ಮಹಾನಗರ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಎರಡು ಪ್ರಮುಖ ಹೆಜ್ಜೆ ಗುರುತುಗಳಿವೆ. ಮೊದಲನೆಯದು 1857ರ ಸಿಪಾಯಿ ದಂಗೆಯಾಗಿದ್ದು, ಎರಡನೆಯದು 1942ರ ಕ್ವಿಟ್ ಇಂಡಿಯಾ ಚಳವಳಿ. ಭಾರತದ ಸ್ವಾತಂತ್ರ್ಯ ಚಳವಳಿಗೆ ಹೊಸ ಸ್ಫೂರ್ತಿ ನೀಡಿ, “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಒಮ್ಮತದ ದನಿಗೆ ಕ್ವಿಟ್ ಇಂಡಿಯಾ ಚಳವಳಿ ಮಹತ್ವದ ವೇದಿಕೆ ಒದಗಿಸಿತು ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನ ಟಾಗೋರ್ ಪಾರ್ಕ್‌ನಲ್ಲಿ ಬುಧವಾರ ಜರಗಿದ ಕ್ವಿಟ್ ಇಂಡಿಯಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ತ್ರಿವರ್ಣ ಧ್ವಜದಡಿ ಎಲ್ಲರೂ ಒಗ್ಗೂಡಿ, ದೇಶದಿಂದ ಪರಕೀಯರನ್ನು ಮೂಲೋತ್ಪಾಟನೆ ಮಾಡಲು ಸಿದ್ಧವಾದ ಸಮಯವಿದು. 75 ವರ್ಷಗಳ ಹಿಂದೆ ಅಂದರೆ 1942ರಲ್ಲಿ ಕೈಗೊಂಡ ಕ್ವಿಟ್ ಇಂಡಿಯಾ ಚಳವಳಿ ಉಗ್ರಸ್ವರೂಪ ಪಡೆದು, ದೇಶವನ್ನೇ ಒಂದಾಗಿ ಬೆಸೆದು ಹೋರಾಟದ ಸ್ವರವನ್ನು ಇನ್ನಷ್ಟು ಗಟ್ಟಿಯಾಗಿಸುವಲ್ಲಿ ಸಹಕರಿಸಿತು.
ವಿಶೇಷವೆಂದರೆ ಆಂದೋಲನ ಆರಂಭ ವಾದ ಐದೇ ವರ್ಷದಲ್ಲಿ ಭಾರತ ಸ್ವಾತಂತ್ರ್ಯವನ್ನು ಪಡೆಯುವಂತಾಯಿತು ಎಂದರು. ನಗರದ ಟಾಗೋರ್ ಪಾರ್ಕ್ ಅಭಿವೃದ್ಧಿಗೆ ಪಾಲಿಕೆ ವಿಶೇಷ ಆದ್ಯತೆ ನೀಡಲಿದೆ. ಗಾಂಧಿ ಪ್ರತಿಮೆ ಇರುವಲ್ಲಿ ಇನ್ನಷ್ಟು ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವ ಇರಾದೆಯಿಂದ ವಿಶೇಷ ಒತ್ತು ನೀಡಲಾಗುವುದು ಎಂದವರು ಹೇಳಿದರು. ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪಾಧ್ಯಕ್ಷರಾದ ಎಂ.ಸೀತಾರಾಮ ಶೆಟ್ಟಿ, ಪ್ರಭಾಕರ ಶ್ರೀಯಾನ್, ಕಾರ್ಯದರ್ಶಿ ಎನ್.ಇಸ್ಮಾಯಿಲ್ ಉಪಸ್ಥಿತರಿದ್ದರು.
ನಾಗೇಶ್ ಕಲ್ಲೂರು ಕಾರ್ಯಕ್ರಮ ನಿರೂಪಿಸಿದರು.