Advertisement
Related Articles
Advertisement
ಮಧ್ಯದಲ್ಲಿ ಕಂಡುಬರುವ ತಾಮ್ರದ ಹೊದಿಕೆ ಮತ್ತಷ್ಟು ಆಕರ್ಷಕವಾಗಿದ್ದು ಸ್ವಲ್ಪ ಮಟ್ಟಿಗೆ ಉಡುಪಿಯ ಬ್ರಹ್ಮರಥವನ್ನು ಹೋಲುವಂತೆ ಕಾಣುತ್ತದೆ. ಸ್ವಾಮೀಜಿಯವರ ಸಂಕಲ್ಪದಂತೆಯೇ ಈ ಗರ್ಭಗುಡಿಯ ವಿನ್ಯಾಸವನ್ನು ಮಾಡಲಾಗಿದೆ.ಇನ್ನು ಈ ಜಾಗದ ಬಗ್ಗೆ ಹೇಳುವುದಾದರೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಧರ್ಮೀಯರೇ ನೆಲೆಸಿರುವ ಈ ದೇಶದಲ್ಲಿ ಹಿಂದೂ ದೇವಾಲಯಗಳ ಸಂಖ್ಯೆ ಕಡಿಮೆ. ಸೂಕ್ತವಾದ ಜಾಗ ಸಿಗುವುದು ಬಹಳ ಕಷ್ಟ. ಆದರೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಕ್ರೈಸ್ತ ದೇವಾಲಯವನ್ನು ಖರೀದಿಸಿ ಶ್ರೀ ಕೃಷ್ಣನ ದೇವಾಲಯವಾಗಿ ಪರಿವರ್ತನೆ ಮಾಡಿರುವುದು ಒಂದು ಸಾಹಸವೇ ಸರಿ. ಚರ್ಚಿನ ಕಟ್ಟಡಕ್ಕೆ ಯಾವುದೇ ತೊಂದರೆಯಾಗದಂತೆ, ಇರುವ ಸೌಕರ್ಯಗಳನ್ನು ಬಳಸಿ ಬಹಳ ಜಾಣ್ಮೆಯಿಂದ ಶ್ರೀ ಕೃಷ್ಣನ ದೇವಾಲಯವಾಗಿ ಪರಿವರ್ತನೆ ಮಾಡಿರುವುದು ಇಲ್ಲಿನ ಜನಕ್ಕೇ ಆಶ್ಚರ್ಯ ತರುವ ಸಂಗತಿ ಎನ್ನಬಹುದು. ದೇವಾಲಯದ ನೆಲಕ್ಕೆ ಹಾಕಿರುವ ಬಿಳಿ ಬಣ್ಣದ ಹಾಸುಗಲ್ಲುಗಳು, ಗೋಡೆಯ ಬಿಳಿಯ ಬಣ್ಣ ಮತ್ತು ಅಲ್ಲಿ ಅಳವಡಿಸಿಲಾದ ದೊಡ್ಡ, ದೊಡ್ಡ ತೂಗುದೀಪಗಳು ಒಳಾಂಗಣವನ್ನು ಆಕರ್ಷಣೀಯವಾಗಿ ಮಾಡಿವೆ. ಕ್ರೈಸ್ತ ದೇವಾಲಯವೊಂದು ಸುಂದರವಾದ ಶ್ರೀ ಕೃಷ್ಣನ ದೇವಾಲಯವಾಗಿ ಪರಿವರ್ತನೆಯಾಗಿರುವ ವಿಸ್ಮಯ ಕಾರ್ಯ ನಡೆದಿರುವುದು ವಿಶ್ವದಲ್ಲೇ ಮೊದಲು ಎನ್ನಬಹುದು. ದೇವಾಲಯದ ಪ್ರದೇಶ 4.5 ಎಕರೆಯಾಗಿದ್ದು, 600 ಕಾರು ನಿಲ್ಲಲು ಅವಕಾಶವಿದ್ದು , ದೇವಾಲಯದ ಒಳಗೆ ಏಕಕಾಲದಲ್ಲಿ 1000 ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಹಿಂದೂಗಳಿಗೆ ಇದು ಬಹಳ ಸಂತೋಷದ ಸಂಗತಿಯಾಗಿದ್ದು, 30- 40 ವರ್ಷಗಳಿಂದ ಇಲ್ಲೇ ನೆಲೆಸಿರುವ ಭಾರತೀಯರಲ್ಲಿ ಹೆಚ್ಚಿನ ಸಂತಸವನ್ನು ಮೂಡಿಸಿದೆ. ಉಡುಪಿಯ ಕೃಷ್ಣ ತಮ್ಮ ಊರಿಗೆ ಬಂದಿದ್ದಾನೆ ಎಂಬ ಉತ್ಸಾಹದಲ್ಲಿ ದೇವಸ್ಥಾನದ ಉದ್ಘಾಟನೆಗೆ ಓಡಾಡಿದರು. ಶ್ರೀ ಕೃಷ್ಣನಿಗೆ 2 ಕೆ.ಜಿ ಗೂ ಹೆಚ್ಚು ತೂಕದ ಬೆಳ್ಳಿಯ ಕವಚವನ್ನು ರೂಪ ಐಯರ್ ಸಮರ್ಪಿಸಿದ್ದಾರೆ. 35 ವರ್ಷಗಳಿಂದ ಇಲ್ಲಿ ನೆಲೆಸಿರುವ ಜನಾರ್ಧನ್ ರಾವ್ ಅವರು ಶ್ರೀ ಕೃಷ್ಣನಿಗೆ ಚಿನ್ನದ ಕಣ್ಣು, ನಾಮದ ಆಭರಣಗಳನ್ನು ಅರ್ಪಿಸಿದ್ದಾರಲ್ಲದೇ ತಮ್ಮ ಭಕ್ತಿಯ ಸಂತಸಕ್ಕೆ ಪಾರವೇ ಇಲ್ಲ ಎನ್ನುತ್ತಾರೆ. ಅನೇಕ ಸ್ವಯಂ ಸೇವಕರು ದೇವಸ್ಥಾನವನ್ನು ಸುಂದರವಾಗಿ ಸಿಂಗರಿಸುವಲ್ಲಿ ತೊಡಗಿಕೊಂಡ ದೃಶ್ಯ ಇಲ್ಲಿ ಎಲ್ಲ ಕಡೆ ಕಂಡುಬಂದಿತು. ದೇವಸ್ಥಾನದ ಉದ್ಘಾಟನೆಗೆ 1000 ಕ್ಕೂ ಹೆಚ್ಚು ಭಕ್ತಾದಿಗಳು ಸಾಕ್ಷಿಯಾದರು.