Advertisement

ತೆರೆಯತ್ತ ಕಾರ್ಮೋಡ

09:09 AM May 11, 2019 | Hari Prasad |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ‘ಕಾರ್ಮೋಡ ಸರಿದು’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಕಳೆದ ಕೆಲದಿನಗಳಿಂದ ಭರ್ಜರಿಯಾಗಿ ಚಿತ್ರದ ಪ್ರಮೋಶನ್‌ ಕೆಲಸಗಳನ್ನು ನಡೆಸುತ್ತಿರುವ ಚಿತ್ರತಂಡ, ಇದೀಗ ಚಿತ್ರದ ಬಿಡುಗಡೆಯ ಮುಹೂರ್ತವನ್ನೂ ಫಿಕ್ಸ್‌ ಮಾಡಿದೆ. ಅಂದಹಾಗೆ, “ಕಾರ್ಮೋಡ ಸರಿದು’ ಚಿತ್ರ ಇದೇ ಮೇ 17ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಚಿತ್ರತಂಡ, “ಕಾರ್ಮೋಡ ಸರಿದು’ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು.

Advertisement

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಗರಡಿಯಿಂದ ಬಂದ ನವ ಪ್ರತಿಭೆ ಉದಯ್‌ ಕುಮಾರ್‌ ಪಿ. ಎಸ್‌, “ಕಾರ್ಮೋಡ ಸರಿದು’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಉದಯ್‌ ಕುಮಾರ್‌, “ಮೊದಲು ಈ ಚಿತ್ರಕ್ಕೆ “ಲೈಫ್ ಈಸ್‌ ಬ್ಯೂಟಿಫ‌ುಲ್‌’ ಎಂದು ಶೀರ್ಷಿಕೆ ಇಡುವ ಯೋಚನೆ ಮಾಡಲಾಗಿತ್ತು. ಇದನ್ನು ನಾಗತಿಹಳ್ಳಿ ಅವರಿಗೆ ಹೇಳಿದಾಗ ಪ್ರಥಮ ನಿರ್ದೇಶನ ಮಾಡುತ್ತಿರುವುದರಿಂದ, ಆದಷ್ಟು ಕನ್ನಡ ಶೀರ್ಷಿಕೆ ಇಡುವಂತೆ ಕಿವಿಮಾತು ಹೇಳಿದರು.

ಅದರಂತೆ ಕೊನೆಗೆ ಶೀರ್ಷಿಕೆ ಬದಲಾವಣೆ ಮಾಡಿ “ಕಾರ್ಮೋಡ ಸರಿದು’ ಎಂದು ಇಡಲಾಯಿತು. ಬದುಕಿನಲ್ಲಿ ಖನ್ನತೆಗೆ ಒಳಗಾದಾಗ ಆತ್ಮಹತ್ಯೆ ಒಂದೇ ಪರಿಹಾರ, ಮುಂದೆ ಬದುಕನ್ನು ಹೇಗೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದನ್ನು ದಾಟಿದಾಗ ಸುಂದರ ಬದುಕು ತೆರೆದುಕೊಳ್ಳುತ್ತದೆ. ಇದೇ ಎಳೆಯನ್ನ ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇವೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ವಿವರಣೆ ನೀಡಿದರು.

ಇನ್ನು ಚಿತ್ರದ ಕಥೆಯಲ್ಲಿ “ಇಂದಿನ ಜನರು ತಮ್ಮ ಯಾಂತ್ರಿಕ ಬದುಕಿನಲ್ಲಿ ಹೇಗೆ ಪ್ರಸ್ತುತ ಜನರು ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಇದರಿಂದ ಸಂಬಂಧಗಳು ಹೇಗೆ ದೂರವಾಗುತ್ತಿದೆ. ಕಾಲ ಬದಲಾದಂತೆ ಹೇಗೆ ಎಲ್ಲವು ಬದಲಾಗುತ್ತಿದೆ, ಮನುಷ್ಯನ ಬಾಂಧವ್ಯಗಳು ಎಷ್ಟು ಮುಖ್ಯ ಎಂಬುದನ್ನು ಹೇಳಲಾಗಿದೆ.

ಪ್ರತಿ ಹತ್ತು ನಿಮಿಷಕ್ಕೊಮ್ಮೆ ಹೊಸ ಸನ್ನಿವೇಶಗಳು ಬರುವುದರಿಂದ ಮುಂದೇನು ಎಂದು ಊಹಿಸಲು ಆಗುವುದಿಲ್ಲ. ಆತ್ಮಹತ್ಯೆ ಮೂಲಕ ಚಿತ್ರ ತೆರೆದುಕೊಳ್ಳುತ್ತದೆ. ಕೊನೆಯ ಹತ್ತು ನಿಮಿಷ ಕ್ಲೈಮಾಕ್ಸ್ ನೋಡುಗನಿಗೆ ಚಿತ್ರಮಂದಿರದಿಂದ ಹೊರಬಂದರೂ ಕಾಡುತ್ತಲೇ ಇರುತ್ತದೆ’ ಎಂದು ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತದೆ ಚಿತ್ರತಂಡ.

Advertisement

“ಕಾರ್ಮೋಡ ಸರಿದು’ ಚಿತ್ರವನ್ನು ಕುದರೆಮುಖ, ಕಳಸ ಮೊದಲಾದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ನ್ನು ಸುಮಾರು ಐದು ಲಕ್ಷ ಮತ್ತು ಹಾಡುಗಳನ್ನು ಮೂರು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಚಿತ್ರದ ಪ್ರಮೋಷನ್‌ ಸಂದರ್ಭದಲ್ಲಿ ಶಿವಮೊಗ್ಗ, ಮಂಗಳೂರು ಮೊದಲಾದ ಕಡೆಗಳಲ್ಲಿ ಪ್ರವಾಸ ಕೈಗೊಂಡ ಚಿತ್ರತಂಡಕ್ಕೆ ಪ್ರೇಕ್ಷಕರಿಂದಲೂ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆಯಂತೆ. ಹಾಗಾಗಿ, ಇದೇ ಖುಷಿಯಲ್ಲಿರುವ ಚಿತ್ರತಂಡ, “ಕಾರ್ಮೋಡ ಸರಿದು’ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ನಿರೀಕ್ಷೆಯಲ್ಲಿದೆ.

“ಕಾರ್ಮೋಡ ಸರಿದು’ ಚಿತ್ರಕ್ಕೆ ನವನಟ ಮಂಜು ರಾಜಣ್ಣ ನಾಯಕ ಮತ್ತು ನಿರ್ಮಾಪಕ. ಚಿತ್ರದಲ್ಲಿ ಮಲೆನಾಡಿನ ಗ್ರಾಮಾಂತರ ಭಾಗದ ವೈದ್ಯೆಯಾಗಿ ಅದ್ವಿತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಾಮಿಡಿ ಕಿಲಾಡಿಗಳಿ ಖ್ಯಾತಿಯ ದಿವ್ಯಾ, ಶ್ರೀಧರ್‌, ಅಶೋಕ್‌, ಮಾ. ಹೇಮಂತ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಸತೀಶ್‌ ಬಾಬು ಸಂಗೀತ ಸಂಯೋಜಿಸಿದ್ದಾರೆ. ಚಿತ್ರವನ್ನು ಸುಮಾರು ಐವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ನಂತರ ಯುರೋಪ್‌, ಗಲ್ಫ್ ದೇಶಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next