Advertisement

ನೂತನ ಸಿಎಂ ಬೊಮ್ಮಾಯಿ ಎದುರಿಗಿದೆ ಬೆಟ್ಟದಷ್ಟು ಸವಾಲು

09:59 AM Jul 28, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಸಿಎಂ ಪಟ್ಟಕ್ಕಾಗಿ ನಡೆದ ಹಲವಾರು ಕಸರತ್ತುಗಳ ಬಳಿಕ, ಮುಂಚೂಣಿಯಲ್ಲಿದ್ದ ನಾಯಕರನ್ನು ಹಿಂದಿಕ್ಕಿ ಬಸವರಾಜ್ ಬೊಮ್ಮಾಯಿ ನೇಮಕವಾಗಿದ್ದಾರೆ. ಈ ಮೂಲಕ ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಶಿಗ್ಗಾಂವಿ ಕ್ಷೇತ್ರದ ಶಾಸಕ ಬಸವರಾಜ್ ಬೊಮ್ಮಾಯಿ ಅಯ್ಕೆಯಾಗಿದ್ದಾರೆ.

Advertisement

ಸುಮಾರು ಒಂದು ವರ್ಷಗಳ ಕಾಲ ನಡೆದ ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಡ್ರಾಮಾಗಳ ಬಳಿಕ ನೂತನ ಸಿಎಂ ಆಯ್ಕೆಯಾಗಿದೆ. ಮಂಗಳವಾರ ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ನೇಮಕವಾಗಿದ್ದಾರೆ. ಹೀಗಾಗಿ ನೂತನ ಸಿಎಂ ಬೊಮ್ಮಾಯಿ ಎದುರಿಗೆ ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಹೇಗೆ ಎದುರಿಸುತ್ತಾರೆ, ಈ ಸರ್ಕಾರಕ್ಕೆ ಉಳಿದಿರುವ 20 ತಿಂಗಳುಗಳ ಕಾಲವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಹಾಗಾದರೆ ಬೊಮ್ಮಾಯಿ ಎದುರಿರುವ ಸವಾಲುಗಳೇನು?

ಕಳೆದೊಂದು ವರ್ಷದಲ್ಲಿ ಬಿಜೆಪಿಯಲ್ಲಿ ಉಂಟಾಗಿದ್ದ ಒಡಕು, ಭಿನ್ನ ಮಾತುಗಳು ಒಂದೇ ದಿನ ಶಮನವಾಗುತ್ತದೆ ಎನ್ನುವುದು ಕಷ್ಟ. ಹೀಗಾಗಿ ಬಹಿರಂಗ ಹೇಳಿಕೆಗಳು, ಒತ್ತಡ ಹೇರುವ ತಂತ್ರಗಳು ಮತ್ತೆ ಮುನ್ನೆಲೆಗೆ ಬರದಂತೆ ನೋಡಿಕೊಳ್ಳುವ ಸವಾಲು ಬೊಮ್ಮಾಯಿ ಎದುರಿಗಿದೆ. ಹಿರಿಯ- ಕಿರಿಯ ಶಾಸಕರನ್ನು ಒಟ್ಟಿಗೆ ಕೊಂಡೊಯ್ಯುವ ಸವಾಲಿದೆ.

ಹೊಸದಾಗಿ ಸಂಪುಟ ರಚನೆ ಮಾಡಬೇಕಿದೆ: ಈ ಹಿಂದೆ ಬಿಎಸ್ ವೈ ಸಂಪುಟದಲ್ಲಿ ವಲಸಿಗ ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾದ ಅನಿವಾರ್ಯತೆ ಇದ್ದ ಕಾರಣ ಜಾತಿವಾರು-ವಲಯವಾರು ನ್ಯಾಯ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿತ್ತು. ಅದಲ್ಲದೆ ಹಲವು ಬಾರಿ ಶಾಸಕರಾದ ಹಿರಿಯರು ಮತ್ತು ಯುವ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡಿ, ಸಂಪುಟ ವಿಸ್ತರಣೆ ಸಮಯದಲ್ಲಿ ಅಸಮಾಧಾನಕ್ಕೆ ಕಾರಣವಾಗದಂತೆ ನೋಡಿಕೊಳ್ಳಬೇಕಾಗಿದೆ.

Advertisement

ಮುಖ್ಯಮಂತ್ರಿಯಾಗಿ ಬೊಮ್ಮಾಯಿ ನೇಮಕದಲ್ಲಿ ಬಿಎಸ್ ವೈ ಪಾತ್ರ ದೊಡ್ಡದಿದೆ ಎಂಬ ಮಾತುಗಳು ಈಗಾಗಲೇ ಕೇಳಿಬರುತ್ತಿದೆ. ಹೀಗಾಗಿ ಮತ್ತೆ ಅಧಿಕಾರದಲ್ಲಿ ಬಿಎಸ್ ವೈ ಹಿಡಿತವಿದೆ, ರಬ್ಬರ್ ಸ್ಟ್ಯಾಂಪ್ ಸಿಎಂ ಎಂಬ ಆರೋಪಗಳು ಕೇಳಿಬರದಂತೆ ನೋಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಬಿಎಸ್ ವೈ ವಿರುದ್ಧವಿದ್ದ ಬಣ ಮತ್ತೆ ಸಕ್ರಿಯವಾಗುವ ಸಾಧ್ಯತೆಯಿದೆ.

ಸದ್ಯ ಎದುರಾಗಿರುವ ಪ್ರವಾಹ, ಕೋವಿಡ್ ಮೂರನೇ ಅಲೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಮುಂದೆ ಎದುರಾಗಲಿರುವ ಬಿಬಿಎಂಪಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಸಮರ್ಥವಾಗಿ ಎದುರಾಗಿಸಬೇಕಿದೆ. ಅದೇ ರೀತಿ 2023ರ ವಿಧಾನಸಭೆ ಚುನಾವಣೆಯ ವೇಳೆ ಸರ್ಕಾರದ ಇಮೇಜ್ ಹೆಚ್ಚಿಸಿ ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next