ಕೋಹಿಮಾ: ನಾಗಾಲ್ಯಾಂಡ್ ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಏತನ್ಮಧ್ಯೆ ಮಹತ್ವದ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್)ನ 25 ಶಾಸಕರ ಪೈಕಿ 21 ಮಂದಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೇಸಿವ್ ಪಕ್ಷ(ಎನ್ ಡಿಪಿಪಿ)ಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ:ಕೋರ್ಟ್ ಗಳಲ್ಲಿ ಸ್ಥಳೀಯ ಭಾಷೆಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕು: ಪ್ರಧಾನಿ ನರೇಂದ್ರ ಮೋದಿ
21 ಮಂದಿ ಎನ್ ಪಿಎಫ್ ಶಾಸಕರ ಸೇರ್ಪಡೆಯ ಬೆಳವಣಿಗೆ ಮೂಲಕ 60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನೆಫಿಯೂ ರಿಯೋ ನೇತೃತ್ವದ ಎನ್ ಡಿಪಿಪಿ ಸರ್ಕಾರದ ಸದಸ್ಯ ಬಲ 42ಕ್ಕೆ ಏರಿಕೆಯಾದಂತಾಗಿದೆ.
ಪ್ರಸ್ತುತ ಎನ್ ಪಿಎಫ್ ನಾಲ್ವರು ಶಾಸಕರನ್ನು ಹೊಂದಿದ್ದು, 12 ಮಂದಿ ಬಿಜೆಪಿ ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರು ಇದ್ದಿರುವುದಾಗಿ ವರದಿ ತಿಳಿಸಿದೆ. ಪಕ್ಷಾಂತರ ಬೆಳವಣಿಗೆ ನಂತರ ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಗಾ ಪೀಪಲ್ಸ್ ಫ್ರಂಟ್ ನ ಅಧ್ಯಕ್ಷ ಶುರ್ಹೋಜೆಲಿ ಲೀಝೆಯೆಟ್ಸು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಎನ್ ಪಿಎಫ್ ನ 21 ಶಾಸಕರು ಎನ್ ಡಿಪಿಪಿ ಜತೆ ವಿಲೀನಗೊಂಡಿರುವ ಮನವಿಯನ್ನು ಸ್ವೀಕರಿಸಿರುವುದಾಗಿ ನಾಗಾಲ್ಯಾಂಡ್ ವಿಧಾನಸಭಾ ಸ್ಪೀಕರ್ ಶರಿಂಗೈನ್ ಲೋಕ್ನಕುಮಾರ್ ಆದೇಶದಲ್ಲಿ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.