ, ಗಹನ ಇನ್ನಷ್ಟು ಗಮನ ಸೆಳೆಯುವ ಸಾಧ್ಯತೆ ಇತ್ತು. ಅದನ್ನು ಹೊರತುಡಿಸಿದರೆ, ಹೊಸ ಕಲಾವಿದರಾದ ಆದಿತ್ಯ ಶೆಟ್ಟಿ, ಶರಣ್ಯ ಗೌಡ, ರಂಜಿನಿ, ಶಿವು, ಇಂಚರ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದ ಪಾತ್ರಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.

ಇನ್ನು ಚಿತ್ರದ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಹಸಿರು ಪರಿಸರ, ಪಾತ್ರಗಳು ತೆರೆಮೇಲೆ ಚೆನ್ನಾಗಿ ಮೂಡಿಬಂದಿದೆ. ಸಂಕಲನ ಕಾರ್ಯ ಎದ್ದು ಕಾಣುತ್ತದೆ. ರಘು ಧನ್ವಂತ್ರಿ ಹಾಡುಗಳು ಅಷ್ಟಾಗಿ ಗುನುಗುವಂತಿಲ್ಲ. ಮಹೇಶ್‌. ಕೆ ಭಾರದ್ವಾಜ್‌ ಹಿನ್ನೆಲೆ ಸಂಗೀತ ಅಲ್ಲಲ್ಲಿ ಎದೆ ಝಲ್‌ ಎನಿಸುತ್ತದೆ. ಕೆಲವೊಂದು ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ನೋಡುವುದಾದರೆ, “ಗಹನ’ ಹೊಸಬರ ಮೆಚ್ಚಬಹುದಾದ ಪ್ರಯತ್ನ ಎನ್ನಬಹುದು. 

Advertisement

ಚಿತ್ರ: ಗಹನ
ನಿರ್ದೇಶನ: ಪ್ರೀತ್‌ ಹಾಸನ್‌
ನಿರ್ಮಾಣ: ಆರ್‌. ಶ್ರೀನಿವಾಸ್‌ 
ತಾರಾಗಣ: ಆದಿತ್ಯ ಶೆಟ್ಟಿ, ಶರಣ್ಯ ಗೌಡ, ರಂಜಿನಿ, ಶಿವು, ಇಂಚರ ಭೀಮಯ್ಯ, ಸ್ವಾತಿ ಶಿವಮೊಗ್ಗ, ಸುನೀಲ್‌ ಗೌಡ, ಸುಭಾಷ್‌ ಚಂದ್ರ, ಸ್ವಾತಿ ಕೊಡಗು ಮುಂತಾದ ಕಲಾವಿದರು 

* ಜಿ.ಎಸ್‌.ಕೆ 

Advertisement

Udayavani is now on Telegram. Click here to join our channel and stay updated with the latest news.

Next