Advertisement

ಹೊಸ ರೈತರ ಸಾಲ ಮುಂದಿನ ವರ್ಷ ದುಪ್ಪಟ್ಟು

06:15 PM Oct 04, 2021 | Team Udayavani |

ಕಲಬುರಗಿ: ಹೊಸದಾಗಿ ರೈತರಿಗೆ ವಿತರಿಸುತ್ತಿರುವ ಬೆಳೆಸಾಲ ವರ್ಷದೊಳಗೆ ಮರುಪಾವತಿಸಿದರೇ ಮುಂದಿನ ವರ್ಷ ದುಪ್ಪಟ್ಟು ಸಾಲ ವಿತರಿಸುವುದಾಗಿ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ( ಡಿಸಿಸಿ) ಬ್ಯಾಂಕ್‌ ಅಧ್ಯಕ್ಷರಾಗಿರುವ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ತೇಲ್ಕೂರ ಪ್ರಕಟಿಸಿದರು.

Advertisement

ಕಲಬುರಗಿ ತಾಲೂಕಿನ 19 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 4041 ಹೊಸ ರೈತರಿಗೆ 12 ಕೋಟಿ ರೂ. ಬೆಳೆ ಸಾಲವನ್ನು ತಾಲೂಕಿನ ಮಹಾಗಾಂವ ಕ್ರಾಸ್‌ನ ಚಂದ್ರ ನಗರದ ಮಹಾಂತೇಶ್ವರ ಪ್ರೌಢ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೊಸ ರೈತರಿಗೆ 25 ಸಾವಿರ ರೂ., 30 ಸಾವಿರ ರೂ. ಬೆಳೆಸಾಲ ವಿತರಿಸಲಾಗಿದೆ. ಇನ್ನೂ ವಿತರಿಸಲಾಗುತ್ತಿದೆ. ವರ್ಷದೊಳಗೆ ಸಾಲ ಮರುಪಾವತಿಸಿದರೆ ಬಡ್ಡಿ ಇರುವುದಿಲ್ಲ. ಒಂದು ವೇಳೆ ವರ್ಷದೊಳಗೆ ಸಕಾಲದಲ್ಲಿ ಸಾಲ ಮರುಪಾವತಿಸದಿದ್ದರೆ ಶೇ. 13ರಷ್ಟು ಬಡ್ಡಿಯಾಗುತ್ತದೆ. ಹೀಗಾಗಿ ಸಾಲ ಮರುಪಾವತಿಸಿ ಮುಂದಿನ ವರ್ಷ ಈಗಿನ ಸಾಲವನ್ನು ಖಂಡಿತವಾಗಿ ಡಬಲ್‌ ಮಾಡಲಾಗುವುದು ಎಂದು ನೆರೆದ ರೈತ ಸಮೂಹಕ್ಕೆ ಮನವರಿಕೆ ಮಾಡಿದರು.

ಈಗಾಗಲೇ ಹೊಸದಾಗಿ ರೈತರಿಗೆ 100 ಕೋಟಿ ರೂ. ಅಧಿಕ ಬಡ್ಡಿ ರಹಿತ ಬೆಳೆಸಾಲ ವಿತರಿಸಲಾಗಿದೆ. ಯಾವೊಬ್ಬ ಹೊಸ ರೈತ ಸಾಲದಿಂದ ದೂರ ಉಳಿಯಬಾರದು ಎಂಬುದು ತಮ್ಮ ಸಂಕಲ್ಪವಾಗಿದೆ ಎಂದರು.

ಈ ಹಿಂದೆ ಜನರಿಗೆ ಯಾವುದಾದರೂ ಸರ್ಕಾರ ಆರ್ಥಿಕ ಸಹಾಯ ಸಿಗಬೇಕೆಂದರೆ ಅರ್ಧ ಹಣ ಪೋಲಾಗುತ್ತಿತ್ತು. ಮೇಲಾಗಿ ಅಧಿಕಾರಿಗಳ, ಜನಪ್ರತಿನಿಧಿಗಳ ಕೃಪೆಗೆ ಒಳಗಾಗಬೇಕಿತ್ತು. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ನೇರವಾಗಿ ಫಲಾನುಭವಿ ಖಾತೆಗೆ ಜಮಾವಾಗುತ್ತಿದೆ. ಇದಕ್ಕೆ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ನಿಧಿಯಡಿ ಬರುವ ಆರ್ಥಿಕ ಸಹಾಯವೇ ಸಾಕ್ಷಿ ಎಂದರು.

Advertisement

ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆ ವಹಿಸಿ, ತಮ್ಮ ರಾಜಕೀಯ ಗುರುಗಳಾದ ರಾಜಕುಮಾರ ತೇಲ್ಕೂರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾದ ನಂತರ ಬ್ಯಾಂಕ್‌ ಅಭಿವೃದ್ಧಿ ಆಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ಪ್ರತಿಯೊಬ್ಬ ರೈತರಿಗೂ ಸಾಲ ತಲುಪಿಸುವ ಉದ್ದೇಶ ಹೊಂದಲಾಗಿದೆ. ಪ್ರಸಕ್ತವಾಗಿ ಅತಿವೃಷ್ಟಿ ಯಿಂದ ಬೆಳೆ ಹಾನಿಯಾಗಿದೆ. ಖಾಸಗಿ ಸಾಲ ತಂದು ಬಡ್ಡಿ ಕಟ್ಟುವುದೇ ಆಗಿದೆ. ಹೀಗಾಗಿ ಈ ಬೆಳೆಸಾಲ ಹೆಚ್ಚು ಅನುಕೂಲ ವಾಗಲಿದೆ ಎಂದರು.

ಗ್ರಾಮೀಣ ಕ್ಷೇತ್ರದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಬ್ಯಾಂಕ್‌ ಉಪಾಧ್ಯಕ್ಷ ಸುರೇಶ ಸಜ್ಜನ ಮಾತನಾಡಿ, ಮುಂದಿನ ದಿನಗಳ ಮಧ್ಯಮಾವಧಿ ಸಾಲ ವಿತರಿಸಲಾಗುವುದು ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ರೈತರಿಗೆ ಇಷ್ಟೊಂದು ಪ್ರಮಾಣದಲ್ಲಿ ಸಾಲ ನೀಡುತ್ತಿರುವುದು ಖುಷಿ ವಿಚಾರವಾಗಿದೆ ಎಂದರು. ಕಾಡಾ ಆಡಳಿತಾ ಧಿಕಾರಿ ಶರಣಬಸಪ್ಪ ಬೆಣ್ಣೂರ ಮಾತನಾಡಿ, ಹೈನುಗಾರಿಕೆಗೆ ಡಿಸಿಸಿ ಬ್ಯಾಂಕ್‌ ವತಿಯಿಂದ ಸಾಲ ವಿತರಿಸಲು ಆರಂಭಿಸಿದ ನಂತರ ಹೈನೋದ್ಯಮ ಬಲಗೊಳ್ಳಲು ಸಾಧ್ಯ ವಾಯಿತು ಎಂದರು. ನಿರ್ದೇಶಕ ಅಶೋಕ ಸಾವಳೇಶ್ವರ ಮಾತನಾಡಿದರು. ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಗಾಂವ, ಡೊಂಗರಗಾಂವ, ಕಿಣ್ಣಿಸಡಕ, ಸೊಂತ, ಜೀವಣಗಿ, ಬೇಲೂರ, ಓಕಳಿ, ನಾಗೂರ, ಹರಸೂರ, ಅವರಾದ, ಕುರಿಕೋಟಾ, ಅಷ್ಠಗಾ, ಕುಮಸಿ, ಹಾಗರಗಾ, ನಂದೂರ ಬಿ, ಸಣ್ಣೂರ, ಶ್ರೀನಿವಾಸ ಸರಡಗಿ, ಭೂಪಾಲ ತೆಗನೂರ, ಮರಗುತ್ತಿ ಎನ್ನುವ 19 ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 4041 ರೈತರಿಗೆ 12 ಕೋಟಿ ರೂ. ಬೆಳೆ ಸಾಲ ವಿತರಿಸಲಾಯಿತು.

ನಿರ್ದೇಶಕ ಶರಣಬಸಪ್ಪ ಪಾಟೀಲ ಅಷzಗಾ ಮಾತನಾಡಿ, ಮೂರನೇ ಬಾರಿಗೆ ನಿರ್ದೇಶಕರಾಗಿದ್ದು ಸಾಲ ಮನ್ನಾ ಹಾಗೂ ಕೋವಿಡ್‌ ಹಿನ್ನೆಲೆಯಲ್ಲಿ ಸಾಲ ಕೊಡಲು ಆಗಿರಲಿಲ್ಲ. 21 ಡಿಸಿಸಿ ಬ್ಯಾಂಕ್‌ಗಳಲ್ಲಿ ಕೊನೆಯದಾಗಿತ್ತು. ಆದರೆ ಬಿ.ಎಸ್‌. ಯಡಿಯೂರಪ್ಪ ಪ್ರಯತ್ನದ ಫಲವಾಗಿ 200 ಕೋಟಿ ರೂ. ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ದೊರೆತ ಪರಿಣಾಮ ಈಗ ಸಾಲ ಹಂಚಲು ಸಾಧ್ಯವಾಗಿದೆ. 60 ಕೋಟಿ ರೂ. ಠೇವಣಿ ತಂದ ಪರಿಣಾಮ ಹಾಗೂ ಸರ್ಕಾರದಿಂದ 10 ಕೋಟಿ ರೂ. ಷೇರು ನೀಡಿರುವುದು ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ನಾವದಗಿ, ಕಲ್ಮೂಡ, ಕಮಲಾಪುರ ಸಹಕಾರ ಸಂಘಗಳಿಗೆ ಮಾತ್ರ ಸಾಲ ವಿತರಣೆ ಕೆಲ ಕಾರಣಗಳಿಂದ ಆಗಿಲ್ಲ. ಆಡಿಟ್‌ ಆದರೆ ಈ ಕೂಡಲೇ ಸಾಲ ಕೊಡಲಾಗುವುದು. ಕಮಲಾಪುರದಲ್ಲಿ ಡಿಸಿಸಿ ಬ್ಯಾಂಕ್‌ ನ ಶಾಖಾ ಕಚೇರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಕಮಲಾಪುರದಲ್ಲಿ ತಾಲೂಕು ಶಾಖಾ ಕಚೇರಿ ಶುಭಾರಂಭಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಮಹಾಗಾಂವ ಬಳಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾದರೆ ಅನುಕೂಲವಾಗುತ್ತದೆ. ಬೆಣ್ಣೂರು ಕಾಲದಲ್ಲಿ ಬ್ಯಾಂಕ್‌ ಅಭಿವೃದ್ಧಿಗೆ ನಾಂದಿ ಹಾಡಲಾಯಿತು ಎಂದರು.

ಉತ್ತಮವಾಗಿ ಕೆಲಸ ನಿರ್ವಹಿಸಿದ ಬ್ಯಾಂಕ್‌ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಬ್ಯಾಂಕ್‌ ನಿರ್ದೇಶಕರಾದ ಶಿವಾನಂದ ಮಾನಕರ, ಗೌತಮ ಪಾಟೀಲ, ಚಂದ್ರಶೇಖರ ತಳ್ಳಳ್ಳಿ , ಉತ್ತಮ ಬಜಾಜ, ಕಿಶೋರ ಪಾಟೀಲ, ಮಹಾಗಾಂವ ಗ್ರಾಪಂ ಅಧ್ಯಕ್ಷ ನರೇಶ ಹರಸೂರಕರ್‌, ಕಾಡಾ ಅಧ್ಯಕ್ಷ ಹರ್ಷವರ್ಧನ ಗುಗಳೆ, ಶಿವಪ್ರಭು ಪಾಟೀಲ, ಅಮರನಾಥ ತಡಕಲ್‌, ಮಹಾಗಾಂವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಿರೀಶ ಪಾಟೀಲ, ಸಂಗಮೇಶ ವಾಲಿ, ಸುಭಾಷ ಬಿರಾದಾರ ಹಾಗೂ ಎಲ್ಲ 19 ಸಹಕಾರಿ ಸಂಘಗಳ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕೇಂದ್ರ ಬ್ಯಾಂಕ್‌ ಕಾರ್ಯನಿರ್ವಹಣಾ ಅಧಿಕಾರಿ ಚಿದಾನಂದ ನಿಂಬಾಳ ಗೈರು ಹಾಜರಿದ್ದರು. ಡಾ| ಶಿವಶಂಕರ ಬಿರಾದಾರ ನಿರೂಪಿಸಿ, ಗುರುಲಿಂಗ ಶಿವಾಚಾರ್ಯರು ರಚಿಸಿದ ರೈತಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.

ಸಾಲ ಮನ್ನಾದ ಲಾಭ ಪಡೆದ ರೈತರಿಗೂ ಈಗ ಹೊಸದಾಗಿ ಬೆಳೆಸಾಲ ನೀಡಲು ಮುಂದಾಗಲಾಗಿದೆ. ಈಗಾಗಲೇ ಹೊಸದಾಗಿ ಒಂದು ಲಕ್ಷ ರೈತರಿಗೆ ಸಾಲ ವಿತರಿಸಲಾಗಿದೆ. ಈಗ ಸಾಲ ಮನ್ನಾ ಪಡೆದ ರೈತರಿಗೂ ಅಕ್ಟೋಬರ್‌ ಮೊದಲ ವಾರದಿಂದಲೇ ಹೊಸ ಸಾಲ ವಿತರಿಸಲು ನಿರ್ಧರಿಸಲಾಗಿದೆ.
ರಾಜಕುಮಾರ ಪಾಟೀಲ ತೇಲ್ಕೂರ,
ಅಧ್ಯಕ್ಷ, ಡಿಸಿಸಿ ಬ್ಯಾಂಕ್‌

Advertisement

Udayavani is now on Telegram. Click here to join our channel and stay updated with the latest news.

Next