Advertisement

ಶುಭಾರಂಭ: ಹೊಸ ಪ್ರಯತ್ನ, ಪ್ರಯೋಗಕ್ಕೆ ಮೆಚ್ಚುಗೆ

12:30 AM Mar 01, 2019 | |

ಹೊಸ ಪ್ರಯೋಗಕ್ಕೆ ಮುಂದಾದವರ, ಹೊಸ ಬಗೆಯ ಕಥೆಯೊಂದಿಗೆ ಸಿನಿಮಾ ಮಾಡುತ್ತಿರುವವರ ಮುಖದಲ್ಲಿ ಮಂದಹಾಸ ಮೂಡಿದೆ. ಭರವಸೆ ಮತ್ತೂಮ್ಮೆ ಚಿಗುರೊಡೆದಿದೆ. ಅದಕ್ಕೆ ಕಾರಣ ಈ ವರ್ಷದ ಆರಂಭ. ನೀವು ಸೂಕ್ಷ್ಮವಾಗಿ ಗಮನಿಸಿದರೆ ಈ ಎರಡು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಒಂದಷ್ಟು ಹೊಸ ಪ್ರಯೋಗದ ಸಿನಿಮಾಗಳು ಸಿಗುತ್ತವೆ. ಆ ಸಿನಿಮಾಗಳಿಗೆ ಪ್ರೇಕ್ಷಕರಿಂದ ಮನ್ನಣೆ ಕೂಡಾ ಸಿಕ್ಕಿದೆ. ಈ ಮೂಲಕ ಹೊಸ ವರ್ಷದ ಆರಂಭದಲ್ಲೇ ಹೊಸ ಪ್ರಯೋಗ ಮಾಡುವವರಲ್ಲಿ ವಿಶ್ವಾಸ ಹೆಚ್ಚಿದೆ. ಯಾವುದೇ ಸ್ಟಾರ್‌ ಇಲ್ಲದೆಯೂ, ಒಳ್ಳೆಯ ಕಥೆ ಹಾಗೂ ಭಿನ್ನ ನಿರೂಪಣೆಯಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯಬಹುದೆಂಬ ನಂಬಿಕೆ ಮತ್ತೆ ಬಲವಾಗುತ್ತಿದೆ. ಹಾಗೆ ನೋಡಿದರೆ ಕಳೆದ ವರ್ಷ ಸಾಕಷ್ಟು ಪ್ರಯೋಗಾತ್ಮಕ, ಹೊಸ ಬಗೆಯ ಸಿನಿಮಾಗಳು ಬಂದರೂ ದೊಡ್ಡ ಮಟ್ಟದಲ್ಲಿ ಯಾವ ಸಿನಿಮಾಗಳು ಸದ್ದು ಮಾಡಲಿಲ್ಲ. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ -ಕಾಸರಗೋಡು’, “ಗುಳ್ಟು’ ಸೇರಿದಂತೆ ಬೆರಳೆಣಿಕೆಯ ಸಿನಿಮಾಗಳಷ್ಟೇ ಗಮನ ಸೆಳೆದವು. ಆದರೆ, ಈ ವರ್ಷಾರಂಭದಲ್ಲೇ ಪ್ರಯೋಗಗಳಿಗೆ ಪ್ರೇಕ್ಷಕ ಮನ್ನಣೆ ನೀಡುತ್ತಿದ್ದಾನೆ. 

Advertisement

ಈ ಎರಡು ತಿಂಗಳಲ್ಲಿ ತೆರೆಕಂಡ ಕೆಲವು ಸಿನಿಮಾಗಳ ಕಡೆ ಗಮನಹರಿಸಿದಾಗ ನಿಮಗೆ ಅದರ ಅರಿವಾಗುತ್ತದೆ. “ಬೀರ್‌ಬಲ್‌’, “ಅನುಕ್ತ’, “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’, “ಬೆಲ್‌ ಬಾಟಮ್‌’, “ಚಂಬಲ್‌’ … ಹೀಗೆ ಒಂದಷ್ಟು ಸಿನಿಮಾಗಳು ಗಾಂಧಿನರದ ಸಿದ್ಧಸೂತ್ರಗಳಿಂದ ಮುಕ್ತವಾಗಿ, ಯಾವುದೇ ಸ್ಟಾರ್‌ ನಟ ಇಲ್ಲದೆಯೂ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿವೆ. ಈ ತರಹದ ಪ್ರಯೋಗಗಳು ಗೆದ್ದಾಗ ಇನ್ನೊಂದಿಷ್ಟು ಮಂದಿಗೆ ಧೈರ್ಯ ಬರುತ್ತದೆ ಹಾಗೂ ಮತ್ತೂಂದಿಷ್ಟು ಹೊಸ ಜಾನರ್‌ಗಳತ್ತ ನಿರ್ದೇಶಕರು ಮುಖ ಮಾಡುತ್ತಾರೆ. ಒಂದೆರಡು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಳಿಗೆ ಮನ್ನಣೆ ಸಿಕ್ಕಿಲ್ಲ, ಸ್ಟಾರ್‌ಗಳ ಅಬ್ಬರದ ನಡುವೆ ಹೊಸ ಪ್ರಯೋಗಳು ಕಳೆದೇ ಹೋಗಿವೆ ಎಂಬ ಮಾತಿತ್ತು. ಅದು ಸತ್ಯ ಕೂಡಾ. ಹೊಸ ಜಾನರ್‌ನ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲೇ ಇಲ್ಲ. ಗೆದ್ದವರ ಪಟ್ಟಿಯಲ್ಲಿ ಸ್ಟಾರ್‌ಗಳೇ ಮೇಲುಗೈ ಸಾಧಿಸಿದ್ದರು. ಆದರೆ, ಈ ವರ್ಷದ ಮುನ್ಸೂಚನೆಯೇ ಬೇರೆ ತರಹ ಇದೆ. ಸ್ಟಾರ್‌ಗಳ ಜೊತೆಗೆ ಈ ತರಹದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲುವ ಸೂಚನೆ ನೀಡಿವೆ. ಇಲ್ಲಿ ಗೆಲುವನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ನಿರ್ಮಾಪಕ ಹಾಕಿದ ಹಣ ವಾಪಾಸ್‌ ಬರುವುದು ಒಂದು ಗೆಲುವಾದರೆ, ಒಳ್ಳೆಯ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿ, ಅದಕ್ಕೊಂದು ಮಾನ್ಯತೆ ಸಿಗುವುದು ಕೂಡಾ ಗೆಲುವೇ. 

ಇವತ್ತಿನ ಡಿಜಿಟಲ್‌ ಯುಗದಲ್ಲಿ ಬೇರೆ ಬೇರೆ ರೀತಿಯ ಮಾರುಕಟ್ಟೆಗಳು ತೆರೆದುಕೊಂಡಿವೆ. ಕಮರ್ಷಿಯಲ್‌ ಸಿನಿಮಾಗಳಿಗೆ ಮೆಚ್ಚುಗೆ ವ್ಯಕ್ತವಾದ ಕೂಡಲೇ ಹೇಗೆ ಬಿಝಿನೆಸ್‌ ಆಗುತ್ತೋ, ಇವತ್ತು ಒಳ್ಳೆಯ ಕಥಾಹಂದರ, ನಿರೂಪಣೆ ಹಾಗೂ ಹೊಸ ಬಗೆಯಿಂದ ಕೂಡಿದ ಸಿನಿಮಾಗಳನ್ನು ಬೇಡಿಕೆಯಿಂದ ಒಳ್ಳೆಯ ಮೊತ್ತಕ್ಕೆ ಮಾರಾಟವಾಗುವ ಹಲವು ವೇದಿಕೆಗಳಿವೆ. ಇದರೊಂದಿಗೆ ನಿರ್ಮಾಪಕರ, ನಿರ್ದೇಶಕರಲ್ಲೂ ಸಾರ್ಥಕ ಪ್ರಯೋಗ ಎಂಬ ಭಾವನೆ ಬರುತ್ತಿದೆ. 

ಇವತ್ತು ಸಿನಿಮಾ ಪ್ರೇಕ್ಷಕರ ಮನಸ್ಥಿತಿ ಬದಲಾಗುತ್ತಿದೆ. ಜಗತ್ತಿನ ಹಲವು ಭಾಷೆಯ ಸಿನಿಮಾಗಳನ್ನು ಸುಲಭವಾಗಿ ನೋಡುವ ಪ್ರೇಕ್ಷಕ, ನಮ್ಮ ಭಾಷೆಯಲ್ಲೂ ಈ ತರಹದ ಭಿನ್ನ ಪ್ರಯೋಗಗಳಾಗಬೇಕೆಂದು ಬಯಸುತ್ತಾನೆ. ಜೊತೆಗೆ ಭಿನ್ನ ಕಥಾಹಂದರದ ಸಿನಿಮಾ ಬಂದಿದೆ ಎಂದು ಗೊತ್ತಾದರೆ, ಮೊದಲು ಜೈಕಾರ ಹಾಕುತ್ತಾನೆ. ಇವತ್ತು ಕಮರ್ಷಿಯಲ್‌ ಸಿನಿಮಾಗಳನ್ನು ಇಷ್ಟಪಡುವ, ಜೈಕಾರ ಹಾಕುವ ವರ್ಗ ಎಷ್ಟು ದೊಡ್ಡದಿದೆಯೋ, ಹೊಸ ಜಾನರ್‌ನ ಸಿನಿಮಾಗಳನ್ನು ಮೆಚ್ಚಿಕೊಳ್ಳುವ ವರ್ಗವೂ ಅಷ್ಟೇ ದೊಡ್ಡದಿದೆ. ಪ್ರತಿಯೊಂದು ಸಿನಿಮಾದ ಗೆಲುವು ಇನ್ನೊಂದಿಷ್ಟು ಮಂದಿಯನ್ನು ಪ್ರೇರೇಪಿಸುತ್ತದೆ. ಕಾಲಾನುಕಾಲದಿಂದಲೂ ನಡೆಯುತ್ತಲೇ ಬಂದಿದೆ. “ಮುಂಗಾರು ಮಳೆ’, “ದುನಿಯಾ’ ಆ ನಂತರ ಬಂದ “ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’ ಸೇರಿದಂತೆ ಕೆಲವು ಸಿನಿಮಾಗಳ ಗೆಲುವುಗಳು ಇನ್ನೊಂದಿಷ್ಟು ಮಂದಿಗೆ ಪ್ರೇರಣೆಯಾಗಿದ್ದು ಸುಳ್ಳಲ್ಲ. ಈಗ ಮತ್ತೂಮ್ಮೆ ಹೊಸ ಜಾನರ್‌ನ ಸಿನಿಮಾಗಳು ಗೆಲುವಿನತ್ತ ಮುಖ ಮಾಡಿದ್ದು, ಇನ್ನೊಂದಿಷ್ಟು ಹೊಸ ಪ್ರಯೋಗಗಳಿಗೆ ಪ್ರೇರಣೆಯಾಗುವುದು ಸುಳ್ಳಲ್ಲ. 

ಈ ವರ್ಷದಲ್ಲಿ ಇನ್ನೊಂದಿಷ್ಟು ಹೊಸ ಜಾನರ್‌ ಎಂದು ಗುರುತಿಸಿಕೊಂಡಿರುವ ಸಿನಿಮಾಗಳು ಬಿಡುಗಡೆಯಾಗಲಿವೆ. “ಭಿನ್ನ’, “ಕಥಾ ಸಂಗಮ’, “ಮಿಸ್ಸಿಂಗ್‌ ಬಾಯ್‌’, “ತೋತಾಪುರಿ’, “ಪಾಪ್‌ಕಾರ್ನ್ ಮಂಕಿ ಟೈಗರ್‌’, “ಗ್ರಾಮಾಯಣ’, “ಅಮ್ಮನ ಮನೆ’, “ತ್ರಯಂಬಕಂ’, “ಭೀಮಸೇನಾ ನಳಮಹಾರಾಜ’, “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’,  “ಮಹಿರ’, “ರಾಮನ ಅವತಾರ’, “ಜುಗಾರಿ ಕ್ರಾಸ್‌’,  “ಅವನೇ ಶ್ರೀಮನ್ನಾರಾಯಣ’, “ಚಾರ್ಲಿ 999′ … ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಸಿನಿಮಾಗಳನ್ನೆಲ್ಲಾ ಪ್ರೇಕ್ಷಕ ಕೈ ಹಿಡಿದು ಬಿಟ್ಟರೆ ಈ ಬಾರಿ ಹೊಸ ಜಾನರ್‌ ಸಿನಿಮಾಗಳೇ ಮೇಲುಗೈ ಸಾಧಿಸಬಹುದು. 

Advertisement

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next