Advertisement

ವಿನೂತನ ಪ್ರಸಂಗ ಗರ್ಭಗುಡಿ

06:24 PM Aug 22, 2019 | mahesh |

ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರು ಇತ್ತೀಚೆಗೆ ಗರ್ಭಗುಡಿ ಎಂಬ ನೂತನ ಪ್ರಸಂಗವನ್ನು ಪ್ರದರ್ಶಿಸಿದರು . ಟಿವಿ ನಿರೂಪಕಿಯಾಗಿ, ಸಂದರ್ಶಕಿಯಾಗಿ , ಲೇಖಕಿಯಾಗಿ ಗುರುತಿಸಿಕೊಂಡಿರುವ ಕು| ಶುಭಾಶಯ ಜೈನ್‌ ಬರೆದ ಈ ಚೊಚ್ಚಲ ಪ್ರಸಂಗಕ್ಕೆ ಪದ್ಯವನ್ನು ಎಂ. ಕೆ . ರಮೇಶ ಆಚಾರ್ಯರು ರಚಿಸಿದ್ದಾರೆ . ಪ್ರಥಮ ಪ್ರದರ್ಶನದಲ್ಲೇ ಗರ್ಭಗುಡಿ ಯಶಸ್ವಿಯಾಯಿತು .

Advertisement

ಗರ್ಭಗುಡಿ – ಇದು ಜಗದ ಅತಿ ದೊಡ್ಡ ಪಾವನ ಕ್ಷೇತ್ರ ಎಂಬ ಉದ್ಘೋಷದೊಂದಿಗೆ ಪ್ರೇಮ ಮಧುರ -ತ್ಯಾಗ ಅಮರ ಎಂಬ ಸಂದೇಶ ಸಾರುವ ಪ್ರಸಂಗ ವಿನೂತನ ಕಥಾಹಂದರ ಹೊಂದಿದೆ . ವೀರಾಪುರದ ಅರಸನಾದ ಶೂರಸೇನ – ಪ್ರಫ‌ುಲ್ಲ ದಂಪತಿ ಸಂತಾನವಿಲ್ಲದೆ ಕೊರಗುತ್ತಿರುತ್ತಾರೆ . ತೀರ್ಥಯಾತ್ರೆಗೆ ಹೊರಟಾಗ ಸಿಕ್ಕಿದ ಬ್ರಾಹ್ಮಣ ಶಿಶುವನ್ನು ಸ್ವೀಕರಿಸಿ ಪ್ರಸನ್ನ ಎಂಬ ಹೆಸರಿನಲ್ಲಿ ಸಲಹುತ್ತಾರೆ. ಅನಂತರ ಶೂರಸೇನನಿಗೆ ಮಗಳೊಬ್ಬಳು ಜನಿಸಿದಾಗ ಅವಳಿಗೆ ವೀಣಾ ಎಂದು ಹೆಸರಿಡುತ್ತಾರೆ . ಪ್ರಸನ್ನ – ವೀಣಾರು ಪರಸ್ಪರ ಅನುರಕ್ತರಾದಾಗ ಅವರಿಗೆ ವಿವಾಹವಾಗುತ್ತದೆ . ಶತ್ರು ರಾಜ ಶಿವಶಂಕರನು ಯುದ್ಧರಂಗದಲ್ಲಿ ವೀಣಾಳ ಹೊಟ್ಟೆಗೆ ಒದ್ದಾಗ ಗರ್ಭಪಾತವಾಗಿ ಇನ್ನು ಮುಂದೆ ಗರ್ಭಿಣಿಯಾಗಲಾರಳು ಎಂದು ರಾಜವೈದ್ಯರು ತಿಳಿಸುತ್ತಾರೆ . ಎರಡನೇ ವಿವಾಹವಾಗುವಂತೆ ವೀಣಾ ಒತ್ತಾಯಿಸಿದರೂ ಪ್ರಸನ್ನ ನಿರಾಕರಿಸುತ್ತಾನೆ .

ರಾಜವೈದ್ಯರು ಪ್ರಸನ್ನ ಹಾಗೂ ವೀಣಾಳ ತೇಜಸ್ಸನ್ನು ಚೂತಫ‌ಲದಲ್ಲಿ ತುಂಬಿ ಅದನ್ನು ಯಾರು ಸೇವಿಸುತ್ತಾರೋ ಅವರಿಗೆ ಅರಸನ ಸಂತಾನ ಪ್ರಾಪ್ತವಾಗುತ್ತದೆ ಎಂದಾಗ ವೀಣಾಳ ಆಪ್ತ ಸ್ನೇಹಿತೆಯಾದ ಶುಭಾಶಯ ಮುಂದೆ ಬಂದು ಅರಸ- ಅರಸಿಯರ ತೇಜಸ್ಸನ್ನು ತನ್ನ ಗರ್ಭದಲ್ಲಿ ಬೆಳೆಸಿ ಶಿಶುವನ್ನು ಪಡೆಯುತ್ತಾಳೆ.ದಾಸಿಯಾದ ಮಣಿಪ್ರಭೆಯ ದುಭೋìದನೆಗೊಳಗಾಗಿ ರಾಣಿ ವೀಣಾಳು ತನ್ನ ಆಪ್ತ ಸಖೀ ಶುಭಾಶಯಳನ್ನೇ ಗಡಿಪಾರು ಮಾಡಿದಾಗ, ಮಗುವನ್ನು ಅಗಲಿದ ಆಘಾತದಿಂದ ಶುಭಾಶಯ ಮಾನಸಿಕ ರೋಗಿಯಾಗುತ್ತಾಳೆ .ಮುಂದೆ ಶುಭಾಶಯಳು ಜನ್ಮ ನೀಡಿದ ಮಗು ಅತಿಶಯನಿಂದಾಗಿ ಶುಭಾಶಯ ,ವೀಣಾ , ಪ್ರಸನ್ನರು ಒಂದಾಗಿ ಸುಖಾಂತವಾಗುತ್ತದೆ .ಇವಿಷ್ಟು ಘಟನಾವಳಿಯೊಂದಿಗೆ ಗರ್ಭಗುಡಿ ಗಮನ ಸೆಳೆಯುತ್ತದೆ .ಪ್ರಸನ್ನನಾಗಿ ಪೂರ್ವಾರ್ಧದಲ್ಲಿ ಕಿರಾಡಿ ಪ್ರಕಾಶರು ಭಾವಪೂರ್ಣ ಅಭಿನಯ ನೀಡಿ , ಪಾತ್ರಕ್ಕೆ ಗಟ್ಟಿಯಾದ ಬುನಾದಿ ಕಟ್ಟಿಕೊಟ್ಟರು . ದುರಂತ ನಾಯಕಿ ಎನಿಸುವ ಕಥಾನಾಯಕಿ ಶುಭಾಶಯಳ ಪಾತ್ರಕ್ಕೆ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರು ಜೀವಕಳೆ ತುಂಬಿದರು. ಖಳನಾಯಕಿಯಾಗಿ ಪರಿವರ್ತನೆಗೊಂಡ ವೀಣಾಳ ಪಾತ್ರದಲ್ಲಿ ವಿಜಯ ಬೀಜಮಕ್ಕಿಯವರು ಮಿಂಚಿದರು. ಗರ್ಭಪಾತವಾಗುವ ವೇದನೆಯನ್ನು ಕಿರಾಡಿ ಮತ್ತು ಬೀಜಮಕ್ಕಿಯವರು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದರು . ಉತ್ತರಾರ್ಧದ ಪ್ರಸನ್ನನಾಗಿ ಥಂಡಿಮನೆ ಶ್ರೀಪಾದ ಭಟ್ಟರದ್ದು ಅತ್ಯತ್ತಮ ನಿರ್ವಹಣೆ ಅತಿಶಯನಾಗಿ ಕಾರ್ತಿಕ್‌ ಚಿಟ್ಟಾಣಿಯವರ ಪಾತ್ರವಂತೂ ಪರಿಣಾಮಕಾರಿಯಾಗಿತ್ತು .ಪ್ರಣವ್‌ ಭಟ್‌ , ಮೂಡ್ಕಣಿ ಪುರಂದರ , ಕುಂಕಿಪಾಲ್‌ ನಾಗರಾಜ್‌ , ನಾಗರಾಜ್‌ ದೇವಲ್ಕುಂದ , ವಿನಾಯಕ ,ಸನ್ಮಯ ಭಟ್ಟರೂ ಚೆನ್ನಾಗಿ ನಿರ್ವಹಿಸಿದರು . ಖಳನಾಯಕನ ಪಾತ್ರದಲ್ಲಿ ಮಾಗೋಡು ಅಣ್ಣಪ್ಪ ಗೌಡರದ್ದು ಉತ್ತಮ ಅಭಿವ್ಯಕ್ತಿ . ಹಾಸ್ಯ ಪಾತ್ರದಲ್ಲಿ ರಮೇಶ್‌ ಭಂಡಾರಿ ಮತ್ತು ರವೀಂದ್ರ ದೇವಾಡಿಗರು ಎದ್ದು ಕಂಡರು .

ಹಿಮ್ಮೇಳದಲ್ಲಿ ಪ್ರಥಮದಲ್ಲಿ ಭಾಗವತರಾದ ಪ್ರಸನ್ನ ಭಟ್ಟ್ ಬಾಳ್ಕಲ್‌ ಇಂಪಾದ ಭಾಗವತಿಕೆ ಮೂಲಕ ರಂಜಿಸಿದರು . ಅನಂತರ ರಾಘವೇಂದ್ರ ಆಚಾರ್ಯ ಜನ್ಸಾಲೆಯವರ ಭಾಗವತಿಕೆ ಉತ್ಕೃಷ್ಟವಾಗಿತ್ತು . ಜೀವ ಭಾವ ಸ್ಪಂದನ ಇದುವೆ ನರರ ಜೀವನ… ಮುಂತಾದ ಪದ್ಯಗಳು ಪ್ರಸಂಗದ ಹೈಲೈಟ್‌ ಆಗಿ ಮೂಡಿತು . ಪ್ರಸಂಗದ ಶೀರ್ಷಿಕೆ ಗೀತೆ ಹಾಗೂ ಕರುಣ ರಸಗಳಲ್ಲಿ ಜನ್ಸಾಲೆಯವರು ಬಳಸಿದ ರಾಗಗಳು ಮನ ಮೆಚ್ಚಿತು . ಸುನೀಲ್‌ ಭಂಡಾರಿ, ಶಶಿ ಆಚಾರ್ಯರ ಮದ್ದಲೆ ನಾದಕ್ಕೆ ಕಾಡೂರು ರವಿ ಆಚಾರ್ಯ ಹಾಗೂ ಸುಜನ್‌ ಹಾಲಾಡಿಯವರ ಚಂಡೆಯ ಝೆಂಕಾರ ಪ್ರಸಂಗವನ್ನು ಯಶಸ್ವಿಯಾಗಿಸಿತು .

ಗರ್ಭಗುಡಿ …ಗರ್ಭಗುಡಿ …ಪದ ಪಾತಾಳದಿ ಶಿರವದು ನಾಕದಿ | ಭೂಮಿಯೇ ದೇವನ ಗರ್ಭಗುಡಿ || , ಆಲಯ ಗರ್ಭದ ಗುಡಿಯೊಳು ಜೀವವೆ | ಇಲ್ಲದ ದೇವನು ನೆಲೆಸಿರುವ || , ಎಲ್ಲಿ ಇರುವನೊ ಕಂದ ಏನಗೈವನೋ | ಮುಂತಾದ ಪದ್ಯಗಳ ಸಾಹಿತ್ಯ ಚೆನ್ನಾಗಿತ್ತು.

Advertisement

ಬೇರೊಬ್ಬರ ತೇಜಸ್ಸನ್ನು ತನ್ನ ಗರ್ಭದಲ್ಲಿ ಧರಿಸುವುದು , ಬಾಡಿಗೆ ತಾಯ್ತನ ಮುಂತಾದವುಗಳು ಆಧುನಿಕ ಕಾಲದ ಸಂಶೋಧನೆಯಾಗಿದೆ . ಅದನ್ನು , ಕಾಲ್ಪನಿಕ ಪ್ರಸಂಗವಾದರೂ , ಯಕ್ಷಗಾನದ ಕಥೆಗೆ ಹೊಂದಿಸುವುದು ಸಮಂಜಸವಾಗಲಾರದು. ಈ ಕಾರಣಕ್ಕಾಗಿಯೇ ಚೂತಫ‌ಲದ ಮೂಲಕ ರಾಜ ಗುರುಗಳು ರಾಜ ರಾಣಿಯರ ತೇಜಸ್ಸು ನೀಡುವ ಸನ್ನಿವೇಶ ಅಳವಡಿಸುವ ಮೂಲಕ ಜಾಣ್ಮೆ ತೋರಿಸಲಾಗಿದೆ.ಪ್ರಸಂಗದಲ್ಲಿ ಕೆಲವೊಂದು ಅಸಹಜತೆಯಿದ್ದರೂ ಮುಂದಿನ ಪ್ರದರ್ಶನಗಳಲ್ಲಿ ಅದನ್ನು ಸರಿ ಪಡಿಸಬಹುದು .

ಎಂ .ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next