Advertisement
ಹೌದು, ರಾಜಸ್ಥಾನದ ಡೆಗಾನಾ ಎಂಬ ಪ್ರದೇಶದಲ್ಲಿ ಭಾರೀ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ. ರಾಜಸ್ಥಾನ ಸರ್ಕಾರದ ಅಧಿಕಾರಿಗಳೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಭೌಗೋಳಿಕ ಸರ್ವೇ ಮತ್ತು ಗಣಿ ಅಧಿಕಾರಿಗಳು ಹೇಳುವ ಪ್ರಕಾರ, ಡೆಗಾನಾದಲ್ಲಿ ಪತ್ತೆಯಾಗಿರುವ ಲೀಥಿಯಂ ನಿಕ್ಷೇಪವು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದುದಕ್ಕಿಂತ ಅಗಾಧ ಪ್ರಮಾಣದಲ್ಲಿದೆ. ಅಂದರೆ, ಭಾರತದ ಒಟ್ಟಾರೆ ಬೇಡಿಕೆಯ ಶೇ.80ರಷ್ಟನ್ನು ಪೂರೈಸುವಷ್ಟು ಲೀಥಿಯಂ ಇಲ್ಲಿದೆಯಂತೆ.
Related Articles
ರಾಜಸ್ಥಾನದ ಡೆಗಾನಾದ ರೇಣಾತ್ ಪರ್ವತ ಪ್ರದೇಶ ಮತ್ತು ಸುತ್ತಮುತ್ತಲ ಜಾಗದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ. ಇದೇ ಪ್ರದೇಶದಿಂದ ಒಂದು ಕಾಲದಲ್ಲಿ ಇಡೀ ದೇಶಕ್ಕೆ ಟಂಗ್‌ಸ್ಟನ್ ಅನ್ನು ಪೂರೈಕೆ ಮಾಡಲಾಗುತ್ತಿತ್ತು. ಇಲ್ಲಿ ಟಂಗ್‌ಸ್ಟನ್ ಖನಿಜ ಪತ್ತೆಯಾಗಿದ್ದು 1914ರಲ್ಲಿ ಅಂದರೆ ಬ್ರಿಟಿಷರ ಆಡಳಿತದ ಅವಧಿಯಲ್ಲಿ. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಈ ಪ್ರದೇಶದಲ್ಲಿ ಉತ್ಪತ್ತಿ ಮಾಡಲಾದ ಟಂಗ್‌ಸ್ಟನ್ ಅನ್ನು ಬ್ರಿಟಿಷ್ ಸೇನೆಗೆ ಯುದ್ಧ ಸಾಮಗ್ರಿ ತಯಾರಿಸಲು ಬಳಸಲಾಗುತ್ತಿತ್ತು. ಸ್ವಾತಂತ್ರಾéನಂತರ, ದೇಶದ ಇಂಧನ ಮತ್ತು ಆರೋಗ್ಯ ಕ್ಷೇತ್ರದ ಸರ್ಜಿಕಲ್ ಸಾಮಗ್ರಿಗಳ ತಯಾರಿಕೆಗೆ ಇದನ್ನು ಬಳಸಲು ಆರಂಭಿಸಲಾಯಿತು. ಆ ಸಮಯದಲ್ಲಿ ಇಲ್ಲಿ ಸುಮಾರು 1500 ಕಾರ್ಮಿಕರು ಕೆಲಸ ಮಾಡುತ್ತಿದ್ದರು.
Advertisement
ಭಾರತದ ಆಮದು ಪ್ರಮಾಣಭಾರತವು ಆಮದು ಮಾಡುತ್ತಿರುವ ಒಟ್ಟಾರೆ ಲೀಥಿಯಂ ಪೈಕಿ ಶೇ.53.76ರಷ್ಟು ಬರುವುದೇ ಚೀನಾದಿಂದ. 2020-21ರಲ್ಲಿ ಭಾರತವು ಒಟ್ಟಾರೆ 6 ಸಾವಿರ ಕೋಟಿ ರೂ. ಮೌಲ್ಯದ ಲೀಥಿಯಂ ಅನ್ನು ಆಮದು ಮಾಡಿಕೊಂಡಿದೆ. ಈ ಪೈಕಿ ಚೀನಾವೊಂದರಿಂದಲೇ 3,500 ಕೋಟಿ ರೂ. ಮೌಲ್ಯದ ಲೀಥಿಯಂ ಖರೀದಿಸಲಾಗಿದೆ. – ಜಮ್ಮು-ಕಾಶ್ಮೀರದಲ್ಲಿ ಪತ್ತೆಯಾದ ಲೀಥಿಯಂ ನಿಕ್ಷೇಪದ ಅಂದಾಜು ಪ್ರಮಾಣ- 5.9 ದಶಲಕ್ಷ ಟನ್
– ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಟನ್ ಲೀಥಿಯಂಗೆ ಇರುವ ದರ – 57.36 ಲಕ್ಷ ರೂ.
– ವಿಶ್ವಬ್ಯಾಂಕ್ ವರದಿ ಪ್ರಕಾರ, 2025ರ ವೇಳೆಗೆ ಜಾಗತಿಕ ಲೀಥಿಯಂ ಬೇಡಿಕೆ ಎಷ್ಟು ಹೆಚ್ಚಲಿದೆ?- ಶೇ.500
– ಪ್ರಸ್ತುತ ಅತಿದೊಡ್ಡ ನಿಕ್ಷೇಪ ಹೊಂದಿರುವ ಬೊಲಿವಿಯಾದಲ್ಲಿರುವ ಲೀಥಿಯಂ ಪ್ರಮಾಣ – 21 ದಶಲಕ್ಷ ಟನ್
– ಚೀನಾದಲ್ಲಿರುವ ಲೀಥಿಯಂ ಪ್ರಮಾಣ – 5.1 ದಶಲಕ್ಷ ಟನ್