Advertisement
ರಾಜ್ಯ ಸರ್ಕಾರವು ರೂಪಿಸಿರುವ “ನವ ಕರ್ನಾಟಕ ವಿಷನ್- 2025′ ಯೋಜನೆಗೆ ನಗರದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “”ರಾಜ್ಯದ ಜನತೆ, ಸಂಘ ಸಂಸ್ಥೆಗಳು, ತಜ್ಞರು, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಡಿಸೆಂಬರ್ ಹೊತ್ತಿಗೆ “ನವ ಕರ್ನಾಟಕ ಮುನ್ನೋಟ -2025′ ಯೋಜನೆ ಸಿದ್ಧಪಡಿಸಲಾಗುವುದು. ಮುನ್ನೋಟದಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲೂ ಅಳವಡಿಸಿಕೊಳ್ಳಲಾಗುವುದು” ಎಂದು ತಿಳಿಸಿದರು.
ಡಿಸೆಂಬರ್ ವೇಳೆಗೆ ಮುನ್ನೋಟ-2025 ಸಿದ್ಧವಾಗಲಿದೆ. ಮುನ್ನೋಟದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲೂ ಅಳವಡಿಸಿಕೊಳ್ಳಲಾಗುವುದು. ಇದು ನಮ್ಮ ಕನಸು ಹಾಗೂ ಬದ್ಧತೆ. ಕೇವಲ ಕನಸು ಕಂಡರೆ ಪ್ರಯೋಜನವಿಲ್ಲ. ಅದು ನನಸಾಗಬೇಕಾದರೆ ಒಂದು ಮುನ್ನೋಟವಿರಬೇಕು. ಆ ಮುನ್ನೋಟದ ಹಾದಿಯಲ್ಲಿ ಮುಂದುವರಿದರೆ ಸಾಕಾರವಾಗುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
Related Articles
Advertisement
ಹಸಿವು ಮುಕ್ತ ಕರ್ನಾಟಕ:ಕರ್ನಾಟಕವನ್ನು ಹಸಿವು ಮುಕ್ತ, ಗುಡಿಸಲು ಮುಕ್ತ, ಮಕ್ಕಳು ಅಪೌಷ್ಠಿಕತೆ ಮುಕ್ತಗೊಳಿಸುವ ಘೋಷಣೆ ಮಾಡಲಾಗಿತ್ತು. ರಾಜ್ಯದಲ್ಲಿ 1.36 ಕೋಟಿ ಕುಟುಂಬಗಳಿದ್ದು, ಇದರಲ್ಲಿ 1.08 ಕೋಟಿ ಕುಟುಂಬಗಳಿಗೆ ತಲಾ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಯೋಜನೆ 4 ಕೋಟಿ ಜನರನ್ನು ತಲುಪಿದ್ದು, ಇಂತಹ ಯೋಜನೆ ದೇಶದಲ್ಲಿ ಬೇರೆಲ್ಲೂ ಇದ್ದಂತಿಲ್ಲ. ಆರು ವರ್ಷದಿಂದ ಬರವಿದ್ದು, ಕಳೆದ ಎರಡು ವರ್ಷಗಳಲ್ಲಿ ಭೀಕರ ಬರ ತಲೆದೋರಿದರೂ ವಲಸೆ ಹೋಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.ಹಸಿವಿನಿಂದ ಯಾರೂ ಮೃಪತಟ್ಟ ಪ್ರಕರಣಗಳೂ ನಡೆದಿಲ್ಲ. ಇದು ಕರ್ನಾಟಕ ಹಸಿವು ಮುಕ್ತವಾಗಿದೆ ಎಂಬುದರ ನಿದರ್ಶನ ಎಂದು ಹೇಳಿದರು. ರಾಜ್ಯದ 1.04 ಕೋಟಿ ಮಕ್ಕಳಿಗೆ ವಾರದಲ್ಲಿ ಐದು ದಿನ ಕೆನೆಬರಿತ ಹಾಲು ವಿತರಿಸಲಾಗುತ್ತಿದ್ದು, ಅಪೌಷ್ಠಿಕತೆ ನಿವಾರಣೆಗೆ ಸಹಕಾರಿಯಾಗಿದೆ. ರಾಜ್ಯವನ್ನು ಗುಡಿಸಲುಮುಕ್ತಗೊಳಿಸಲು 15 ಲಕ್ಷ ಮನೆಗಳನ್ನು ನಿರ್ಮಿಸಬೇಕಿದ್ದು, ಈಗಾಗಲೇ 12 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ವಿದ್ಯುತ್ ಉತ್ಪಾದನೆಯಲ್ಲೂ ಸ್ವಾವಲಂಬನೆ ಸಾಧಿಸಲು ಆದ್ಯತೆ ನೀಡಲಾಗಿದೆ. ನೀರಾವರಿ ಯೋಜನೆಗಳಿಗೆ ಐದು ವರ್ಷದಲ್ಲಿ 50 ಸಾವಿರ ಕೋಟಿ ರೂ. ವೆಚ್ಚ ಮಾಡುವುದಾಗಿ ಹೇಳಲಾಗಿತ್ತು. 60 ಸಾವಿರ ಕೋಟಿ ರೂ. ವೆಚ್ಚ ಮಾಡಿ 6.50 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ಮಳೆಯಾಶ್ರಿತ ಕೃಷಿಕರ ಅನುಕೂಲಕ್ಕಾಗಿ ಈವರೆಗೆ 1.75 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಹಾಗೆಯೇ ದೇಶದಲ್ಲೇ ಮೊದಲ ಬಾರಿಗೆ ಎಪಿಎಂಸಿ ಮಾರುಕಟ್ಟೆಗಳಲ್ಲಿ ಆನ್‌ಲೈನ್ ಹರಾಜು ವ್ಯವಸ್ಥೆ ತರಲಾಗಿದ್ದು, ಇದೀಗ ಕೇಂದ್ರ ಸರ್ಕಾರ ಕೂಡ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಿದೆ. ಈ ವ್ಯವಸ್ಥೆಯಿಂದ ರೈತರ ಆದಾಯ ಶೇ.38ರಷ್ಟು ಹೆಚ್ಚಾಗಿದೆ ಎಂದು ನೀತಿ ಆಯೋಗ ವರದಿ ನೀಡಿರುವುದು ಯೋಜನೆಯ ಯಶಸ್ಸನ್ನು ತೋರಿಸುತ್ತದೆ. ರೇಷ್ಮೆಗೂಡು ಮಾರಾಟಕ್ಕೂ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿ ಲಾಭದಾಯಕವಾಗದಿದ್ದರೆ, ಕೃಷಿಗೆ ಸೂಕ್ತ ಬೆಲೆ ಸಿಗದಿದ್ದರೆ, ಕೃಷಿಕರ ಆದಾಯ ಹೆಚ್ಚಳವಾಗದಿದ್ದರೆ ಕೃಷಿ ಕ್ಷೇತ್ರಕ್ಕೆ ತೀವ್ರ ಪೆಟ್ಟು ಬೀಳಲಿದೆ ಎಂದು ಹೇಳಿದರು. ಬಂಡವಾಳ ಹೂಡಿಕೆ ಆಕರ್ಷಣೆಯಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಕೆಲವರು ಹೂಡಿಕೆದಾರರು ಕರ್ನಾಟಕ ತೊರೆಯುತ್ತಿದ್ದಾರೆ ಎಂದು ಅಪಪ್ರಚಾರ ನಡೆಸಿದರೂ ವಾಸ್ತವ ಬೇರೆ ಇದೆ. ಕೈಗಾರಿಕೆ ಬೆಳವಣಿಗೆಗೆ ಹೊಸ ನೀತಿ ಪೂರಕವಾಗಿದೆ ಎಂದರು. ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲು 55 ಲಕ್ಷ ಶೌಚಾಲಯ ನಿರ್ಮಿಸಬೇಕಿದ್ದು, ಈವರೆಗೆ 30 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ. ಉಪರಾಷ್ಟ್ರಪತಿ ಅವರು ನರಗುಂದ ತಾಲ್ಲೂಕನ್ನು ಮಂಗಳವಾರ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎಂದು ಘೋಷಿಸಲಿದ್ದಾರೆ. ಅ.2ರಂದು 114 ತಾಲ್ಲೂಕುಗಳನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗುವುದು. 2018ರ ಅ.2ಕ್ಕೆ ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಎಂದು ಘೋಷಿಸಲು ಪ್ರಯತ್ನ ನಡೆದಿದೆ ಎಂದು ಹೇಳಿದರು. ಸಚಿವರಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ರೋಷನ್‌ಬೇಗ್,ಕೆ.ಜೆ.ಜಾರ್ಜ್, ಪ್ರಿಯಾಂಕ ಖರ್ಗೆ, ಟಿ.ಬಿ.ಜಯಚಂದ್ರ, ಈಶ್ವರ್ ಖಂಡ್ರೆ, ರಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ, “ನವ ಕರ್ನಾಟಕ ಮುನ್ನೋಟ- 2025′ ಯೋಜನೆ ಸಿಇಒ ರೇಣುಕಾ ಚಿದಂಬರಂ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ ಉಪಸ್ಥಿತರಿದ್ದರು.