Advertisement

ಕಸಬ ಕರಾವಳಿ ನಿವಾಸಿಗಳಿಗೆ ಹೊಸ ಬದುಕಿನ ನಿರೀಕ್ಷೆ

01:00 AM Feb 14, 2019 | Team Udayavani |

ಕಾಸರಗೋಡು: ಕಡಲ್ಕೊರೆತದಿಂದ ತೊಡಗಿ ಮೀನು ಲಭಿಸದೇ ಇರುವ ಸಮಸ್ಯೆಗಳ ತೆರೆಯ ಅಪ್ಪಳಿಸುವಿಕೆಯೊಂದಿಗೆ ಬದುಕುತ್ತಿರುವ ಮೀನುಗಾರರ ಕುಟುಂಬಗಳಿಗೆ ಸಾಂತ್ವನದ ಸ್ಪರ್ಶದೊಂದಿಗೆ ರಾಜ್ಯ ಸರಕಾರ ಹೊಸಬದುಕಿಗೆ ನಾಂದಿ ನೀಡುತ್ತಿದೆ.

Advertisement

36 ಕುಟುಂಬಗಳಿಗೆ ಒಲಿದ ಭಾಗ್ಯ  
ಜಿಲ್ಲೆಯಲ್ಲಿ ನಡೆಯುವ ಚಟುವಟಿಕೆಗಳ ಮೊದಲ ಹಂತವಾಗಿ ಕಾಸರಗೋಡು ಕಸಬ ಕರಾವಳಿಯಲ್ಲಿ ಸಂಕಷ್ಟಕ್ಕೊಳಗಾಗಿರುವ 36 ಕುಟುಂಬ ಗಳಿಗೆ ಈ ನಿಟ್ಟಿನಲ್ಲಿ ನೂತನ ವಸತಿ ನಿರ್ಮಾಣವಾಗುತ್ತಿದೆ. ಮೀನುಗಾರಿಕಾ ಇಲಾಖೆ ಜಾಗ ಒದಗಿಸಿ ಮನೆ ನಿರ್ಮಿಸಿ ನೀಡುವ ಹೊಣೆ ಹೊತ್ತಿದೆ.

ಖರೀದಿ ಸಮಿತಿ ನೇತೃತ್ವ  
ಮೀನುಗಾರರು ಕಸಬ ಕರಾವಳಿಯಲ್ಲೇ ಸೂಚಿಸಿದ ಜಾಗದಲ್ಲಿ ವಿವಿಧ ಯೋಜನೆಗಳನ್ನು ಅಳವಡಿಸಿ ಈ ನಿರ್ಮಾಣ ನಡೆಸಲಾಗುತ್ತಿದೆ. ಜಿಲ್ಲಾ ಧಿಕಾರಿ ಅವರು ಅಧ್ಯಕ್ಷರಾಗಿ, ಮೀನುಗಾರಿಕಾ ಇಲಾಖೆ ನಿರ್ದೇಶಕ ಸಂಚಾಲಕರಾಗಿರುವ ಜಿಲ್ಲಾ ಮಟ್ಟದ ಪರ್ಚೇಸ್‌ ಸಮಿತಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಾಗ ಪತ್ತೆ ಮಾಡಿದ್ದು, ಬೆಲೆ ನಿಗದಿ ಪಡಿಸಲಾಗಿತ್ತು. ಜನವರಿ ತಿಂಗಳೊಳಗೆ  ನೋಂದಣಿ ಕ್ರಮಗಳನ್ನು ಪೂರ್ಣಗೊಳಿಸಲಾಗಿತ್ತು.

ಭೂ, ವಸತಿ ರಹಿತರ ಯೋಜನೆ   
2016-17ನೇ ವರ್ಷದ ಭೂರಹಿತ, ವಸತಿ ರಹಿತ ಯೋಜನೆಗಳ ಪ್ರಕಾರ ಜಿಲ್ಲೆಯಲ್ಲಿ 129 ಮನೆಗಳನ್ನು ಮಂಜೂರುಮಾಡಲಾಗಿದೆ. ಅದರಲ್ಲಿ 96 ಮಂದಿಯ ನೋಂದಣಿ ಪೂರ್ಣ ಗೊಳಿಸಿ 29 ಮಂದಿಗೆ ಜಾಗ ಮಂಜೂರು ಮಾಡಲಾಗಿದೆ. ಉಳಿದ ಮಂದಿಗೆ ಜಾಗ ಮತ್ತು ಮನೆ ನೀಡುವ ವಿಚಾರ ಪ್ರಗತಿಯಲ್ಲಿದೆ.

50 ಘಟಕಗಳ ಮಂಜೂರು  
2017-18ನೇ ವರ್ಷದಲ್ಲಿ ಜಾರಿ ಗೊಳಿಸಿದ ಕರಾವಳಿ ವಲಯದ 50 ಮೀಟರ್‌ ಅಂತರದಲ್ಲಿ ವಾಸಿಸುತ್ತಿರುವ ಮಂದಿಯನ್ನು ಜಾಗ ಖರೀದಿಸಿ, ಮನೆ ನಿರ್ಮಿಸಿ ನೀಡುವ ಯೋಜನೆ  ಪ್ರಕಾರ ಜಿಲ್ಲೆಯಲ್ಲಿ 50 ಘಟಕಗಳನ್ನು ಮಂಜೂರು ಮಾಡಲಾಗಿತ್ತು. 21 ಫಲಾನುಭವಿಗಳ ನೋಂದಣಿ ಕ್ರಮ ಪೂರ್ತಿಗೊಳಿಸಲಾಗಿದೆ. ಅದರಲ್ಲಿ 7 ಮಂದಿಗೆ ಕಾಸರಗೋಡು ಕಸಬದಲ್ಲಿ ಜಾಗ ಪತ್ತೆಮಾಡಲಾಗಿದೆ. ಯೋಜನೆಗಳ ಪ್ರಕಾರ ಜಾಗ ಖರೀದಿಗೆ 6 ಲಕ್ಷ ರೂ., ಮನೆ ನಿರ್ಮಾಣಕ್ಕೆ 4 ಲಕ್ಷ ರೂ. ಮಂಜೂರು ಮಾಡಲಾಗುತ್ತದೆ. ಮನೆ ನಿರ್ಮಾಣ ಫಲಾನುಭವಿಗಳ ಆಸಕ್ತಿ ಪ್ರಕಾರ ಗುತ್ತಿಗೆ ನೀಡಬಹುದಾಗಿದೆ.

Advertisement

6 ತಿಂಗಳಲ್ಲಿ  ಪೂರ್ಣ
 ಕಟ್ಟಡ ನಿರ್ಮಾಣ ಸಾಮಗ್ರಿಗಳ ಕೊರತೆ ನಿರ್ಮಾಣಕ್ಕೆ ವಿಳಂಬಗತಿ ನೀಡುತ್ತಿದೆ. 6 ತಿಂಗಳ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳಿಸಲು ಯತ್ನಿಸಲಾಗುತ್ತಿದೆ.
– ಅಜಿತ ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next