Advertisement
91.20 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕೆ ಭಾರತೀಯ ರಾ.ಹೆ. ಪ್ರಾಧಿಕಾರ ಡಿಪಿಆರ್ ಈ ಹಿಂದೆಯೇ ತಯಾರಿಸಿ, ಪ್ರಾಧಿಕಾರದ ಕೇಂದ್ರ ಕಚೇರಿಯು 2017ರಲ್ಲಿ ಅನುಮೋದನೆ ನೀಡಿ, ಸ್ಟುಫ್ ಕನ್ಸಲ್ಟೆನ್ಸಿ ಪ್ರೈ.ಲಿ. ಅಧಿಕಾರಿಗಳು ಸರ್ವೇ ವರದಿ ಕೂಡ ಸಲ್ಲಿಸಿದ್ದರು. ಆದರೆ ಪರಿಹಾರ ಹಾಗೂ ಯೋಜನಾ ವೆಚ್ಚವು ದುಪ್ಪಟ್ಟಾಗುತ್ತಿರುವ ಹಿನ್ನೆಲೆಯಲ್ಲಿ ಅನುಮೋದನೆ ನೀಡುವಲ್ಲಿ ತಡವಾಗಿತ್ತು. ಇದೇ ಸಂದರ್ಭ ದೇಶದ ಎಲ್ಲ ಕಡೆಗಳಲ್ಲಿ ಹೊಸದಾಗಿ ಮಾಡುವ ರಿಂಗ್ ರಸ್ತೆ/ವರ್ತುಲ ರಸ್ತೆಯನ್ನು ಹಾಲಿ ರಸ್ತೆಯ ಪಕ್ಕ ಮಾಡುವ ಬದಲು ಹೊಸದಾಗಿ ಗ್ರೀನ್ ಫೀಲ್ಡ್ ಅಲೈನ್‌ಮೆಂಟ್ ಎಂಬ ಮಾದರಿಯಲ್ಲಿ ಮಾಡಲು ಹೆದ್ದಾರಿ ಇಲಾಖೆ ನಿರ್ಧರಿಸಿತು. ಹೀಗಾಗಿ ಅನುಮೋದನೆಗೆ ಹೋಗಿದ್ದ ಮೂಲ್ಕಿ-ಕಟೀಲು-ತೊಕ್ಕೊಟ್ಟು ರಸ್ತೆ ಅನುಮೋದನೆ ಪಡೆಯಲಿಲ್ಲ. ಬದಲಾಗಿ ಗ್ರೀನ್ ಫೀಲ್ಡ್ ಅಲೈನ್‌ಮೆಂಟ್ ಮಾದರಿಯಲ್ಲಿ ಹೊಸ ಡಿಪಿಆರ್ ಸಿದ್ಧಪಡಿಸುವಂತೆ ಸಚಿವಾಲಯವು ರಾ.ಹೆ. ಪ್ರಾಧಿಕಾರದ ಮಂಗಳೂರು ಕಚೇರಿಗೆ ನಿರ್ದೇಶಿಸಿದೆ.
ಈಗಾಗಲೇ ಡಿಪಿಆರ್ ಸಿದ್ಧಪಡಿಸಿದ ರಿಂಗ್ ರಸ್ತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 2019ರ ಮಾ. 5ರಂದು ಶಿಲಾನ್ಯಾಸ ಮಾಡಿದ್ದರು. ಇದರ ಪ್ರಕಾರ ಹಾಲಿ ಇರುವ ರಸ್ತೆಗಳನ್ನೇ ಅಗಲಗೊಳಿಸಲಾಗುತ್ತದೆ. ಹೀಗಾಗಿ ಭೂಸ್ವಾಧೀನ ವೆಚ್ಚ ಅಧಿಕ. ಅಭಿವೃದ್ಧಿ ಆದ ಪ್ರದೇಶವೇ ಮತ್ತೆ ಅಭಿವೃದ್ಧಿ ಆಗಲಿದೆ. ಕಾನೂನಾತ್ಮಕ ಸಮಸ್ಯೆಗಳು ಅಧಿಕ. ಇದರ ಬದಲು “ಗ್ರೀನ್ ಬೆಲ್ಟ್’ ಆಧಾರದಲ್ಲಿ ಹೊಸ ರಸ್ತೆ ಮಾಡಿದರೆ ಹೆಚ್ಚಿನ ಅಭಿವೃದ್ಧಿಗೆ ಅವಕಾಶ ಹಾಗೂ ಹಸಿರು ಪ್ರದೇಶಗಳಲ್ಲಿ ಹಾದು ಹೋಗುವ ಕಾರಣ ವೆಚ್ಚವೂ ಕಡಿಮೆ ಎಂಬುದು ಪ್ರಾಧಿಕಾರದ ಅಭಿಪ್ರಾಯ.
Related Articles
ಈಗಿರುವ ರಸ್ತೆಯಲ್ಲೇ ಬೈಪಾಸ್/ರಿಂಗ್ ರಸ್ತೆ ನಿರ್ಮಿಸುವುದಾದರೆ ಅದರ ಇಕ್ಕೆಲಗಳ ಮನೆ, ಅಂಗಡಿ, ಶಾಲೆ ಇತ್ಯಾದಿ ಕಟ್ಟಡ ಬೆಲೆ ಬಾಳುವ ಜಾಗದ ಭೂಸ್ವಾಧೀನಕ್ಕೆ ಬಹುವೆಚ್ಚ ತಗಲುತ್ತದೆ. ಹೀಗಾಗಿ ಕಟ್ಟಡ, ಶಾಲೆ, ಮನೆ, ಮುಖ್ಯ ಭೂಮಿ, ನೀರಾವರಿ ಪ್ರದೇಶ, ಕೈಗಾರಿಕೆ ಗಳೆಲ್ಲವನ್ನು ಹೊರತುಪಡಿಸಿ ಗ್ರೀನ್ ಭಾಗದಲ್ಲಿ ಪರಿಸರಕ್ಕೆ ಪೂರಕವಾಗಿ ರಸ್ತೆ ನಿರ್ಮಿಸುವುದೇ ಈ ಪರಿಕಲ್ಪನೆ. ಹೀಗೆ ಮಾಡುವುದಾದರೆ ಭೂಸ್ವಾಧೀನ ಸಮಸ್ಯೆ ಬಹುವಾಗಿ ನಿವಾರಣೆ ಯಾಗಲಿದೆ ಎಂಬುದು ಹೆದ್ದಾರಿ ಇಲಾಖೆಯ ಲೆಕ್ಕಾಚಾರ.
Advertisement
“ಗ್ರೀನ್‌ಫೀಲ್ಡ್ ಅಲೈನ್‌ಮೆಂಟ್’ ಸ್ವರೂಪದಲ್ಲಿ ಮೂಲ್ಕಿ-ಕಟೀಲು-ಪೊಳಲಿ ರಿಂಗ್ ರಸ್ತೆ ನಿರ್ಮಿಸುವ ಸಂಬಂಧ ಸದ್ಯ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಹಳೆಯ ಮಾರ್ಗನಕ್ಷೆಯಲ್ಲಿ ಕೊಂಚ ಬದಲಾವಣೆ ಆಗುವ ನಿರೀಕ್ಷೆಯಿದೆ. ಡಿಪಿಆರ್ ಸಿದ್ಧಪಡಿಸಿದ ಬಳಿಕ ಇದು ಅಂತಿಮಗೊಳ್ಳಲಿದೆ.– ಶಿಶುಮೋಹನ್, ಯೋಜನಾ ನಿರ್ದೇಶಕರು, ರಾ.ಹೆ. ಪ್ರಾಧಿಕಾರ ಮಂಗಳೂರು.