ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕಾದಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ ಸಾರಾ ಅಬೂಬಕ್ಕರ್ ಅವರ “ವಜ್ರಗಳು’ ಕಾದಂಬರಿ ಚಿತ್ರವಾಗುತ್ತಿದೆ. ಆ ಚಿತ್ರಕ್ಕೆ “ಸಾರಾ ವಜ್ರ’ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ, ಈಗಾಗಲೇ ಸದ್ದಿಲ್ಲದೆಯೇ ಚಿತ್ರ ಪೂರ್ಣಗೊಂಡಿದ್ದು, ಡಬ್ಬಿಂಗ್ ಹಂತ ತಲುಪಿದೆ. ಈ ಚಿತ್ರವನ್ನು ಆರ್‍ನಾ ಸಾಧ್ಯ (ಶ್ವೇತಾ ಶೆಟ್ಟಿ) ನಿರ್ದೇಶಿಸಿದ್ದಾರೆ. ಸಂಭ್ರಮ ಡ್ರೀಮ್ ಹೌಸ್ ಬ್ಯಾನರ್‌ನಲ್ಲಿ ದೇವೇಂದ್ರ ರೆಡ್ಡಿ ಸಹಕಾರದೊಂದಿಗೆ ಚಿತ್ರ ನಿರ್ಮಾಣಗೊಂಡಿದೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು ನಿರ್ದೇಶಕಿ ಆರ್‍ನಾ ಸಾಧ್ಯ.”ಇದು ನನ್ನ ಎರಡನೇ ಚಿತ್ರ. ಸಾರಾ ಅಬೂಬಕ್ಕರ್ ಅವರ ಕಾದಂಬರಿ “ವಜ್ರಗಳು’ ಓದಿದ್ದೆ. ಅದನ್ನು ಸಿನಿಮಾ ಮಾಡುವ ಆಸೆ ಆಯ್ತು. ಆದರೆ, ಬೇಗನೇ ರೈಟ್ಸ್ ಸಿಗಲಿಲ್ಲ. ವರ್ಷಗಟ್ಟಲೆ ಕಾದೆ. ಕೊನೆಗೆ ಸಿಕ್ಕಿದ ಬಳಿಕ ಸಿನಿಮಾಗೆ ತಯಾರಿ ನಡೆಸಿದೆ. ದೇವೇಂದ್ರ ರೆಡ್ಡಿ ಅವರ ಸಾರಥ್ಯದಲ್ಲಿ ಚಿತ್ರ ತಯಾರಾಗಿದೆ.
ಅನುಪ್ರಭಾಕರ್ ಅವರಿಗೆ ಕಾಲ್ ಮಾಡಿ, ಒನ್‌ಲೈನ್ ಹೇಳಿದೆ. ಭೇಟಿ ಮಾಡಲು ತಿಳಿಸಿದಾಗ, ಪೂರ್ಣ ಕಥೆ ವಿವರಿಸಿದೆ. ಒಪ್ಪಿದರು. ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಶೇಷ ಅಂದರೆ, ರಮೇಶ್ ಭಟ್ ವಿಭಿನ್ನ ಪಾತ್ರ ಮಾಡಿದ್ದಾರೆ. ಕಾದಂಬರಿಗೆ ಎಲ್ಲೂ ಧಕ್ಕೆ ಆಗದಂತೆ ಚಿತ್ರೀಕರಿಸಿದ್ದೇವೆ. ನೋಡುವ ಪ್ರತಿಯೊಬ್ಬರಿಗೂ ಪಾತ್ರಗಳು ಕಾಡುತ್ತವೆ’ ಎಂದರು ಆರ್‍ನಾ ಸಾಧ್ಯ.
ರಮೇಶ್ ಭಟ್ ಮಾತನಾಡಿ, “ಚಿತ್ರದ ಆಶಯ ಚೆನ್ನಾಗಿದೆ. ಶ್ರೇಷ್ಠ ಲೇಖಕಿ ಬರೆದ ಕಾದಂಬರಿಯನ್ನು ಸಿನಿಮಾ ಮಾಡುವುದು ಸುಲಭವಲ್ಲ. ನಿರ್ದೇಶಕಿ ಅದನ್ನು ಯಶಸ್ವಿಗೊಳಿಸಿದ್ದಾರೆ. ನಾನಿಲ್ಲಿ ವಯಸ್ಸಿನ ಅಂತರ ಇರುವಂತಹ ಪಾತ್ರ ನಿರ್ವಹಿಸಿದ್ದೇನೆ. ಇಲ್ಲಿನ ಕಾಸ್ಟೂಮ್, ಲೊಕೇಷನ್, ಕಲಾವಿದರ ಅಭಿನಯ ಎಲ್ಲವೂ ವಿಶೇಷ. ಡಬ್ಬಿಂಗ್ ಮಾಡುವಾಗ, ನನಗೆ ಚಿತ್ರದಲ್ಲೇನೋ ವಿಶೇಷವಿದೆ ಎನಿಸಿದ್ದು ನಿಜ’ ಎಂದರು ರಮೇಶ್‌ಭಟ್
ಅನುಪ್ರಭಾಕರ್ ಅವರು “ಅನುಕ್ತ’ ಚಿತ್ರದ ಬಳಿಕ ಈ ಚಿತ್ರ ಮಾಡುತ್ತಿದ್ದು, ಅವರಿಗೆ ಇಲ್ಲಿ ಸಫೀಜಾ ಎಂಬ ಪಾತ್ರ ಸಿಕ್ಕಿದೆಯಂತೆ. ಒಳ್ಳೆಯ ಲೇಖಕಿ ಕಾದಂಬರಿಯಲ್ಲಿ ನಾನಿದ್ದೇನೆ ಎಂಬ ಹೆಮ್ಮೆ ಇದೆ. ಅದರಲ್ಲೂ ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಿರ್ದೇಶಕರಿಗೆ ಏನು ಬೇಕು ಎಂಬ ಕ್ಲಾರಿಟಿ ಇದೆ. ಹಾಗಾಗಿ ಸಿನಿಮಾ ಕೂಡ ಚೆನ್ನಾಗಿ ಬಂದಿದೆ. ಇದು ಬ್ಯಾರಿ ಜನರ ಕುರಿತ ಚಿತ್ರಣ ಹೊಂದಿದೆ.
ಹಾಗಂತ ಯಾವುದೇ ಜನಾಂಗದ, ಧರ್ಮದ ವಿಷಯವಿಲ್ಲ. ಮಾನವೀಯ ಮೌಲ್ಯಕ್ಕೆ ಆದ್ಯತೆ ಕೊಡಲಾಗಿದೆ’ ಎಂದರು. ವಿ.ಮನೋಹರ್ ಸಂಗೀತ ನೀಡಿದ್ದು, “ಇದು ನಮ್ಮ ಊರಿನ ಬರಹಗಾತಿ ಬರೆದ ಕಾದಂಬರಿ ಆಧರಿತ ಚಿತ್ರ. ನಾನು ಹಲವು ಬ್ಯಾರಿ ಗೆಳೆಯರ ಜೊತೆ ಓಡಾಡಿದವನು. ಅವರ ಮನೆಗಳಲ್ಲಿ ಸುತ್ತಾಡಿದವನು. ಹಾಗಾಗಿ, ಚಿತ್ರದ ಪಾತ್ರ ನೋಡಿದಾಗ, ಅವರನ್ನು ಎಲ್ಲೋ ನೋಡಿದ್ದೇನೆಂಬ ಭಾಸವಾಗುತ್ತೆ. ಇಲ್ಲಿ ನನ್ನ ಜವಾಬ್ದಾರಿ ಹೆಚ್ಚಿದೆ.
ಯಾಕೆಂದರೆ, ಬ್ಯಾರಿ ಸಂಸ್ಕೃತಿ, ಆಚರಣೆಗೆ ತಕ್ಕಂತೆ ಸಂಗೀತದ ಕೆಲಸ ಮಾಡಬೇಕಿದೆ’ ಎಂದರು ಮನೋಹರ್. ರೆಹಮಾನ್ ಚಿತ್ರದಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದಾರಂತೆ. ಇಂತಹ ಮಗ ಬೇಕಿತ್ತಾ, ಇಂತಹ ಪತಿ ಬೇಕಾ ಎನ್ನುವಂತಹ ಪಾತ್ರವಂತೆ. ನವ ಪ್ರತಿಭೆ ಪುನೀತ್ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಪರಮೇಶ್ ಛಾಯಾಗ್ರಹಣವಿದೆ. ಅಕ್ಷಯ್ ಪಿ.ರಾವ್ ಸಂಕಲನವಿದೆ. ಚಿತ್ರದಲ್ಲಿ ಸುಧಾ ಬೆಳವಾಡಿ, ಸುಹಾನ ಸೈಯದ್, ಪ್ರದೀಪ್ ಪೂಜಾರಿ, ವಿಭಾಸ್ ಇತರರು ಇದ್ದಾರೆ.