ಮುಂಬಯಿ: ಬಿಗ್ ಬಾಸ್ ಓಟಿಟಿ -2 ವಿಜೇತ, ಯೂಟ್ಯೂಬರ್ ಎಲ್ವಿಶ್ ಯಾದವ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಅವರ ವಿರುದ್ದ ಮತ್ತೊಂದು ಎಫ್ ಐಆರ್ ದಾಖಲಾಗಿದೆ.
ಇತ್ತೀಚೆಗಷ್ಟೇ ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ವಿಶ್ ಯಾದವ್ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರು ಜಾಮೀನು ಪಡೆದು ಹೊರಗಡೆ ಬಂದಿದ್ದರು.
ಸದಾ ಒಂದಲ್ಲ ಒಂದು ವಿವಾದದಿಂದಲೇ ಸುದ್ದಿ ಆಗುವ ಅವರು, ಈ ಹಿಂದೆ ಯೂಟ್ಯೂಬರ್ ಒಬ್ಬನನ್ನು ಥಳಿಸಿದ್ದರು. ಹಾವಿನ ವಿಷ ಪ್ರಕರಣದಲ್ಲಿ ಐದು ದಿನ ಜೈಲಿನಲ್ಲಿದ್ದ ಎಲ್ವಿಶ್ ಮೇಲೆ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.
ಮ್ಯೂಸಿಕ್ ಆಲ್ಬಂ ಸಾಂಗ್ ವೊಂದರಲ್ಲಿ ನಿಷೇಧಿತ ಹಾವುಗಳನ್ನು ಬಳಸಿರುವುದಕ್ಕೆ ಪ್ರಾಣಿ ಹಕ್ಕುಗಳ ಕಾರ್ಯಕರ್ತ ಸೌರಭ್ ಗುಪ್ತಾ ಅವರು ದೂರು ನೀಡಲು ಇತ್ತೀಚೆಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಅದರಂತೆ ಈ ಬಗ್ಗೆ ಗುರುಗ್ರಾಮ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬಿಜೆಪಿ ಸಂಸದೆ ಮೇನಕಾ ಗಾಂಧಿಯವರ ಪೀಪಲ್ ಫಾರ್ ಅನಿಮಲ್ಸ್‌ನೊಂದಿಗೆ ಕೆಲಸ ಮಾಡುವ ಗುಪ್ತಾ ಅವರು, ಎಲ್ವಿಶ್ ಜೊತೆಗೆ ಹಾಡಿನಲ್ಲಿ ಕಾಣಿಸಿಕೊಂಡಿರುವ ಇತರ 50 ಜನರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಎಲ್ವಿಶ್ ಜೊತೆಗೆ, ʼಕಾರ್ ಗಯಿ ಚುಲ್ʼ ಖ್ಯಾತಿಯ ಫಾಜಿಲ್‌ಪುರಿಯಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಗಾಯಕ ರಾಹುಲ್ ಯಾದವ್ ವಿರುದ್ಧವೂ ದೂರು ದಾಖಲಿಸಲಾಗಿದೆ.