Advertisement

ಕರಾವಳಿಯಲ್ಲಿ ಕಳೆಗಟ್ಟಲು ಲೋಕಾಯುಕ್ತ ಸಜ್ಜು

11:11 PM Sep 15, 2022 | Team Udayavani |

ಮಂಗಳೂರು: ಹೈಕೋರ್ಟ್‌ ಆದೇಶದಂತೆ ಎಸಿಬಿಯನ್ನು ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರಕಾರ ಮುಂದಡಿ ಇಟ್ಟಿರು ವಂತೆಯೇ ಕರಾವಳಿಯ ಉಭಯ ಜಿಲ್ಲೆಗಳಲ್ಲೂ   ಈ  ಎರಡೂ ಸಂಸ್ಥೆಗಳ ವಿಲೀನಕ್ಕೆ ಸಿದ್ಧತೆ ನಡೆಯುತ್ತಿದೆ.

Advertisement

ಸುಸಜ್ಜಿತ ಕಟ್ಟಡವಿದ್ದರೂ ದಾಳಿ ನಡೆಸು ವಂತಹ ಹಾಗೂ ಟ್ರಾÂಪ್‌ ಮಾಡುವ ಅಧಿಕಾರ ಇರದ ಕಾರಣ ಇದ್ದೂ ಇಲ್ಲದಂತಿದ್ದ ಲೋಕಾ ಯುಕ್ತದ ಮಂಗಳೂರು ಕಚೇರಿ ಮತ್ತೆ ಕಳೆಗಟ್ಟಲು ಸಜ್ಜಾಗುತ್ತಿದೆ.

ಮಂಗಳೂರಿನಲ್ಲಿ ಎಸಿಬಿಯ ನಾಲ್ಕು ಜಿಲ್ಲೆಗಳ ಕೇಂದ್ರ ಕಚೇರಿ ಇದ್ದು ಅದನ್ನು ಕೆಲವು ದಿನಗಳಲ್ಲಿ ಮುಚ್ಚಲಾಗುತ್ತದೆ. ಇರುವಂತಹ ವಿವಿಧ ಪ್ರಕರಣಗಳ ಕಡತಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವುದಕ್ಕೆ ಕೊನೆಯ ಕ್ಷಣಗಳ ತಯಾರಿ ನಡೆದಿದೆ. ಹೈಕೋರ್ಟ್‌ ಆದೇಶದ ದಿನದಿಂದಲೇ ಯಾವುದೇ ಕೇಸ್‌ ದಾಖಲಿಸುತ್ತಿಲ್ಲ. ದಾಖಲಿಸಿರುವ ಪ್ರಕರಣಗಳ ತನಿಖೆಯೂ ಸ್ಥಗಿತಗೊಂಡಿದೆ.

ಇನ್ನು ಲೋಕಾಯುಕ್ತ ದ.ಕ. ಕಚೇರಿಯಲ್ಲಿ 6 ವರ್ಷಗಳಿಂದ ಕೇವಲ ಅರ್ಜಿ ವಿಲೇವಾರಿಯಲ್ಲಿ ವಿಳಂಬದಂತಹ ಸಾರ್ವ ಜನಿಕರ ದೂರಿನ ವಿಚಾರಣೆ ಮಾತ್ರ ನಡೆಯುತ್ತಿದೆ. ಸ್ಥಳೀಯ ವಾಗಿ ವಿಚಾರಣೆ ನಡೆಸಿ, ಪ್ರಾಥಮಿಕವಾಗಿ ಇದು ದೃಢಪಟ್ಟರೆ ಪ್ರಕರಣವನ್ನು ಬೆಂಗಳೂರು ಲೋಕಾಯುಕ್ತ ಪ್ರಧಾನ ಕಚೇರಿಗೆ ಕಳುಹಿಸಿ ಅಲ್ಲಿ ಅಂತಿಮವಾಗಿ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತಿತ್ತು.

ದ.ಕ. ವ್ಯಾಪ್ತಿಯ ಲೋಕಾಯುಕ್ತದಲ್ಲಿ 15 ಪ್ರಕರಣಗಳಷ್ಟೇ ಉಳಿದಿವೆ. ಮುಂದೆ ತನಿಖೆ ಮಾಡುವ ಪೊಲೀಸ್‌ ಅಧಿಕಾರ ಬರುವ ಹಿನ್ನೆಲೆಯಲ್ಲಿ ಸಿಬಂದಿಯೂ ಉತ್ಸಾಹಿತರಾಗಿದ್ದಾರೆ.

Advertisement

ಒಒಡಿ ಸಿಬಂದಿ ಹಿಂದಕ್ಕೆ : 

ಎಸಿಬಿಯಲ್ಲಿ ಒಒಡಿ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬಂದಿಯನ್ನು ಮರಳಿಸುವಂತೆ ಸರಕಾರ  ಆದೇಶಿಸಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಎಸಿಬಿಯಿಂದ ಹೆಡ್‌ಕಾನ್‌ಸ್ಟೆಬಲ್‌ಗ‌ಳಿಬ್ಬರು ಬೇರೆ ಠಾಣೆಗೆ ಹಿಂದಿರುಗಿದ್ದಾರೆ. ಇಬ್ಬರು ಸಿಬಂದಿ ಲೋಕಾಯುಕ್ತಕ್ಕೂ ಮರಳಿದ್ದಾರೆ. ಸದ್ಯ ಒಬ್ಬರು ಎಸ್ಪಿ, ಒಬ್ಬರು ಡಿಎಸ್‌ಪಿ, ಇಬ್ಬರು ಇನ್‌ಸ್ಪೆಕ್ಟರ್‌, ಇಬ್ಬರು ಹೆಡ್‌ಕಾನ್‌ಸ್ಟೆಬಲ್‌ಗ‌ಳು ಕಾರ್ಯನಿರ್ವಹಿಸುತ್ತಿದ್ದಾರೆ.  ದ.ಕ. ಲೋಕಾಯುಕ್ತ ಕಚೇರಿಯಲ್ಲಿ ಪ್ರಸ್ತುತ ಒಬ್ಬರು ಎಸ್ಪಿ (ಉಡುಪಿಗೂ ಸೇರಿ), ಇಬ್ಬರು ಡಿವೈಎಸ್ಪಿಗಳು, ಒಬ್ಬರು ಇನ್‌ಸ್ಪೆಕ್ಟರ್‌ (2 ಹುದ್ದೆ ಖಾಲಿ), ಹಾಗೂ ಕಚೇರಿ ಸಿಬಂದಿ ಇದ್ದಾರೆ. ಉಡುಪಿಯಲ್ಲಿ ಒಬ್ಬರು ಡಿವೈಎಸ್ಪಿ, ಒಬ್ಬರು ಇನ್‌ಸ್ಪೆಕ್ಟರ್‌ ಹಾಗೂ ಕಚೇರಿ ಸಿಬಂದಿ ಇದ್ದಾರೆ.

ಒಂದು ಪ್ರಕರಣದಲ್ಲೂ ತೀರ್ಪು ಬಂದಿಲ್ಲ :

ಎಸಿಬಿ 2016ರಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ದ.ಕ., ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ  ಜಿಲ್ಲೆಗಳು ಮಂಗಳೂರು ಕೇಂದ್ರ ಸ್ಥಾನವಾಗಿ ರುವ ಎಸಿಬಿ ಎಸ್ಪಿ ಕಚೇರಿ ವ್ಯಾಪ್ತಿಗೆ ಬರುತ್ತವೆ.

ಈ ವರೆಗೆ ಒಟ್ಟು 175 ಪ್ರಕರಣಗಳು ಈ ನಾಲ್ಕು ಜಿಲ್ಲಾ ವ್ಯಾಪ್ತಿಯಲ್ಲಿ ದಾಖಲಾಗಿವೆ. ದ.ಕ.ಲ್ಲಿ 61, ಉಡುಪಿ ಯಲ್ಲಿ 28 ಪ್ರಕರಣಗಳಿವೆ. ಎಲ್ಲವೂ ತನಿಖೆಯ  ಹಂತಗಳಲ್ಲಿವೆ. ಈ ಪೈಕಿ ಅರ್ಧದಷ್ಟು ಪ್ರಕರಣಗಳು ಎಸಿಬಿ ಸ್ಪೆಷಲ್‌ ಕೋರ್ಟ್‌ನಲ್ಲಿ ವಿವಿಧ ವಿಚಾರಣೆಯ ಮಜಲುಗಳಲ್ಲಿವೆ. ಇದುವರೆಗೆ ಯಾವುದೇ ಪ್ರಕರಣದಲ್ಲಿ ತೀರ್ಪು ಬಂದಿಲ್ಲ.

ಹೊಸ ಸವಾಲು :

ಪ್ರಸ್ತುತ ವಿವಿಧ ಹಂತಗಳಲ್ಲಿರುವ ಎಸಿಬಿ ಪ್ರಕರಣಗಳನ್ನು  ಕೆಲವು ದಿನಗಳಲ್ಲಿ ಲೋಕಾ ಯುಕ್ತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ. ಆದರೆ ಇದು ವರೆಗೆ ಎಸಿಬಿಯಲ್ಲಿರುವ ಸಿಬಂದಿ ಅದನ್ನು ನಿರ್ವಹಿಸುತ್ತಿದ್ದರು, ಆದರೆ ಮುಂದೆ ಲೋಕಾ ಯುಕ್ತದವರಿಗೆ ಈ ಪ್ರಕರಣಗಳು ಹೊಸದಾಗಿರು ವುದರಿಂದ ಅದನ್ನು ವಿಸ್ತೃತವಾಗಿ ತಿಳಿದುಕೊಂಡು ತನಿಖೆ ಮುಂದುವರಿಸಬೇಕಾಗುತ್ತದೆ. ಇದು ಹೊಸ ಸವಾಲಾಗಬಹುದು ಎನ್ನುತ್ತಾರೆ ಅಧಿಕಾರಿಗಳು.

ನಮಗೆ ಲೋಕಾಯುಕ್ತರಿಂದ ಬಂದಿರುವ ಸೂಚನೆಗಳ ಆಧಾರದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ, ಈ ಕುರಿತು ವಿವರಗಳನ್ನು ನೀಡುವಂತಿಲ್ಲ.   – ಜಗದೀಶ್‌, ಎಸ್ಪಿ, ಲೋಕಾಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next