Advertisement

ಸಾಂಕ್ರಾಮಿಕ ಕಾಲದಲ್ಲಿ “ಹೊಸ ಸಹಜತೆ”ಗೆ ಹೊಂದಿಕೊಳ್ಳುವುದು ಮತ್ತು ಯಶಸ್ಸು ಸಾಧಿಸುವುದು

07:36 PM Sep 06, 2020 | Suhan S |

ಕೋವಿಡ್ ನಿಯಂತ್ರಣಕ್ಕಾಗಿ ವಿಧಿಸಲಾದ ಲಾಕ್‌ಡೌನ್‌ ಬಳಿಕ “ಹೊಸ ಬಗೆಯ ಸಹಜ ಜೀವನ’ಕ್ಕೆ ನಾವೀಗ ಒಗ್ಗಿಕೊಳ್ಳುತ್ತಿದ್ದೇವೆ. ಈ ಸಮಯದಲ್ಲಿ ಇತರ ಎಲ್ಲದಕ್ಕಿಂತಲೂ ಮಾನಸಿಕ ಮತ್ತು ಒಟ್ಟಾರೆ ಶ್ರೇಯಸ್ಸನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಒತ್ತಡಪೂರ್ಣ ಕಾಲಾವಧಿಯಲ್ಲಿ ಯಾವುದು ನಮ್ಮನ್ನು ಸಂತೋಷ ಮತ್ತು ಲವಲವಿಕೆಯಿಂದ ಇರಿಸುತ್ತದೆ ಎಂಬುದನ್ನು ಗುರುತಿಸಿ ಅದರಲ್ಲಿ ತೊಡಗಿಕೊಳ್ಳುವುದು ದೀರ್ಘ‌ಕಾಲಿಕವಾಗಿ ಉತ್ತಮ ಮಾನಸಿಕ ಆರೋಗ್ಯ ಒದಗಿಸಬಲ್ಲುದಾಗಿದೆ. ಈ ಇಡೀ ವರ್ಷ ಯಾರೂ ಯೋಜಿಸಿ ದಂತೆ ಇರಲಿಲ್ಲ, ಇರುವುದೂ ಇಲ್ಲ. ಆದರೆ ಸಕಾರಾತ್ಮಕ ಆಲೋಚನೆ ಮತ್ತುದೃಷ್ಟಿಕೋನದೊಂದಿಗೆ ಮುಂದಡಿ ಇರಿಸಿದರೆ ಈ ವರ್ಷವು ನಾವು ಮಾನಸಿಕ ಮತ್ತು ದೈಹಿಕವಾಗಿ ವಿಶ್ರಾಂತಿ ಪಡೆಯುವ, ಹೊಸ ಚೈತನ್ಯ ಗಳಿಸಿಕೊಳ್ಳುವ, ಮರೆತುಹೋದ ಹಳೆಯ ಉತ್ತಮ ಹವ್ಯಾಸಗಳನ್ನು ಮತ್ತೆ ಆರಂಭಿಸುವ ವರ್ಷವಾಗಲು ಸಾಧ್ಯ. ಕೆಳಗೆ ಹಲವು ಸಾಧ್ಯತೆಗಳನ್ನು ನೀಡಲಾಗಿದೆ. ಯಾವುದನ್ನೇ ಆದರೂ ನೀವು ಕೈಗೆತ್ತಿಕೊಂಡು ತೊಡಗಿಕೊಳ್ಳಬಹುದಾಗಿದೆ.

Advertisement

ಹಸುರಿನತ್ತ ಹೊರಳಿ: ನಮ್ಮ ಒಟ್ಟಾರೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹಸುರು ಸಕಾರಾತ್ಮಕ ಪರಿಣಾಮ ಬೀರುತ್ತದೆ.ಆದ್ದರಿಂದ ಹೆಚ್ಚು ತಡ ಮಾಡದೆ ನಮ್ಮ ಬಾಲ್ಕನಿ ಅಥವಾ ಟೆರೇಸನ್ನು ಸಣ್ಣ ಹಸುರು ಹೂದೋಟವಾಗಿಸೋಣ. ಇದರಿಂದ ನಮ್ಮ ಮನೆಯ ಅಂದ ಹೆಚ್ಚುವುದು ಮಾತ್ರವೇ ಅಲ್ಲದೆ ಮನೆಯಲ್ಲಿ ಧನಾತ್ಮಕ ತರಂಗಗಳು ಉಂಟಾಗುತ್ತವೆ. ಜಪಾನೀಯರು ಈ ಅಭ್ಯಾಸವನುನ “ಅರಣ್ಯ ಸ್ನಾನ’ ಎಂಬುದಾಗಿ ಕರೆಯುತ್ತಾರೆ.

ಕೆಲವು ಗಿಡಗಳಿರುವ ಕುಂಡಗಳನ್ನು ಮನೆಯೊಳಗೆ ಸ್ಥಾಪಿಸುವುದರಿಂದ ಗಾಳಿಯಲ್ಲಿರುವ ವಿಷಾಂಶಗಳು, ಋಣಾತ್ಮಕ ಅಂಶಗಳು ಹೀರಲ್ಪಡುತ್ತವೆ. ಅಲ್ಲದೆ ಮನೆಯೊಳಗೆ ಆದ್ರìತೆ ಹೆಚ್ಚಿ ಉತ್ತಮ ವಾತಾವರಣ ಲಭಿಸುತ್ತದೆ.

ನಮ್ಮನ್ನು ನಾವು ಸ್ವೀಕರಿಸಿಕೊಳ್ಳೋಣ: ನಾವು ಹೇಗಿದ್ದೇವೆಯೋ ಹಾಗೆಯೇ ಸ್ವೀಕರಿಸಿಕೊಳ್ಳುವುದನ್ನು ಕಲಿಯೋಣ. ನಮ್ಮ ಬಗ್ಗೆ ನಾವೇ ಊಹಾತ್ಮಕ ಕಲ್ಪನೆಗಳನ್ನು ಮಾಡಿಕೊಳ್ಳುವುದನ್ನು ಬಿಟ್ಟುಬಿಡೋಣ. ನಮ್ಮಲ್ಲಿರುವ ಋಣಾಂಶಗಳು, ಕುಂದುಕೊರತೆಗಳನ್ನು ಹಾಗೆಯೇ ಸ್ವೀಕರಿಸಿ ಅವುಗಳನ್ನು ದೂರ ಮಾಡಿ ಸಕಾರಾತ್ಮಕ ಅಂಶಗಳನ್ನು ಹೆಚ್ಚಿಸಿಕೊಳ್ಳುವುದನ್ನು ಕಲಿಯೋಣ.

ಕರುಣಾಳುವಾಗಿ: ಎಲ್ಲರ ಬಗ್ಗೆ ದಯಾಪರರಾಗಿ, ಅಗತ್ಯವುಳ್ಳವರಿಗೆ ಸಹಾಯ ಮಾಡಿ. ಇತರರಿಗೆ ಸಹಾಯ ಮಾಡುವುದರಿಂದ ಸಂತೋಷದ ಹಾರ್ಮೋನ್‌ ಎಂದು ಗುರುತಿಸಲ್ಪಡುವ ಓಕ್ಸಿಟೋಸಿನ್‌ ಬಿಡುಗಡೆಯಾಗುತ್ತದೆ. ಇದರಿಂದ ಸಂತೋಷವಾಗಿರಲು ಸಾಧ್ಯವಾಗುತ್ತದೆ. ಕುಟುಂಬಿಕರು, ಗೆಳೆಯರು, ಬಂಧುಗಳಿಗೆ ವೀಡಿಯೋ, ದೂರವಾಣಿ ಕರೆ ಮಾಡಿ ಆಗಾಗ ಮಾತನಾಡಿ, ಸಂಪರ್ಕದಲ್ಲಿರಿ. ಅವರೂ ನಿಮ್ಮ ಪಾಲಿಗೆ ಮುಖ್ಯವಾದವರು ಎಂಬ ಭಾವನೆ ಉಂಟಾಗುವಂತೆ ಮಾಡಿ. ಮನೆಗೆಲಸದವರು, ಕೆಲಸದವರಿಗೆ ಒಳ್ಳೆಯ ಬಟ್ಟೆ, ಅಗತ್ಯವಿದ್ದಾಗ ಸಣ್ಣ ಮೊತ್ತದ ಹಣಕಾಸು ಇತ್ಯಾದಿ ಸಹಾಯ ಮಾಡಿ. ಇದರಿಂದ ನಮ್ಮ ಮನಸ್ಸಿನಲ್ಲಿ ಅದ್ಭುತ ಪರಿಣಾಮ ಉಂಟಾಗುತ್ತದೆ.

Advertisement

 ಹಿತವಾದುದನ್ನು ಆಲಿಸಿ: ನಿಮಗೆ ಇಷ್ಟವಾದ ಸಂಗೀತವನ್ನು ಆಲಿಸಿ. ನಿಮಗೆ ಖುಷಿ ಕೊಡುವ ಸಂಗೀತ, ಹಾಡುಗಳ ಪ್ಲೇಲಿಸ್ಟ್‌ ಸಿದ್ಧಪಡಿಸಿಕೊಂಡು ಆಗಾಗ ಕೇಳಿ.  ನಿಮ್ಮ ದಿನನಿತ್ಯದ ಕೆಲಸಕಾರ್ಯಗಳ ನಡುವೆ, ಕೆಲಸಗಳು ಮುಗಿದಾಗ ಮುಕ್ತ ಮನಸ್ಸಿನಿಂದ ಈ ಹಾಡುಗಳನ್ನು ಕೇಳಿ ಆನಂದಿಸಿ. ಇದರಿಂದ ದಿನದ ಅತ್ಯಂತ ಏಕತಾನತೆಯ ಕೆಲಸವೂ ಆಸಕ್ತಿದಾಯಕವಾಗಿ ಬದಲಾಗುತ್ತದೆ. ಈ ಸಮಯದಲ್ಲಿ ನೀವು ಬೇರ್ಯಾ ವುದೋ ಊರಿಗೆ ಪ್ರವಾಸ ಹೋಗುವ ಯೋಜನೆ ಹಾಕಿಕೊಂಡಿದ್ದಿರಬಹುದು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆ ಊರಿಗೆ ಸಂಬಂಧಪಟ್ಟ ಸದ್ದುಗಳು, ಸಮುದ್ರಕ್ಕೆ ಸಂಬಂಧಿಸಿದ ಸಂಗೀತ ಹಾಕಿಕೊಂಡು ಆಲಿಸಿ.

 ನಿಮ್ಮ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ: ನೀವು ಯಾವಾಗಲೂ ಮಾಡಬೇಕು ಎಂದು ಆಲೋಚಿಸಿರುವ, ಆದರೆ ಸಮಯ ಸಿಗದೆ ಇರುವ ಚಟುವಟಿಕೆಗಳನ್ನು ಪಟ್ಟಿ ಮಾಡಿ. ಅವುಗಳನ್ನು ಒಂದೊಂದಾಗಿ ಮಾಡುತ್ತ ಬನ್ನಿ. ಉದಾಹರಣೆಗೆ, ನೀವು ಕೀಬೋರ್ಡ್‌ ವಾದನವನ್ನು ಕಲಿಯಬೇಕು ಎಂದುಕೊಂಡಿರಬಹುದು. ಕೀಬೋರ್ಡ್‌ ತಂದಿರಬಹುದು, ಅದು ಮನೆಯ ಮೂಲೆಯಲ್ಲೆಲ್ಲೋ ಇರಬಹುದು. ಅದನ್ನು ಒರೆಸಿ ಸರಿಪಡಿಸಿಕೊಳ್ಳಿ, ಕೀಬೋಡ್‌ ಕಲಿಸುವ ಆನ್‌ಲೈನ್‌ ತರಗತಿಗೆ ಸೇರಿಕೊಳ್ಳಿ, ಅದಕ್ಕಾಗಿ ಸಮಯ ಮೀಸಲಿಡಿ. ನಿಮ್ಮನ್ನು ನೀವು ಒತ್ತಡಕ್ಕೆ ಸಿಲುಕಿಸಿಕೊಳ್ಳಬೇಡಿ, ಆದರೆ ಹೆಚ್ಚು ಶ್ರಮ ಹಾಕಿ ಕಲಿಯಿರಿ.

ಯೋಗ: ಮನಸ್ಸು ಮತ್ತು ದೇಹ – ಎರಡಕ್ಕೂ ಪ್ರಯೋಜನಕಾರಿಯಾಗಿರುವ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಇದು ಒಳ್ಳೆಯ ಸಮಯ. ಇದಕ್ಕಾಗಿ ನೀವು ಆನ್‌ಲೈನ್‌ ಕ್ಲಾಸ್‌ಗೂ ನೋಂದಾಯಿಸಿಕೊಳ್ಳಬಹುದು.

ಆನ್‌ಲೈನ್‌ ಚಟುವಟಿಕೆಗೆ ಮಿತಿ ಇರಲಿ: ಈ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ನಾವು ಆನ್‌ಲೈನ್‌ನಲ್ಲಿ ಕಳೆಯುವ ಸಮಯ ತೀವ್ರವಾಗಿ ಹೆಚ್ಚಿದೆ. ನಾವು ಪ್ರತಿದಿನ ಸುಮಾರು 5ರಿಂದ 6 ತಾಸು ಆನ್‌ಲೈನ್‌ನಲ್ಲಿ ಸಮಯ ಕಳೆಯುತ್ತಿದ್ದೇವೆ. ಇದು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ. ನಿಮ್ಮಷ್ಟಕ್ಕೆ ನೀವೇ ಒಂದು ಮಿತಿಯನ್ನು ಹಾಕಿಕೊಳ್ಳಿ ಅಥವಾ ವಾರದಲ್ಲಿ ನಿರ್ದಿಷ್ಟ ಒಂದು ದಿನವನ್ನು ಆನ್‌ಲೈನ್‌ ಇಲ್ಲದ ದಿನವನ್ನಾಗಿ ಗುರುತಿಸಿಕೊಳ್ಳಿ. ಆ ದಿನ ಸಂಪೂರ್ಣವಾಗಿ ಆನ್‌ಲೈನ್‌ನಿಂದ ದೂರ ಇದ್ದುಬಿಡಿ, ಕುಟುಂಬದೊಡನೆ ಸಮಯ ಕಳೆಯಿರಿ.

ಇದು ಕಠಿನ ಸಮಯ ನಿಜ, ಆದರೆ ಇದನ್ನೇ ಸಕಾರಾತ್ಮಕ ಆಲೋಚನೆಯ ಮೂಲಕ ಕ್ರಿಯಾತ್ಮಕವಾಗಿ, ನಮಗೆ ಉಪಯೋಗಕಾರಿಯಾಗಿ ಬಳಸಿಕೊಳ್ಳುವ ಜಾಣ್ಮೆ ನಮಗಿರಬೇಕು. ಆ ಮೂಲಕ ಖಂಡಿತವಾಗಿಯೂ ನಾವು ಯಶಸ್ಸು ಗಳಿಸುವುದು ಸಾಧ್ಯವಿದೆ.

 

ಡಾ| ಆನಂದ್‌ದೀಪ್‌ ಶುಕ್ಲಾ

ಅಸೋಸಿಯೇಟ್‌ ಪ್ರೊಫೆಸರ್‌

ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌

ಸರ್ಜರಿ ವಿಭಾಗ, ಮಣಿಪಾಲ ದಂತ

ವೈದ್ಯಕೀಯ ಕಾಲೇಜು, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next