1857ರಲ್ಲಿ ನಡೆದ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದ ಸ್ಥಳವೇ ಝಾನ್ಸಿ. ಅಲ್ಲಿ ಈ ಬಾರಿ ಬಿರುಸಿನ ಹೋರಾಟವೇ ನಡೆಯುವ ಸಾಧ್ಯತೆ ಉಂಟು. ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ, ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದ ಝಾನ್ಸಿಯ ಹಾಲಿ ಸಂಸದೆ, ಬಿಜೆಪಿ ನಾಯಕಿ ಉಮಾ ಭಾರತಿ ಕೊನೆಗೂ ಸ್ಪರ್ಧೆ ಮಾಡಿಲ್ಲ. ಪ್ರಮುಖವಾದ ಅಂಶವೇನೆಂದರೆ ಎಲ್ಲಾ ಪಕ್ಷಗಳಿಂದಲೂ ಹೊಸ ಮುಖಗಳನ್ನೇ ಕಣಕ್ಕೆ ಇಳಿಸಲಾಗಿದೆ. ಬಿಜೆಪಿ ವತಿಯಿಂದ ಅನುರಾಗ್ ಶರ್ಮಾ, ಕಾಂಗ್ರೆಸ್ ವತಿಯಿಂದ ಶಿವಶರಣ್ ಖುಷಾಹ, ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದಿಂದ ಶ್ಯಾಮ್ ಸುಂದರ್ ಸಿಂಗ್ ಯಾದವ್ ಚುನಾವಣಾ ಕಣದಲ್ಲಿದ್ದಾರೆ.
ಉತ್ತರ ಪ್ರದೇಶದ ಬುಂದೇಲ್‌ಖಂಡ ಪ್ರದೇಶ ವ್ಯಾಪ್ತಿಯಲ್ಲಿರುವ ಅತ್ಯಂತ ದೊಡ್ಡ ನಗರವೇ ಝಾನ್ಸಿ. ಈ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯೇ ಹಲವು ವರ್ಷಗಳಿಂದ ಇದೆ. ಅದರ ಪರಿಹಾರಕ್ಕಾಗಿ ಸ್ಥಳೀಯರು ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ಒತ್ತಾಯಿಸುತ್ತಾ ಬಂದಿದ್ದರೂ, ಪ್ರಯೋಜನವಿಲ್ಲದಾಗಿದೆ.
ಜಾತಿ ಲೆಕ್ಕಾಚಾರ: ಈ ಲೋಕಸಭಾ ಕ್ಷೇತ್ರದಲ್ಲಿ 2011ರ ಜನಗಣತಿ ಪ್ರಕಾರ 27,57,007 ಮಂದಿ ಮತದಾರರು ಇದ್ದಾರೆ. ಈ ಪೈಕಿ ಶೇ.66.4 ಮಂದಿ ಗ್ರಾಮೀಣ ಪ್ರದೇಶದಲ್ಲಿ ಜೀವಿಸುತ್ತಿದ್ದರೆ, ಶೇ.33.6 ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಎಸ್‌ಸಿ ಸಮುದಾಯದವರ ಪ್ರಮಾಣ ಶೇ.24, ಎಸ್‌ಟಿ ಸಮುದಾಯದ ಪ್ರಮಾಣ ಶೇ.2.27. ಅವರ ಜತೆಗೆ ಬ್ರಾಹ್ಮಣ ಮತ್ತು ಯಾದವ ಸಮುದಾಯದವರೂ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ ಸಮುದಾಯ ಶೇ.9, ಸಿಖ್ ಸಮುದಾಯ ಶೇ. 2, ಜೈನ ಸಮುದಾಯದವರು ಶೇ.3 ಮಂದಿ ಇದ್ದಾರೆ.
ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಬಿನಿ, ಲಲಿತ್‌ಪುರ, ಝಾನ್ಸಿ ನಗರ, ಮೆಹರೋನಿ, ಮೌರಾನಿಪುರ ಎಂಬ ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಮೆಹರೋನಿ ಮತ್ತು ಮೌರಾನಿಪುರ ಕ್ಷೇತ್ರಗಳು ಎಸ್‌ಟಿಗೆ ಮೀಸಲಾಗಿ ಇದೆ. ಈ ಕ್ಷೇತ್ರದಲ್ಲಿ 1952ರಿಂದ 1977ರ ವರೆಗೆ ಕಾಂಗ್ರೆಸ್ ಗೆದ್ದಿತ್ತು. 1977-1980ರ ವರೆಗೆ ಭಾರತೀಯ ಲೋಕ ದಳ, 1980-1984ರ ಅವಧಿಯಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. 1984-1989ರಲ್ಲಿ ಕಾಂಗ್ರೆಸ್, 1989 ರಿಂದ 1999ರ ವರೆಗೆ ಬಿಜೆಪಿ, 1999-2004ರಲ್ಲಿ ಕಾಂಗ್ರೆಸ್ ಜಯಸಾಧಿಸಿತ್ತು. 2004-2009ರಲ್ಲಿ ಸಮಾಜವಾದಿ ಪಕ್ಷದ ಚಂದ್ರಪಾಲ್ ಯಾದವ್, 2014ರಲ್ಲಿ ಕಾಂಗ್ರೆಸ್‌ನ ಪ್ರದೀಪ್‌ಜೈನ್ ಆದಿತ್ಯ ಜಯಸಾಧಿಸಿದ್ದರು.