ಸಿಂಧನೂರು: ಹಸಿರು ತೋರಣ ಕಲ್ಪನೆಯೊಂದಿಗೆ ನಗರದ ರಾಜ್ಯ ಹೆದ್ದಾರಿಗಳಲ್ಲಿ ಹಾಕಿರುವ ಗಿಡಗಳು ಸಮೃದ್ಧವಾಗಿ ನೆರಳು ನೀಡುತ್ತಿರುವ ಬೆನ್ನಲ್ಲೇ ಅವುಗಳನ್ನು ಮುಂದಿನ ದಿನಕ್ಕೂ ಕಾಪಾಡುವ ನಿಟ್ಟಿನಲ್ಲಿ ಟ್ರಿಮ್‌ಗೊಳಿಸುವ ಕೆಲಸ ಚುರುಕು ಪಡೆದಿದೆ.
ನಗರದ ರಾಯಚೂರು, ಕುಷ್ಟಗಿ, ಗಂಗಾವತಿ, ಮಸ್ಕಿ ಮಾರ್ಗದ ರಸ್ತೆಗಳಲ್ಲಿ ಹಾಕಿರುವ ಗಿಡಗಳಿಗೆ ಹೊಸ ರೂಪ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಬೆಳೆದ ರೆಂಬೆ, ಕೊಂಬೆಗಳನ್ನು ಕತ್ತರಿಸಿ, ಗಿಡಗಳು ಮತ್ತಷ್ಟೂ ಎತ್ತರಕ್ಕೆ ಬೆಳೆಯುವಂತೆ ನೋಡಿಕೊಳ್ಳಲಾಗಿದೆ. ಇದಕ್ಕಾಗಿ ಕಳೆದ ತಿಂಗಳಿಂದ ಶ್ರಮಿಸಲಾಗುತ್ತಿದೆ.
ಗಿಡಗಳಿಗೆ ಹೊಸ ರೂಪ
ಸಿಂಧನೂರು ನಗರದ ಹೆದ್ದಾರಿ ಮುಖ್ಯ ಬೀದಿಗಳಲ್ಲಿ ಎಡ-ಬಲದಲ್ಲಿ ಬೆಳೆಸಿರುವ ಗಿಡಗಳು ರೆಂಬೆಕೊಂಬೆ ಬಿಟ್ಟಿವೆ. ಇದರಿಂದಾಗಿ ವಾಣಿಜ್ಯ ಮಳಿಗೆಯ ಮೇಲೆ, ಅಕ್ಕ-ಪಕ್ಕದ ವಿದ್ಯುತ್, ಕೇಬಲ್ ತಂತಿಗಳಿಗೆ ತಾಗಿಕೊಂಡಿವೆ. ಇವುಗಳನ್ನು ಬಿಡಿಸಿ, ಗಿಡಗಳು ಮತ್ತಷ್ಟೂ ಎತ್ತರಕ್ಕೆ ಬೆಳೆಸಲು ಟ್ರಿಮ್ಮಿಂಗ್ ಕೆಲಸ ಕೈಗೊಳ್ಳಲಾಗಿದೆ. ವಾರದ ಪ್ರತಿ ಸಂಡೆಯೂ ಆರ್.ಸಿ. ಪಾಟೀಲ್ ನೇತೃತ್ವದ ತಂಡ ತಿಂಗಳಿಂದ ಶ್ರಮದಾನಕ್ಕೆ ನಿಲ್ಲುತ್ತಿದೆ. ಇದರ ಪರಿಣಾಮ ಕುಷ್ಟಗಿ ರಸ್ತೆಯ ಅರ್ಧ ಭಾಗ ಹೊರತುಪಡಿಸಿ, ಉಳಿದ ಎಲ್ಲ ಕಡೆಯೂ ಗಿಡಗಳ ಟ್ರಿಮ್ಮಿಂಗ್ ಕೆಲಸ ಪೂರ್ಣಗೊಂಡಿದೆ.
ಬಿಡುವಿನ ವೇಳೆ ಭಾನುವಾರ ಕೈಗೊಳ್ಳುವ ಈ ಕೆಲಸಕ್ಕೆ ನಾಲ್ಕಾರು ಕೂಲಿಕಾರರನ್ನು ಬಳಸಿಕೊಳ್ಳಲಾಗುತ್ತಿದೆ. ಗಿಡದ ರೆಂಬೆ ಕತ್ತರಿಸಲು ಕಟಿಂಗ್ ಮಿಷನ್ ಬಳಸಲಾಗುತ್ತಿದೆ. ವಾರಕ್ಕೊಂದು ದಿನ ನಾಲ್ಕೈದು ಸಾವಿರ ರೂ. ಖರ್ಚಾದರೂ ಪಾಟೀಲ್ಸ್ ಅಕಾಡೆಮಿಯವರೇ ಖರ್ಚು ಭರಿಸುತ್ತಿದ್ದಾರೆ. ಕ್ಲಾಸ್ ಕಂಟ್ರ್ಯಾಕ್ಟರ್ ಆರ್.ಪಂಪಾಪತಿ ಅಲಬನೂರು, ಗಿಡಗಳ ರೆಂಬೆ ಕತ್ತರಿಸುವ ಯಂತ್ರ ಕೊಡಿಸಿ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಯುವಕರ ತಂಡವೂ ಕೂಡ ಸಾಥ್ ನೀಡಿದೆ.
ಆರಂಭದಲ್ಲಿ ರೆಂಬೆ-ಕೊಂಬೆ ಕತ್ತರಿಸಿದ ಬಳಿಕ ಅದನ್ನು ಸಾಗಿಸಲು ಕಷ್ಟ ಪಡುವಂತಾಗಿತ್ತು. ಇದೀಗ ಜನರೇ ಉರುವಳಿಗೆ ಬಳಸಲು ಕಟ್ಟಿಗೆಯನ್ನು ಕಡಿದುಕೊಂಡು ಹೋಗುತ್ತಿರುವುದರಿಂದ ಉಳಿದ ಎಲೆಗಳನ್ನು ಮಾತ್ರ ನಗರಸಭೆಯವರು ಸಾಗಿಸುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ 5 ಸಾವಿರ ಗಿಡಗಳು ಟ್ರಿಮ್ಮಿಂಗ್ ಆಗಿರುವ ಪರಿಣಾಮ ಹೊಸ ರೀತಿಯಲ್ಲಿ ಕಂಗೊಳಿಸುತ್ತಿವೆ.
ದ್ವಿಪಥ ರಸ್ತೆ ನಿರ್ಮಾಣವಾದ ಬಳಿಕ ರಸ್ತೆ ಎರಡು ಬದಿಯಲ್ಲೂ ಗಿಡಗಳೇ ಇರಲಿಲ್ಲ. ಆಗ ವೃದ್ಧೆಯೊಬ್ಬರು ಬರಿಗಾಗಲಲ್ಲಿ ಹೋಗುವುದನ್ನು ಕಂಡು ಮರುಗಿದ್ದೆ. ಇಂದು ಗಿಡಗಳು ಬೆಳೆದಿರುವ ಪರಿಣಾಮ ನೆರಳು ಕೊಡುತ್ತಿವೆ. ಅವು ಮತ್ತಷ್ಟೂ ಬೆಳೆಯಬೇಕೆಂಬ ನಿಟ್ಟಿನಲ್ಲಿ ಎಲ್ಲರ ಸಹಕಾರದೊಟ್ಟಿಗೆ ಅವುಗಳನ್ನು ಟ್ರಿಮ್ ಮಾಡಲಾಗುತ್ತಿದೆ.
–ಆರ್.ಸಿ. ಪಾಟೀಲ್, ದುದ್ದುಪಡಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಸಿಂಧನೂರು
-ಯಮನಪ್ಪ ಪವಾರ