Advertisement

ದೇಹ ತೂಕ ಇಳಿಸಲು ಹೊಸ ಉಪಕರಣ ಇದೊಂದು ಉತ್ತಮ ಆವಿಷ್ಕಾರವೇ?

10:53 PM Dec 11, 2021 | Team Udayavani |

ದೇಹ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಈಗಾಗಲೇ ಪ್ರಯೋಜನಕಾರಿ ಎಂದು ಸಾಬೀತಾಗಿರುವ ಹತ್ತು ಹಲವು ವಿಧಾನ ಗಳಿವೆ. ಆದರೆ ಅವ್ಯಾವುದೂ ಈ ವಿಚಿತ್ರ ಆವಿಷ್ಕಾರದಂತಲ್ಲ. ದೇಹತೂಕ ಇಳಿಸಿ ಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾದ ಈ ಉಪಕರಣವು ತನ್ನ ವೈಚಿತ್ರ್ಯದಿಂದಲೇ ಸುದ್ದಿಯಲ್ಲಿದೆ. ಈ ಉಪಕರಣವನ್ನು ಧರಿಸಿರುವ ವ್ಯಕ್ತಿಯು ಬಾಯಿ ಮುಚ್ಚಿಕೊಂಡಿರುವಂತೆ ಮಾಡುವ ಮೂಲಕ ಸಾಕಷ್ಟು ಆಹಾರ ಸೇವಿಸಲು ಸಾಧ್ಯವಾಗದಂತೆ ತಡೆಯುತ್ತದೆ. ಹೀಗೆ ಈ ಉಪಕರಣವು ದೇಹತೂಕ ಕಡಿಮೆಯಾಗಲು ನೆರವಾಗುತ್ತದೆ.
“ದಿ ಗಾರ್ಡಿಯನ್‌’ ಪತ್ರಿಕೆಯಲ್ಲಿ ವರದಿಯಾಗಿರುವ ಪ್ರಕಾರ, ಅಯಸ್ಕಾಂತ ಶಕ್ತಿಯಿಂದ ಬಾಯಿಯನ್ನು ಅಗಲವಾಗಿ ತೆರೆಯಲು ಅಸಾಧ್ಯವಾಗುವಂತೆ ಮಾಡುವ ಮೂಲಕ ಈ ಉಪಕರಣವು ಜನರು ಹೆಚ್ಚು ಘನ ಆಹಾರ ಸೇವಿಸುವುದನ್ನು ತಡೆಯುತ್ತದೆ. ನ್ಯೂಜಿಲಂಡ್‌ನ‌ ಒಟಾಗೊ ವಿಶ್ವವಿದ್ಯಾನಿಲಯದ ವೈದ್ಯಕೀಯ ವೃತ್ತಿಪರರು ಮತ್ತು ಬ್ರಿಟನ್‌ನ ಲೀಡ್ಸ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಬಾಯಿಯ ಒಳಗೆ ಇರಿಸಲಾಗುತ್ತದೆ. ಲಾಕಿಂಗ್‌ ಬೋಲ್ಟ್ ಗಳನ್ನು ಹೊಂದಿರುವ ಅಯಸ್ಕಾಂತೀಯ ಭಾಗಗಳನ್ನು ಇದು ಹೊಂದಿದೆ.

Advertisement

“ಡೆಂಟಲ್‌ ಡಯಟ್‌ ಕಂಟ್ರೋಲ್‌’ ಎಂಬುದು ಈ ಉಪಕರಣದ ಹೆಸರು. ಇದನ್ನು ಅಳವಡಿಸಿರುವ ಬಳಕೆದಾರರು ಬಾಯಿಯನ್ನು 2 ಮಿ.ಮೀ. ಮಾತ್ರ ತೆರೆಯಲು ಇದು ಅನುವು ಮಾಡಿಕೊಡುತ್ತದೆ. ನ್ಯೂಜಿಲಂಡ್‌ನ‌ ಡ್ಯುನೆಡಿನ್‌ನ ಏಳು ಮಂದಿ ಆರೋಗ್ಯವಂತ ಮಹಿಳೆಯರಲ್ಲಿ ಎರಡು ವಾರ ಗಳ ಕಾಲ ಈ ಉಪಕರಣವನ್ನು ಅಳವಡಿಸಿ ಪ್ರಯೋಗ ನಡೆಸಲಾಯಿತು. ಅವರಿಗೆ ಈ ಅವಧಿಯಲ್ಲಿ ಪಥ್ಯಾಹಾರ ನೀಡಲಾಗಿದ್ದು, ಬ್ರಿಟಿಶ್‌ ಡೆಂಟಲ್‌ ಜರ್ನಲ್‌ನಲ್ಲಿ ಪ್ರಕಟವಾಗಿ ರುವ ವರದಿಯ ಪ್ರಕಾರ ಈ ಮಹಿಳೆಯರು 6.36 ಕಿ.ಗ್ರಾಂ. ಅಥವಾ ತಮ್ಮ ದೇಹತೂಕದ ಶೇ. 5.1ರಷ್ಟು ತೂಕವನ್ನು ಕಳೆದುಕೊಂಡಿದ್ದರು.

“ಜಾಗತಿಕವಾಗಿರುವ ಬೊಜ್ಜು ಎಂಬ ಸಮಸ್ಯೆಯ ವಿರುದ್ಧ ಹೋರಾಡಲು ಅಗತ್ಯವಾದ ಜಗತ್ತಿನ ಮೊದಲ ದೇಹ ತೂಕ ಕಡಿಮೆ ಮಾಡಿಕೊಳ್ಳುವ ಉಪಕರಣ: ವ್ಯಕ್ತಿಯನ್ನು ದ್ರವಾಹಾರಕ್ಕೆ ಕಟ್ಟಿಹಾಕುವ ಬಾಯಿಯಲ್ಲಿ ಅಳವಡಿಸಿಕೊಳ್ಳುವ ಉಪಕರಣ’ ಎಂಬುದಾಗಿ ಇದನ್ನು ಆವಿಷ್ಕಾರ ಮಾಡಿರುವ ತಜ್ಞರು ಟ್ವೀಟ್‌ ಮಾಡಿದ್ದರು. ಬಳಿಕ ಈ ಬಗ್ಗೆ ಸ್ಪಷ್ಟೀಕರಣ ನೀಡಿ, “ಕ್ಷಿಪ್ರ ಅಥವಾ ದೀರ್ಘ‌ಕಾಲಿಕ ತೂಕ ಇಳಿಕೆಯ ಉಪಕರಣವಾಗಿ ಬಳಕೆಯಾಗುವುದು ಈ ಉಪಕರಣದ ಉದ್ದೇಶ ಅಲ್ಲ, ತೂಕ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಆದರೆ ತೂಕ ಇಳಿಕೆಯಾಗದೆ ಶಸ್ತ್ರಕ್ರಿಯೆ ನಡೆಸುವುದು ಅಸಾಧ್ಯವಾದ ಮಂದಿಗೆ ಸಹಾಯ ಮಾಡುವುದು ಈ ಉಪಕರಣದ ಗುರಿ’ ಎಂಬುದಾಗಿ ಟ್ವೀಟ್‌ ಮಾಡಿದ್ದಾರೆ.

“ಎರಡು ಅಥವಾ ಮೂರು ವಾರಗಳ ಬಳಿಕ ಅಯಸ್ಕಾಂತಗಳನ್ನು ಮತ್ತು ಉಪಕರಣವನ್ನು ತೆಗೆದುಹಾಕಲಾಯಿತು. ಕಡಿಮೆ ನಿರ್ಬಂಧಿತ ಆಹಾರದ ಅವಧಿಯ ಬಳಿಕ ಅವರು ಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗುವಂತೆ ಮಾಡಲಾಯಿತು. ಪಥ್ಯಾಹಾರ ತಜ್ಞರಿಂದ ಸಲಹೆಯ ಮೇರೆಗೆ ಹಂತಹಂತವಾಗಿ ತೂಕ ಇಳಿಸಿಕೊಳ್ಳಲು ಇದರಿಂದ ಸಾಧ್ಯವಾಯಿತು’.

ಈ ಉಪಕರಣದ ಬಗ್ಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಒಟಾಗೊ ವಿಶ್ವವಿದ್ಯಾನಿಲಯದ ಆರೋಗ್ಯ ವಿಜ್ಞಾನಗಳ ವಿಭಾಗದ ಸಹಕುಲಾಧಿಪತಿ ಪ್ರೊ| ಬರ್ಟನ್‌ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. “ಜನರು ಯಶಸ್ವಿಯಾಗಿ ತೂಕ ಇಳಿಸಿಕೊಳ್ಳುವುದಕ್ಕೆ ಪ್ರಮುಖ ಅಡ್ಡಿ ಎಂದರೆ ಪಥ್ಯಾಹಾರವನ್ನು ನಿಯಮಿತವಾಗಿ ಪಾಲಿಸದೆ ಇರುವುದು. ಈ ಉಪಕರಣವು ಅವರಿಗೆ ಹೊಸ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಇದರಿಂದ ನಿರ್ದಿಷ್ಟ ಅವಧಿಯಲ್ಲಿ ಕಡಿಮೆ ಕ್ಯಾಲೊರಿಯ ಆಹಾರಾಭ್ಯಾಸವನ್ನು ಅವರು ಪಾಲಿಸುವಂತಾಗುತ್ತದೆ’ ಎಂದು ಪ್ರೊ| ಬರ್ಟನ್‌ ಅವರ ಹೇಳಿಕೆ ತಿಳಿಸಿದೆ.

Advertisement

ಅವರ ಹೇಳಿಕೆಯ ಪ್ರಕಾರ ಈ ಉಪಕರಣವು “ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಈ ಉಪಕರಣವು ಗಾಯವುಂಟು ಮಾಡದ, ಮಿತವ್ಯಯಿಯಾದ ಮತ್ತು ಆಕರ್ಷಕವಾದ ಪರ್ಯಾಯ ವ್ಯವಸ್ಥೆ’. ಅಲ್ಲದೆ, “ಈ ಉಪಕರಣದಿಂದ ಯಾವುದೇ ಅಡ್ಡ ಅಥವಾ ಪ್ರತಿಕೂಲ ಪರಿಣಾಮಗಳಿಲ್ಲ’ ಎಂದೂ
ಪ್ರೊ| ಬರ್ಟನ್‌ ಹೇಳಿದ್ದಾರೆ.

-ಡಾ| ಆನಂದದೀಪ್‌ ಶುಕ್ಲಾ
ಅಸೋಸಿಯೇಟ್‌ ಪ್ರೊಫೆಸರ್‌, ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ವಿಭಾಗ, ಎಂಸಿಒಡಿಎಸ್‌, ಮಾಹೆ, ಮಣಪಾಲ

Advertisement

Udayavani is now on Telegram. Click here to join our channel and stay updated with the latest news.

Next