Advertisement

ಹೊಸ ಚರ್ಚೆ: “ಋತು ವಿರಾಮ’ಅವಳಿಗೇ ಇರಲಿ ಆಯ್ಕೆ…

12:13 PM Aug 30, 2017 | |

ಅವಳು ಅವಳಾಗಿರುವುದೇ ಈ ಋತುಚಕ್ರದಿಂದ. ಋತುಸ್ರಾವ ಅನಾರೋಗ್ಯವಲ್ಲ. ಅದು ಹೆಣ್ಣಿನ ಆರೋಗ್ಯದ ಸೂಚ್ಯಂಕ. ಇಂದು ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಸಾಕಷ್ಟು ಬದಲಾಗಿದೆ. ಕೇವಲ ಗೃಹ ಕೃತ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಅವಳು ಇಂದು ಸಮಾಜಮುಖೀಯಾಗಿಳೆ. ಅವಳು ಕೂಡ ಅವನಂತೆಯೇ ಸರ್ವರಂಗಗಳಲ್ಲೂ ಸಕ್ರಿಯಳಾಗಿ, ಶ್ರದ್ಧೆಯಿಂದ ದುಡಿಯುತ್ತಿದ್ದಾಳೆ. ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಿದ್ದಾಳೆ. ಹೀಗಿರುವಾಗ ಋತುಚಕ್ರದ ಕಾರಣದಲ್ಲಿ ರಜೆ ಕೊಟ್ಟು, ಆಕೆಯನ್ನು ಬದಿಗಿಡುವ ಪರಿ ಎಷ್ಟರಮಟ್ಟಿಗೆ ಸರಿ?

Advertisement

ಇನ್ನು ಆ ದಿನಗಳಲ್ಲಿ ಅವಳಲ್ಲಾಗುವ ಮಾನಸಿಕ, ದೈಹಿಕ ವ್ಯತ್ಯಯಗಳನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದರೆ ರಜೆ ಕೊಡುವ ನಿರ್ಧಾರ ಉತ್ತಮವೇ. ಆದರೆ ಆ ರಜಾದಿನದ ಅವಳ ಕೆಲಸವನ್ನು ಮಾಡುವವರು ಯಾರು? ಅವಳೇ ಮರುದಿನ ಬಂದು ಮಾಡಬೇಕು ತಾನೆ? ಆಗ ಅವಳಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಋತುಚಕ್ರದ ಸಾರ್ವತ್ರಿಕ ರಜೆ ಅವಳಿಗೆ ಸಜೆಯಾಗಬಹುದು.

ಹಾಗಾಗಿ ರಜೆ ತೆಗೆದುಕೊಳ್ಳುವುದು ಅವಳ ಆಯ್ಕೆಯಾಗಿರಬೇಕು ಎಂಬುದು ನನ್ನ ಅಭಿಪ್ರಾಯ. ಇದರೊಂದಿಗೆ ಅವಳು ಕೆಲಸ ಮಾಡುವ ಜಾಗದಲ್ಲಿ ಅವಳಿಗೆ ಅನುಕೂಲಕರ ವಾತಾವರಣ ಕಲ್ಪಿಸಿ ಕೊಡಬೇಕು. ಸಾಮಾನ್ಯವಾಗಿ 13ನೇ ವಯಸ್ಸಿನಲ್ಲೇ ಪ್ರಾರಂಭವಾಗುವ ಈ ಋತುಚಕ್ರದ ಪ್ರಕ್ರಿಯೆಯೊಂದಿಗೇ ಅವಳು ತನ್ನ ವಿದ್ಯಾಭ್ಯಾಸ, ಪರೀಕ್ಷೆಗಳಂಥ ಹಲವಾರು ಒತ್ತಡಗಳನ್ನು ಎದುರಿಸಿಯೇ ಉದ್ಯೋಗ ಗಳಿಸಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದಾಳೆ. ಋತುಚಕ್ರದ ವೇದನೆಯ ನಡುವೆಯೂ ಸಮರ್ಥವಾಗಿ ಕೆಲಸ ನಿಭಾಯಿಸಬಲ್ಲಳು ಎಂಬುದನ್ನಾಕೆ ಸಾಧಿಸಿ ತೊರಿಸಿದ್ದಾಳೆ. ಸರ್ವ ಸಂದರ್ಭಗಳಲ್ಲೂ ಮಾನಸಿಕ-ದೈಹಿಕ ದೃಢತೆ ಹೊಂದಿದವಳೇ “ಅವಳು’. ರಜೆಯ ಆಯ್ಕೆ ಅವಳದ್ದೇ ಆಗಿರಲಿ.     
 
ಕಮಲಾಂಬಿಕಾ ಎಂ.ಪುರಾಣಿಕ್‌  

Advertisement

Udayavani is now on Telegram. Click here to join our channel and stay updated with the latest news.

Next