Advertisement

ಬೆಳೆಗಳಿಗೆ ರಸಗೊಬ್ಬರ ಹಾಕಲು ರೈತರ ಹೊಸ ಐಡಿಯಾ!

05:53 PM Jul 30, 2023 | Team Udayavani |

ಭರಮಸಾಗರ :40/50 ಕೆಜಿ ತೂಕದ ಯೂರಿಯಾ ಇತರೆ ರಸಾಯನಿಕ ಚೀಲಗಳಲ್ಲಿನ ಗೊಬ್ಬರವನ್ನು ಬೆಳೆಗಳಿಗೆ ತಲುಪಿಸಲು ಇಲ್ಲೊಬ್ಬ ರೈತ ಪ್ಲಾಸ್ಟಿಕ್ ಗೊಬ್ಬರದ ಚೀಲಗಳನ್ನೇ ಬಳಸಿ ಹೊಸ ಬಳಕೆ ವಿಧಾನ ಕಂಡುಕೊಂಡಿದ್ದಾರೆ.

Advertisement

ಸಮೀಪದ ಕೋಗುಂಡೆ ಗ್ರಾಮದ ಸಂತೋಷ್ ಮತ್ತು ತಿಪ್ಪೇಸ್ವಾಮಿ ಎಂಬ ಯುವ ರೈತರೇ ಪ್ಲಾಸ್ಟಿಕ್ ಚೀಲ ಬಳಸಿ ಗೊಬ್ಬರ ಹಾಕುವ ವಿಧಾನ ಬಳಸಿರುವವರು.

ಯೂರಿಯಾ ಸೇರಿದಂತೆ ಇತರೆ ರಸಾಯನಿಕ ಗೊಬ್ಬರಗಳನ್ನು ಭೂಮಿಯಿಂದ ಮೇಲ್ಮಟ್ಟದಲ್ಲಿ ಬೆಳೆದ ಫಸಲಿಗೆ ತಲುಪಿಸಲು ರೈತರು ಇದೀಗ ಸೊಂಟಕ್ಕೆ ಬಟ್ಟೆಯಿಂದ ಉಡಿ ಕಟ್ಟಿಕೊಳ್ಳುವ ಬದಲು ಪ್ಲಾಸ್ಟಿಕ್ ಗೊಬ್ಬರದ ಚೀಲಗಳನ್ನೇ ಜಾಕೆಟ್ ಗಳಂತೆ ವಿನ್ಯಾಸ ಮಾಡಿಕೊಂಡು ಗೊಬ್ಬರ ಹಾಕುವ ಸರಳ ವಿಧಾನವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

40/50 ಕೆಜಿ ತೂಗುವ ಹಳೆಯ ಯೂರಿಯಾ ಚೀಲವನ್ನು ಬಳಸಿ ಅದರಿಂದ ಎರಡು ಕೈಗಳು ಒಳ ತೂರುವಂತೆ ಗಾತ್ರಕ್ಕೆ ತಕ್ಕಷ್ಟು ಚೀಲದ ತಳಭಾಗದಿಂದ ಚೀಲದ ಎರಡು ಮಗ್ಗಲಲ್ಲಿ ಕತ್ತರಿಸಿಕೊಂಡಿದ್ದಾರೆ. ಚೀಲದ ಕೆಳ ಬದಿಯ ಒಂದು ಮಗ್ಗಲನ್ನು ಮಡಚಿ ಗೊಬ್ಬರ ತುಂಬುವ ಪಾಕೆಟ್ ನ್ನು ರಾಟೆಯಿಂದ ಹೊಲಿಗೆ ಹಾಕಲಾಗಿದೆ. ಇನ್ನೂ ಚೀಲವನ್ನು ತಲೆಯ ಮೇಲಿಂದ ಧರಿಸುವಂತೆ ವಿನ್ಯಾಸ ಮಾಡಿಕೊಳ್ಳಲಾಗಿದೆ. ಹೀಗೆ ಈ ಚೀಲವನ್ನು ಗೊಬ್ಬರ ಹಾಕುವ ಚೀಲವನ್ನಾಗಿ ಮಾಡಿಕೊಳ್ಳಲು ಕನಿಷ್ಟ 5 ರೂ ಖರ್ಚಾಗಬಹುದು. ಕೈಯಿಂದ ಹೊಲಿಗೆ ಹಾಕಿಕೊಂಡರೆ ಖರ್ಚಿಲ್ಲದೆ ಗೊಬ್ಬರ ಹಾಕುವ ಚೀಲ ಸಿದ್ದಪಡಿಸಿಕೊಳ್ಳಬಹುದು.

ಪ್ಲಾಸ್ಟಿಕ್ ಚೀಲದಿಂದ ರೂಪಿಸಿದ ಈ ಜಾಕೆಟ್ ಚೀಲದಲ್ಲಿ ಸುಮಾರು ಹತ್ತು ಕೆಜಿ ಗೊಬ್ಬರ ಹಾಕಿಕೊಂಡು ಗಿಡಗಳಿಗೆ ಹಾಕಲು ತೆಗೆದೊಯ್ಯಬಹುದು. ಇದರಿಂದ ಧರಿಸಿದ ಬಟ್ಟೆಗಳು ಕೊಳೆ ಆಗುವುದಿಲ್ಲ. ಉಡಿ ಬಟ್ಟೆ ಆದರೆ ಅದನ್ನು ಸೊಂಟಕ್ಕೆ ಬಿಗಿದುಕೊಳ್ಳಬೇಕು. ಪದೇ ಪದೇ ಬಿಚ್ಚುವ ಇತರೆ ಸಮಸ್ಯೆಗಳಿರುತ್ತದೆ. ಈ ಪ್ಲಾಸ್ಟಿಕ್ ಧರಿಸುವ ಗೊಬ್ಬರದ ಚೀಲದಲ್ಲಿ ಯಾವುದೇ ತೊಂದರೆಗಳು ಇರುವುದಿಲ್ಲ ಎನ್ನುತ್ತಾರೆ ಕೋಗುಂಡೆ ಗ್ರಾಮದ ಯುವ ರೈತರಾದ ಸಂತೋಷ್ ಮತ್ತು ತಿಪ್ಪೇಸ್ವಾಮಿ.

Advertisement

ಒಟ್ಟಾರೆ ಮೇಲ್ಗೊಬ್ಬರವನ್ನು ಫಸಲಿಗೆ ಹಾಕುವಲ್ಲಿ ಹೊಸ ವಿಧಾನ ಬಳಕೆ ಮಾಡಿಕೊಳ್ಳುವ ಇಂಥಹ ರೈತರ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next