Advertisement

Navaratri: ನವ ಮಹಾಭಾರತ- ದ್ರೌಪದಿಯ ನಿಟ್ಟುಸಿರಿಗೆ ಕೊನೆ ಎಂದು…? ಬದಲಾಗದ ಹೆಣ್ಣಿನ ಬವಣೆ

04:05 PM Oct 02, 2024 | Team Udayavani |

ಅಂದು ಭಗವಂತನೇ ಭುವಿಯ ಮೇಲಿದ್ದ ಕಾಲ. ಜಾರಿದ ಸೆರಗಿನ ಹಿಂದೆ ಮಹಾಭಾರತವೇ ನಡೆಯಿತು. ದುಶ್ಯಾಸನನ ಒಡಲ ಬಗೆದು ಆ ನೆತ್ತರಲ್ಲಿ ಪಾಂಚಾಲಿ ತನ್ನ ನೀಳವಾದ ಕೇಶರಾಶಿಯನ್ನು ತೊಳೆದು ಚೂಡಾಮಣಿಯನ್ನು ಧರಿಸಿದಳು. ನೆತ್ತರ ಹನಿಗಳು ನೆತ್ತಿ ಮೇಲಿನಿಂದ ಕೆನ್ನೆಗೆ ಜಾರಿದ್ದೇ ತಡ, ಅಲ್ಲಿಯವರೆಗೆ ಕಣ್ಣೀರ ಹರಿವಿಗೆ ಕೆನ್ನೆ ಮೇಲೆ ಛಾಪುಗೊಂಡಿದ್ದ ಕಣಿವೆಗಳು ಹೆಜ್ಜೆ ಗುರುತುಗಳು ಇಂದು ನೆತ್ತರ ಪ್ರವಾಹಗಳಾದವು. ದ್ರೌಪದಿಯ ಕಣ್ಣುಗಳಲ್ಲಿ ಹೊತ್ತಿ ಉರಿಯುತ್ತಿದ್ದ ಆ ಬೆಂಕಿ, ರಕ್ತದ ಓಕುಳಿಯಲ್ಲಿ ತಣ್ಣಗಾದವು. ಅಲ್ಲಿಗೆ ದುಶ್ಯಾಸನನ ಅಂತ್ಯವಾಯಿತು.

Advertisement

ಆದರೆ ಆ ನೆತ್ತರಹನಿಗಳು ಮತ್ತೆ ಸೇರಿದ್ದು ಕ್ಷಮಯಾ ಧರಿತ್ರಿಯ ಮೇಲೆಯೇ. ಮಳೆ ಸೇರಿ ಹರಿದದ್ದು ಗಂಗೆಯ ಮಡಿಲಲ್ಲೇ. ಅದಕ್ಕೆ ಇರಬೇಕು ಆ ಕಣಗಳು ಇನ್ನು ಭೂಮಿಯನ್ನು ಬಿಟ್ಟುಹೋಗಿಲ್ಲ. ವರ್ಷಗಳು ಉರುಳಿದವು ಮಹಾಭಾರತ ಈಗ ನವಭಾರತವಾಯಿತು.

ಹೊಸ ಕನಸು, ಹೊಸ ಬದುಕು ಆದರೆ ಬಾನೆತ್ತರ ಹಾರಿದರೂ ಭಗವಂತನನ್ನು ನಾವಿನ್ನು ತಲುಪಿಲ್ಲ.

ಸಂಜೆ ಕತ್ತಲು ಮುಸುಕಿದಂತೆ ಮತ್ತೆ ಮಹಾಭಾರತ ಪರ್ವ. ಇಲ್ಲಿ ದ್ರೌಪದಿ ಇನ್ನೂ ಎರಡು ತಿಂಗಳ ಹಸುಗೂಸು, ಎಪ್ಪತ್ತರ ತಾಯಿ, ಇಪ್ಪತ್ತರ ಯುವತಿ, ನಲವತ್ತರ ಹೆಣ್ಣು ಅಥವಾ ಆಕೆ ಮನುಷ್ಯಳೇ ಅಲ್ಲವೇನೋ. ಚದುರಂಗದ ಆಟವಿಲ್ಲ, ಶಕುನಿ ಯಾರು ತಿಳಿದಿಲ್ಲ. ಕೌರವರು ಪಾಂಡವರು ಒಂದೇ ಪಡೆಯಲ್ಲಿ ನಿಂತಿಹರು, ತನ್ನವರು ಪರರು ಎಲ್ಲರು ಒಂದೇ ಸಭೆಯೊಳಗೆ ಕುಳಿತಿದ್ದಾರೆ. ಅಂತಃಪುರವೂ ಸುರಕ್ಷಿತವಲ್ಲ. ಬೆಳಕು ಇರುವಾಗಲೂ ಬದುಕು ಸುಲಭವಲ್ಲ. ಇನ್ನು ಕತ್ತಲ ಪ್ರಪಂಚ ನಮ್ಮದಲ್ಲವೇ ಅಲ್ಲ. ದೂರದಲಿ ಮತ್ತೆ ಕಾಣುತ್ತ ಇರುವುದು ಅದೇ ನೆರಳು, ದುಶ್ಯಾಸನನಿಗೆ ಇಲ್ಲಿ ರೂಪ ಹಲವು.

ಚೂಡಾಮಣಿ ಮತ್ತೆ ಧರೆ ಸೇರಿತು, ಯುದ್ಧಗಳಿಗೆಲ್ಲ ಸ್ವಲ್ಪ ಜಿಬಿ ಡೇಟಾ ಬಾಣಗಳೇ ಸಾಕಾಯಿತು. ರಣರಂಗ ಈಗ ಅಂಗೈಯಲ್ಲೇ ಇದೆ. ಹದಿನಾಲ್ಕು ದಿನವೂ ಇಲ್ಲ ಈಗಿನ ಯುದ್ಧದ ಪರ್ವ. ಅಲ್ಲಲ್ಲಿ ವಸ್ತ್ರಾಪಹರಣ, ಅಲ್ಲಲ್ಲಿ ಅತ್ಯಾಚಾರ, ಸಂಜಯನ ಮಾಧ್ಯಮ ವಿಭಾಗ ಕೌರವರ ಪರವೋ ಪಾಂಡವರ ಪರವೋ ತಿಳಿದಿಲ್ಲ. ಧರ್ಮರಾಯನ ಸರಕಾರದ ಬಳಿ ಪ್ರಯೋಗಿಸಲು ಅಸ್ತ್ರಗಳೇ ಇಲ್ಲ.

Advertisement

ದ್ರೌಪದಿಯ ಚಿತೆಯ ಬೆಂಕಿಯಲ್ಲಿ ಹಲವು ಮೇಣದಬತ್ತಿಗಳು ಉರಿದು ಮುಗಿದವು. ಕಾವಿರದ ಕಿಚ್ಚು ಹೆಚ್ಚು ಹೊತ್ತು ಉಳಿಯಲಿಲ್ಲ.

ಮತ್ತೆ ಒಂದು ಹೊಸ ದಿನ ಹೊಸ ಅಧ್ಯಾಯ ದುಶ್ಯಾಸನನ ಮರು ಜನ್ಮ ಪ್ರತಿದಿನದ ಮಹಾಭಾರತ; ಇದು ಮಹಾ ‘ಭಾರತʼ ಭಾಗ ನೂರು ಮತ್ತೆ ಹತ್ತು ….

ತೇಜಸ್ವಿನಿ.ವಿ.ಎನ್

Advertisement

Udayavani is now on Telegram. Click here to join our channel and stay updated with the latest news.

Next