Advertisement

ಹಸಿರಾಯ್ತು ಬದುಕು

01:37 PM Dec 09, 2017 | |

ಶ್ರೀನಿವಾಸಪುರದ ಬೋಡಿರೆಡ್ಡಿಪಲ್ಲಿ-ಮೊರಂಕಿಂದಪಲ್ಲಿ  ರಸ್ತೆ ಬದಿಯನ್ನು ಹಾಗೇ ನೋಡಿ ಕೊಂಡು ಹೋಗಿ.  ಸುಂದರ ಪರಿಸರದ ಬೆಟ್ಟಗುಡ್ಡದ ಕಾನನದ ಮಧ್ಯೆ ತಲೆ ಎತ್ತಿ ನಿಂತಿರುವ ಕೆಂಬಣ್ಣದ ಮನೆಗಳು ಕಾಣುತ್ತವೆ. ಅರೆ, ಎಷ್ಟು ಚೆನ್ನಾಗಿದೆ ಮನೆಗಳು. ಬಹುಶ ಯಾವುದೋ ರೆಸಾರ್ಟ್‌ ಮಾಡೋಕೆ  ಈ ರೀತಿ ಕಟ್ಟಿರಬೇಕು ಅಂದು ಕೊಂಡರೆ ಅದು ಸುಳ್ಳೇಸುಳ್ಳು. 

Advertisement

ಹಲವು ದಶಕಗಳ ಕಾಲ ಕಾಡು, ತೋಪುಗಳಲ್ಲಿಯೆ ವನವಾಸ ಅನುಭವಿಸಿದ ಆ ಅಲೆಮಾರಿ ಕುಟುಂಬಗಳ ಈಗ ಹೊಸ ಬದುಕು ಇಲ್ಲಿ ತೆರೆದುಕೊಂಡಿದೆ.    ದಶಕಗಳ ಕಾಲ ಕಾಡು, ತೋಪು ಅಲೆದಾಡಿ ಬದುಕಿಗಾಗಿ ಹಂಬಲಿಸಿ ಬಂದ ಹೊರ ರಾಜ್ಯದ ಅಲೆಮಾರಿ ಕುಟುಂಬಗಳಿಗೆ “ನಮ್ಮ ಮಕ್ಕಳು’ ಸಂಸ್ಥೆ ಆಸರೆ ಒದಗಿಸಿದೆ.  ಇದರ ಜೊತೆಗೆ ಜಾತಿ, ಧರ್ಮ ಗಡಿ, ಭಾಷೆಯನ್ನು ಮೀರಿ ಮಾನವೀಯ ಸೆಳೆತದೊಂದಿಗೆ ಹಗಲಿರುಳು ಶ್ರಮಿಸುತ್ತಿರುವ ಹಸಿರು ಹೊನ್ನು ಬಳಗದ ಶ್ರಮವೂ ಇದೆ. 

ತಮಿಳುನಾಡು ಮೂಲದ ಯನಾದಿ ಜಾತಿಗೆ ಸೇರಿದ ಅದನ್ನು ಆಂಧ್ರಪ್ರದೇಶದಲ್ಲಿ ಪರಿಶಿಷ್ಟ ವರ್ಗ ಎಂದು ಕರೆಸಿಕೊಳ್ಳುವ ಐದು ಕುಟುಂಬಗಳು ಶ್ರೀನಿವಾಸಪುರದ ಮೊರಂಕಿಂಪಲ್ಲಿ ಬಳಿ ಶಾಶ್ವತವಾಗಿ ನೆಲೆ ನಿಂತಿವೆ. ಇವರಿಗಾಗಿ 8*12 ಸುತ್ತಳತೆಯ ಮನೆಗಳು ನಿರ್ಮಾಣವಾಗಿವೆ. ನಾಲ್ಕೈದು ವರ್ಷಗಳ ಹಿಂದೆ ಆಂಧ್ರದ ಗಡಿ ದಾಟಿ ಶ್ರೀನಿವಾಸಪುರ ಮುದಿಮಡಗು ಗ್ರಾಮದಲ್ಲಿ ಟೆಂಟ್‌ಗಳಲ್ಲಿ ನೆಲೆಸಿದ್ದವರೇ ಇವರೆಲ್ಲ.  ಬಳಿಕ ಮುಚ್ಚಿ ಹೋಗಿದ್ದ ಗ್ರಾಮದ ಕನ್ನಡ ಶಾಲೆಯಲ್ಲಿ ಅಶ್ರಯ ಪಡೆದಿದ್ದರು. ಆದರೆ ವಿವೇಚನಾ ರಹಿತ ಶಿಕ್ಷಕರೊಬ್ಬರ ಬೆದರಿಕೆಯಿಂದ ಅಲೆಮಾರಿಗಳು ಶಾಲೆ ತೊರೆಯುವಂತಾಯಿತು. ಈ ವಿಚಾರ ಹೇಗೋ ಹಸಿರು ಹೊನ್ನು ಬಳಗದ ಅಧ್ಯಕ್ಷರಾಗಿರುವ ರಾಜಾರೆಡ್ಡಿ,  ಬಚ್ಚಿರೆಡ್ಡಿ, ನಾರಾಯಣಸ್ವಾಮಿ ಅವರ ಕಿವಿಗೆ ಬಿತ್ತು. ತಕ್ಷಣ ಈ ವಿಚಾರವನ್ನು ಬಳಗದ ಸಂಸ್ಥಾಪಕ ಕಾರ್ಯದರ್ಶಿಯಾಗಿರುವ ಸಾಹಿತಿ ಸ.ರಘುನಾಥ್‌ ಅವರ ಗಮನಕ್ಕೆ ತಂದರು.

ನಮ್ಮ ಮಕ್ಕಳು ಆಸರೆಯಾದರು!
ಶಾಲೆ ತೊರೆದಿದ್ದರಿಂದ ಅನಾಥವಾದ ವಲಸಿಗರ ಕುಟುಂಬಗಳಿಗೆ ಆಗ ಆಸರೆಯಾಗಿ ನಿಂತದ್ದು ನಮ್ಮ ಮಕ್ಕಳು ಸಂಸ್ಥೆ. ದಾನಿಗಳ ಸಹಕಾರದೊಂದಿಗೆ ಎಲ್ಲವನ್ನೂ ವಸ್ತು ರೂಪದಲ್ಲಿ ಪಡೆದು, ವಲಸಿಗರ ಜೊತೆಗೂಡಿಯೆ ಸತತ ಒಂದರೆಡು ತಿಂಗಳಲ್ಲಿ ಐದು ಮನೆಗಳನ್ನು ನಿರ್ಮಿಸಿದರು. ಮನೆಗಳಿಗೆ ಬೇಕಾದ ಮೂಲ ಸೌಕರ್ಯಗಳಾದ ಬಟ್ಟೆ, ದಿನಸಿ ಪದಾರ್ಥ, ಪಾತ್ರೆ ಸಾಮಾನುಗಳನ್ನೂ ಕೊಡುಗೈ ದಾನಿಗಳು ಕೊಟ್ಟಿದ್ದಾರೆ. ಆಗ ನಿರಾಶ್ರಿತರಾಗಿದ್ದ ವಲಸಿಗರು ಈಗ ಸ್ವಂತ ಗೂಡಿನಲ್ಲಿ ನೆಲೆಸಿ ಭವಿಷ್ಯದ ಬದುಕಿನ ಲೆಕ್ಕಚಾರದಲ್ಲಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಉತ್ಸಾಹಿಕರಾಗಿದ್ದು, ಸುತ್ತ ಮರ, ಗಿಡಗಳನ್ನು ಬೆಳೆಸಲು ತಯಾರಿ ನಡೆಸಿದ್ದಾರೆ.

Advertisement

ಪ್ರಸ್ತುತ ಹಸಿರುಹೊನ್ನುವಿನಲ್ಲಿ ನೆಲೆಸಿರುವ ಈ ಅಲೆಮಾರಿ ಕುಟುಂಬಗಳಿಗೆ ತಾವು ಭಾರತೀಯರು ಎಂಬುದಕ್ಕೆ ಚುನಾವಣಾ ಗುರುತಿನ ಚೀಟಿಯಾಗಲಿ ಅಥವಾ ಆಧಾರ್‌ ಕಾರ್ಡ್‌ ಆಗಲಿ ಯಾವುದೇ ಕುರುಹು ಇಲ್ಲ. ನಮ್ಮ ಮಕ್ಕಳು ಹಾಗೂ ಹಸಿರು ಹೊನ್ನು ಬಳಗ ಇವರಿಗೆ ಅಗತ್ಯವಾದ ಪಡಿತರ ಚೀಟಿ, ಚುನಾವಣಾ ಗುರುತಿಸಿನ ಚೀಟಿ, ಆಧಾರ್‌ ಹಾಗೂ ಜಾತಿ ಪ್ರಮಾಣ ಕಲ್ಪಿಸುವ ಸವಾಲಿನೊಂದಿಗೆ ಮುನ್ನಡೆದಿದೆ.

ಗ್ರಾಮಕ್ಕೆ ಹಸಿರು ಹೊನ್ನೂರು ನಾಮಕರಣ..
ಸುತ್ತಮುತ್ತಲ ಗ್ರಾಮಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ವಿದ್ಯಾರ್ಥಿ, ಪೋಷಕರಲ್ಲಿ ಪರಿಸರದ ಮಹತ್ವ ತಿಳಿ ಹೇಳುತ್ತಿದೆ ಈ ಹಸಿರುಹೊನ್ನು ಬಳಗ. ಇವರು ಅಲೆಮಾರಿಗಳ ಬಡಾವಣೆಗೆ ಹಸಿರು ಹೊನ್ನೂರು ಅಂತ ಹೆಸರಿಟ್ಟಿದ್ದಾರೆ. 

ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮರ, ಗಿಡಗಳನ್ನು ಯಥೇತ್ಛವಾಗಿ ಬೆಳೆಸುವ ಗುರಿ ಹೊಂದಿರುವುದರ ಜೊತೆಗೆ ಅಲೆಮಾರಿ ಕುಟುಂಬಗಳಿಗೆ ಇನ್ನಷ್ಟು ಅಶ್ರಯ ಕಲ್ಪಿಸಲು ಯೋಜನೆ ರೂಪಿಸಿದ್ದಾರೆ.

50 ರೂ, ಪಡೆಯುತ್ತಿದ್ದ ಕೈಗಳಿಗೆ 300 ರೂ, ಕೂಲಿ..
ಈ ಹಿಂದೆ ವಲಸೆ ಕುಟುಂಬಗಳು ತಮ್ಮ ಬದುಕಿನ ಬಂಡಿ ಮುನ್ನಡೆಸಲು ಆಯ್ದುಕೊಂಡಿದಿದ್ದು ನೀರಾ ಇಳಿಸುವ ಕಾಯಕ. ಅರಣ್ಯ ಪ್ರದೇಶದೊಳಗಿದ್ದ ಈಚಲು ಮರಗಳ ಬೆನ್ನತ್ತಿ ನೀರಾ ಇಳಿಸಿ ಮಾಲೀಕರು ನೀಡುತ್ತಿದ್ದ 50, 70 ರೂ ಮಾತ್ರ ಪಡೆಯುತ್ತಿದ್ದರು. ಅದರಿಂದ ಬರುತ್ತಿದ್ದ ಕೂಲಿ ಕಾಸು ಇವರ ತುತ್ತಿನ ಚೀಲ ತುಂಬಿಸಿಕೊಳ್ಳಲು ಸಾಲುತ್ತಿರಲಿಲ್ಲ. ಈಗ ಹಸಿರು ಹೊನ್ನೂರು ಗ್ರಾಮದ ಸುತ್ತಮುತ್ತಲಿನ ಮೊರಂಕಿಂದಪಲ್ಲಿ, ಬೋಡಿರೆಡ್ಡಿಪಲ್ಲಿ ಮತ್ತಿತರ ರೈತಾಪಿ ಜನರ ಕೃಷಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನವಿಡೀ ದುಡಿದು ಒಬ್ಬರು ದಿನಕ್ಕೆ 250 ರಿಂದ 300 ರೂ, ಸಂಪಾದನೆ ಮಾಡುತ್ತಿದ್ದಾರೆ. ಅತ್ತ ರೈತರಿಗೂ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ನೀಗಿಸಿದೆ. ದಶಕಗಳಿಂದ ಕೈಗಳಿಗೆ ಕೆಲಸ ಇಲ್ಲದೇ ಕಾಡು ತೋಪುಗಳನ್ನು ಅಲೆದಾಡಿ ಸೊರಗಿದ್ದ ಅಲೆಮಾರಿ ಕುಟುಂಬಗಳಿಗೆ ಈಗ ಕೈ ತುಂಬ ಕೂಲಿ ಹಣ ಸಿಗುತ್ತಿದ್ದು, ಕುಟುಂಬ ನಿರ್ವಹಣೆ ಸರಾಗವಾಗಿ ಸಾಗಿದೆ.  ನನ್ನ ಇಡೀ ಬದುಕು ಕಾಡಿನಲ್ಲಿ ಅಲೆದಾಡಿ ನಡೆದು ಓಡಾಡಿ ದಣಿದು ಹೋಗಿದ್ದೆ. 

ಇಡೀ ಬದುಕಿನದ್ದಕ್ಕೂ ನಾವು ತುಂಬ ಕಷ್ಟ ಪಟ್ಟೆವು. ಅರೆಕಾಸಿಗೆ ನಮ್ಮನ್ನು ಕೆಲವರು ದುಡಿಸಿಕೊಂಡರು. ನಮಗೆ ಸರಿಯಾಗಿ ಸ್ನಾನ ಇಲ್ಲ. ಮೈಗೆ ಬಟ್ಟೆ ಇಲ್ಲ. ಮುಂದೆಯಾದರೂ ಇಲ್ಲಿ ನೆಲೆ ನಿಂತು ಬದುಕು ಕಟ್ಟಿಕೊಳ್ಳುತ್ತೇವೆ ನಮ್ಮ ಮಕ್ಕಳಿಗೆ ಅಕ್ಷರಭ್ಯಾಸ ಕಲಿಸುತ್ತೇವೆ ಎನ್ನುತ್ತಾರೆ ಸ್ವಂತ ಸೂರು ಸಿಕ್ಕಿ ಖುಷಿಯಲ್ಲಿದ್ದ ಅಲೆಮಾರಿ ಕುಟುಂಬದ 90 ವರ್ಷದ ವಯೋವೃದ್ದೆ ರಾಜಮ್ಮ. ಇವರಲ್ಲಿ ಆರು ತಿಂಗಳ ಮಗುವಿನಿಂದ 90 ವರ್ಷದ ವಯೋ ವೃದ್ದ ಮಹಿಳೆಯವರೆಗೂ ಒಟ್ಟು 19 ಮಂದಿ ಇದ್ದಾರೆ.

ಸರ್ಕಾರದ ಸಾಲ ಹಾಗೂ ಸಬ್ಸಿಡಿಗಳು ಶ್ರಮ ಜೀವಿಗಳನ್ನು ಉಳಿಸಿಲ್ಲ. ಸಾಲ ಮನ್ನಾದ ಅಮಿಷಗಳು ಇಂದು ರಾಜಕೀಯ ಯೋಜನೆಗಳಾಗಿ ರೂಪಾಂತರಗೊಂಡಿದೆ. ಅಲೆಮಾರಿ ಕುಟುಂಬಗಳನ್ನು ಸಾಲ-ಅಮಿಷಗಳಿಂದ ದೂರ ಇಡುವ ಪ್ರಯತ್ನವನ್ನು ನಮ್ಮ ಮಕ್ಕಳು ಸಂಸ್ಥೆ ಹಾಗೂ ಹಸಿರು ಹೊನ್ನು ಬಳಗ ಮಾಡಿದೆ. ಮುಂದಿನ ದಿನಗಳಲ್ಲಿ ಇವರನ್ನು ಪಶು ಸಂಗೋಪನೆಯಲ್ಲಿ ತೊಡಗಿಕೊಳ್ಳುವಂತೆ ಮೇಕೆ, ಕುರಿ, ನಾಟಿ ಹಾಸುಗಳನ್ನು ದಾನಿಗಳಿಂದ ಪಡೆದು ನೀಡಲಿದ್ದೇವೆ. 

ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಕೆಲಸವನ್ನು ನಾವೇ ಮುಂದೆ ನಿಂತು ಮಾಡುತ್ತೇವೆ’ ಎನ್ನುತ್ತಾರೆ ಹಸಿರು ಹೊನ್ನು ಬಳಗದ ಸ.ರಘುನಾಥ್‌.

 ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next