ಬೆಳಗಾವಿ: ಹೊಸ ಕೈಗಾರಿಕೆಗಳ ಸ್ಥಾಪನೆ, ಉದ್ಯಮಿಗಳಿಗೆ ಸಕಲ ಸೌಲಭ್ಯ ಹಾಗೂ ಉತ್ತೇಜನ ನಿಟ್ಟಿನಲ್ಲಿ ನವೆಂಬರ್ ಇಲ್ಲವೇ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ನೂತನ ಕೈಗಾರಿಕಾ ನೀತಿ ಜಾರಿಗೆ ತರಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ರಾಜ್ಯ ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ ಹಾಗೂ ಇಚಲಕರಂಜಿ ಉದ್ಯಮಿಗಳ ಜೊತೆ ಬುಧವಾರ ಸಂವಾದ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಕುರಿತು ಈಗಾಗಲೇ ಅಧಿಕಾರಿಗಳ ಜೊತೆ ವಿವಿಧ ಹಂತಗಳ ಸಭೆ ನಡೆಸಲಾಗಿದೆ. ಸದ್ಯದಲ್ಲೇ ಗುಜರಾತ್, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಕೈಗಾರಿಕಾ ನೀತಿಗಳನ್ನು ಅಧ್ಯಯನ ಮಾಡಿ ಕೈಗಾರಿಕೆ ಅಭಿವೃದ್ಧಿಗೆ ಪೂರಕವಾದ ನೀತಿ ಜಾರಿಗೆ ತರಲಾಗುವುದೆಂದರು.
ಬೆಳಗಾವಿ, ಹುಬ್ಬಳ್ಳಿ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮಹಾರಾಷ್ಟ್ರದ ಇಚಲಕರಂಜಿ, ಕೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲೆಯ ವಿವಿಧ ಭಾಗಗಳ ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಫೌಂಡ್ರಿ ಹಾಗೂ ಜವಳಿ ಉದ್ಯಮ ಆರಂಭದ ಬಗ್ಗೆ ಹೆಚ್ಚು ಒಲವು ವ್ಯಕ್ತವಾಗಿದೆ. ಈ ಬಗ್ಗೆ ಅವರೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಲಾಗುವುದು ಎಂದರು.
ಹೊಸ ಕೈಗಾರಿಕಾ ನೀತಿ ಜಾರಿ ಸಂಬಂಧ ಸದ್ಯದಲ್ಲೇ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ವಾಣಿಜ್ಯೋದ್ಯಮ ಸಂಸ್ಥೆಗಳು ಸೇರಿ ವಿವಿಧ ಸಂಘ-ಸಂಸ್ಥೆ, ಉದ್ಯಮಿಗಳ ಸಭೆ ನಡೆಸಿ ಸರ್ಕಾರದ ಮುಂದಿನ ಕೈಗಾರಿಕಾ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ರಾಜ್ಯದಲ್ಲಿ ಎಲ್ಲಾ ಕೈಗಾರಿಕೆಗಳು ಕೇವಲ ಬೆಂಗಳೂರಿನಲ್ಲೇ ಕೇಂದ್ರಿಕೃತವಾಗಿವೆ ಎಂಬ ಅಸಮಾಧಾನವಿದೆ.
ಹೀಗಾಗಿ ಬೆಳಗಾವಿ, ಹುಬ್ಬಳ್ಳಿ ನಗರಗಳಲ್ಲದೆ 2ನೇ ದರ್ಜೆ ನಗರಗಳಲ್ಲಿಯೂ ಯೋಜನೆ ವಿಸ್ತರಣೆ ಮಾಡುವ ಚಿಂತನೆ ಇದೆ. ಉದ್ಯಮಿಗಳು ಬೆಂಗಳೂರು ಬಿಟ್ಟು ಹೊರಗಡೆ ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬಂದರೆ ಅವರಿಗೆ ಎಲ್ಲ ಸಹಾಯ ಹಾಗೂ ಸಹಕಾರ ನೀಡಲಾಗುವುದು ಎಂದರು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ ಇದ್ದರು.
ಕೈಗಾರಿಕಾ ನಿವೇಶನಗಳ ಆಡಿಟ್: ರಾಜ್ಯದ ಅನೇಕ ಕಡೆ ಕಳೆದ 30 ವರ್ಷಗಳಿಂದ ಕೈಗಾರಿಕೆಗಳ ಸ್ಥಾಪನೆಗೆ ಸಾಕಷ್ಟು ಜನ ನಿವೇಶನ ಪಡೆದುಕೊಂಡಿದ್ದಾರೆ. ಆದರೆ, ಸಾಕಷ್ಟು ನಿವೇಶನ ಖಾಲಿ ಬಿದ್ದಿದ್ದು ಅಂತಹ ನಿವೇಶನ ಮರಳಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೈಗಾರಿಕೆಗಳ ನಿವೇಶನ ರಿಯಲ್ ಎಸ್ಟೇಟ್ ವ್ಯವಹಾರವಾಗಬಾರದು. ಈ ಕಾರಣದಿಂದ ಕೈಗಾರಿಕಾ ನಿವೇಶನಗಳ ಹಂಚಿಕೆ ಹಾಗೂ ಅದರ ಬಳಕೆ ಕುರಿತು ಆಡಿಟ್ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ, ಕೈಗಾರಿಕಾ ಅದಾಲತ್ ನಡೆಸುವ ಉದ್ದೇಶ ಇದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.