Advertisement

ನೂತನ ಹಾಕಿ ಕೋಚ್‌ ನೇಮಕ “ಟಾರ್ಗೆಟ್‌ ಟೋಕ್ಯೊ’ಆಗಿರಲಿ

11:45 PM Jan 18, 2019 | |

ಭಾರತೀಯ ಹಾಕಿಯಲ್ಲಿ ಮತ್ತೆ ಕೋಚ್‌ ಬದಲಾವಣೆ ಸಂಭವಿಸಿದೆ. ಇದು 6 ವರ್ಷಗಳಲ್ಲಿ ಬದಲಾಗುತ್ತಿರುವ 6ನೇ ಕೋಚ್‌. ಹಾಕಿ ಇಂಡಿಯಾ ಪದೇ ಪದೇ ಹೀಗೇಕೆ ಮಾಡುತ್ತಿದೆ ಎಂಬ ಪ್ರಶ್ನೆ ಕಾಡುತ್ತಿರುವ ನಡುವೆಯೇ ಈ “ಕೋಚ್‌ ಬದಲಾವಣೆ ಪ್ರಕ್ರಿಯೆ’ಗೆ ಪೂರ್ಣ ವಿರಾಮ ಬೀಳಬೇಕೆಂಬುದು ಕ್ರೀಡಾಪ್ರೇಮಿಗಳ ಆಗ್ರಹ. ಕಾರಣ, ಇನ್ನೊಂದೇ ವರ್ಷದಲ್ಲಿ ಟೋಕಿಯೊ ಒಲಿಂಪಿಕ್ಸ್‌ ಎದುರಾಗಲಿದೆ.

Advertisement

ಒಂದು ಕಾಲದಲ್ಲಿ ಭಾರತೀಯ ಹಾಕಿ ಒಲಿಂಪಿಕ್ಸ್‌ ಚಿನ್ನ ಗೆಲ್ಲುವ ಮೂಲಕ ವಿಶ್ವ ಮಟ್ಟದಲ್ಲಿ ಸುದ್ದಿಯಲ್ಲಿತ್ತು. ರಾಜನಾಗಿ ಮೆರೆದಿತ್ತು. ಆದರೆ ಕಾಲ ಬದಲಾಗಿದೆ. ಒಲಿಂಪಿಕ್ಸ್‌ ಪದಕ ಮರೀಚಿಕೆಯಾಗುತ್ತಿದೆ. ಇದಕ್ಕೆ ತರಬೇತುದಾರರ ಸತತ ಬದಲಾವಣೆಯೂ ಒಂದು ಕಾರಣ ಎಂಬುದು ರಹಸ್ಯವೇನಲ್ಲ.  ಪರಿವರ್ತನೆ ಜಗದ ನಿಯಮ ನಿಜ, ಆದರೆ ಈ ಪರಿವರ್ತನೆ ಅತಿಯಾದರೆ ಪ್ರಹಸನವಾಗುತ್ತದೆ. ಭಾರತೀಯ ಹಾಕಿಯಲ್ಲಿ ಆಗಿರುವುದೂ ಇದೇ.ಇದಕ್ಕೆ ತಾಜಾ ಉದಾಹರಣೆ ಹರೇಂದ್ರ ಸಿಂಗ್‌. ತವರಲ್ಲಿ ನಡೆದ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ಭಾರತ ಯಶಸ್ಸು ಸಾಧಿಸಲಿಲ್ಲ ಎಂಬ ಕಾರಣಕ್ಕೆ ಅವರ ತಲೆದಂಡವಾಗಿದೆ. ಈಗ ಹೊಸ ತರಬೇತುದಾರನಿಗಾಗಿ ಅರ್ಜಿ ಕರೆಯಲಾಗಿದೆ.

ಸದ್ಯದಲ್ಲೇ ಭಾರತ ತಂಡಕ್ಕೆ ಮತ್ತೂಬ್ಬ ಕೋಚ್‌ನ ನೇಮಕವಾಗಲಿದೆ. ಈ ವರ್ಷ ಯಾವುದೇ ದೊಡ್ಡ ಕೂಟವಿಲ್ಲ. ಆದರೆ ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್‌ ಇದೆ. ಭಾರತವಿನ್ನೂ ನೇರ ಅರ್ಹತೆ ಸಂಪಾದಿಸಿಲ್ಲ. ಈ ಹಿನ್ನೆಲೆಯಲ್ಲಿ ನೂತನ ತರಬೇತುದಾರನ ಕರ್ತವ್ಯ ಅತ್ಯಂತ ಮಹತ್ವವೂ ಜವಾಬ್ದಾರಿಯುತವೂ ಆಗಲಿದೆ. ಇದು “ಹಾಕಿ ಇಂಡಿಯಾ’ಕ್ಕೂ ಅನ್ವಯಿಸುವ ಮಾತು. ಯಾವುದೇ ಕಾರಣಕ್ಕೂ ಅದು ನೂತನ ತರಬೇತುದಾರನನ್ನು ಉಚ್ಚಾಟಿಸುವ ಕೆಲಸಕ್ಕೆ  ಮುಂದಾಗಬಾರದು. ನಮ್ಮದು “ಟಾರ್ಗೆಟ್‌ ಟೋಕಿಯೊ’ ಆಗಿರಬೇಕು. ಈಗ ಆಯ್ಕೆಗೊಂಡ ಕೋಚ್‌, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ದೊರಕಿಸಿಕೊಡುವುದನ್ನೇ ಗುರಿ ಆಗಿರಿಸಿಕೊಂಡು ದುಡಿಯಬೇಕಿದೆ.

 ಆರಕ್ಕೇರಲಿಲ್ಲ ನಮ್ಮ ಹಾಕಿ
ಕೋಚ್‌ ಬದಲಾವಣೆಗಳಿಂದ ಭಾರತೀಯ ಹಾಕಿಗೆ ಆದ ಲಾಭ ಏನೂ ಇಲ್ಲ. 6 ವರ್ಷಗಳಲ್ಲಿ 6 ಕೋಚ್‌ಗಳನ್ನು ಬದಲಾಯಿಸಿದರೂ ಭಾರತೀಯ ಹಾಕಿ ಆರಕ್ಕೆ ಏರಿಲ್ಲ. ಎಲ್ಲಿಯ ತನಕ ಯುರೋಪಿಯನ್‌ ಶೈಲಿಯ “ಮಾಡರ್ನ ಹಾಕಿ’ಗೆ ಭಾರತ ಒಗ್ಗಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ಪ್ರಶಸ್ತಿ ಮರೀಚಿಕೆಯೇ ಆಗಿ ಉಳಿಯುತ್ತದೆ. 2012-18ರ ನಡುವೆ ನಾನಾ ಕಾರಣಗಳಿಂದ ಹುದ್ದೆ ಕಳೆದುಕೊಂಡ ಹಾಕಿ ಕೋಚ್‌ಗಳೆಂದರೆ ಮೈಕಲ್‌ ನಾಬ್ಸ್, ಟೆರ್ರಿ ವಾಲ್ಶ್, ಪೌಲ್‌ ವಾನ್‌ ಆ್ಯಸ್‌, ರೊಲ್ಯಾಂಟ್‌ ಓಲ್ಟ್ಮನ್ಸ್‌, ಸೋರ್ಡ್‌ ಮರಿನ್‌ ಮತ್ತು ಹರೇಂದ್ರ ಸಿಂಗ್‌.

 ಯಶಸ್ಸಿಗೆ ಕೇವಲ ಕೋಚ್‌ ಕಾರಣನಲ್ಲ
ಕೋಚ್‌ ಬದಲಾದ ಮಾತ್ರಕ್ಕೆ ತಂಡದ ಆಟದ ಮಟ್ಟದಲ್ಲಿ ಸುಧಾರಣೆ ಆಗುತ್ತದೆ, ತಂಡ ಒಮ್ಮೆಲೇ ವಿಶ್ವ ಮಟ್ಟಕ್ಕೆ ಏರುತ್ತದೆ ಎಂಬುದೆಲ್ಲ ಬರೀ ಭ್ರಮೆ. ಇದಕ್ಕೆ ಭಾರತೀಯ ಕ್ರಿಕೆಟಿನ ಎರಡು ಉದಾಹರಣೆಗಳನ್ನು ಕೊಡಬಹುದು. ಕಪಿಲ್‌ದೇವ್‌ ನೇತೃತ್ವದ ಭಾರತ 1983ರಲ್ಲಿ ಏಕದಿನ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದಾಗ ತಂಡಕ್ಕೆ ತರಬೇತುದಾರರೇ ಇರಲಿಲ್ಲ. ಹಾಗೆಯೇ ಸೌರವ್‌ ಗಂಗೂಲಿ ಕಾಲದಲ್ಲಿ ಅತ್ಯಂತ ಬಲಿಷ್ಠ ತಂಡವಾಗಿದ್ದ ಭಾರತ, ಗ್ರೆಗ್‌ ಚಾಪೆಲ್‌ ಕೋಚ್‌ ಆಗಿ ಬಂದೊಡನೆ ನುಚ್ಚುನೂರಾದ ಇತಿಹಾಸವೂ ಕಣ್ಣಮುಂದಿದೆ.

Advertisement

ಹೀಗೆ ನಡೆದಿದೆ ಕೋಚ್‌ ಬದಲಾವಣೆಯ “ಆಟ’…
2012ರ ಲಂಡನ್‌ ಒಲಿಂಪಿಕ್ಸ್‌ಗೂ ಮುನ್ನ ಆಸ್ಟ್ರೇಲಿಯದ ಮೈಕಲ್‌ ನಾಬ್ಸ್ ಅವರನ್ನು ಹಾಕಿ ಕೋಚ್‌ ಆಗಿ ನೇಮಿಸಲಾಯಿತು. ಒಲಿಂಪಿಕ್ಸ್‌ನಲ್ಲಿ ಭಾರತ ಕಟ್ಟಕಡೆಯ ಸ್ಥಾನಕ್ಕೆ ಕುಸಿಯಿತು. ನಾಬ್ಸ್ ಅವರನ್ನು ಉಚ್ಚಾಟಿಸಲಾಯಿತು ಎಂದು ಬೇರೆ ಹೇಳಬೇಕೆಂದಿಲ್ಲ.

2013ರಲ್ಲಿ ಮತ್ತೋರ್ವ ಆಸ್ಟ್ರೇಲಿಯನ್‌ ಟೆರ್ರಿ ವಾಲ್ಶ್ ಕೋಚ್‌ ಆದರು. ಭಾರತ ಧಾರಾಳ ಯಶಸ್ಸು ಕಂಡಿತು. ಏಶ್ಯನ್‌ ಗೇಮ್ಸ್‌ ಚಿನ್ನ ಗೆದ್ದು 2016ರ ರಿಯೋ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆಯಿತು. ಆದರೆ ಹಾಕಿ ಇಂಡಿಯಾದ “ವಿಪರೀತ ಹಸ್ತಕ್ಷೇಪ’ವನ್ನು ವಾಲ್ಶ್ ವಿರೋಧಿಸಿದರು. ಪರಿಣಾಮ, 2015ರ ಜನವರಿಯಲ್ಲೇ ಗೇಟ್‌ಪಾಸ್‌! ವಾಲ್ಶ್ ಬಳಿಕ ಪೌಲ್‌ ವಾನ್‌ ಆ್ಯಸ್‌ ಬಂದರು. ಆದರೆ ಇವರಿಗೂ ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್‌ ಬಾತ್ರಾ ಅವರಿಗೂ ತಾಗಿಬಂತು. ಆ್ಯಶ್‌ ಹುದ್ದೆ ಕಳೆದುಕೊಂಡರು. ಮುಂದಿನದು ರೊಲ್ಯಾಂಟ್‌ ಓಲ್ಟ್ಮನ್ಸ್‌ ಸರದಿ. ರಿಯೋ ಒಲಿಂಪಿಕ್ಸ್‌ ವೇಳೆ ಇವರದೇ ಮಾರ್ಗದರ್ಶನ. ಅಲ್ಲಿ ಭಾರತ ಪದಕದಿಂದ ದೂರ ಉಳಿಯಿತು. ಓಲ್ಟ್ಮನ್ಸ್‌ ಅವರನ್ನೂ ದೂರ ಕಳುಹಿಸಲಾಯಿತು.

2017ರಲ್ಲಿ ಕೋಚ್‌ ಆಗಿದ್ದವರು ಸೋರ್ಡ್‌ ಮರಿನ್‌. ಏಶ್ಯ ಕಪ್‌, ವರ್ಲ್ಡ್ ಲೀಗ್‌ ಫೈನಲ್‌, ನ್ಯೂಜಿಲೆಂಡ್‌ ಸರಣಿಯಲ್ಲಿ ಚೇತೋಹಾರಿ ನಿರ್ವಹಣೆ ನೀಡಿತು. ಅಜ್ಲಾನ್‌ ಶಾ ಕಪ್‌ ಹಾಗೂ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ವಿಫ‌ಲವಾದೊಡನೆಯೇ ಮರಿನ್‌ ಅವರನ್ನೂ ಮನೆಗೆ ಕಳುಹಿಸಲಾಯಿತು.

ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next