Advertisement

ನೆಲೋಗಿ ಟು ನವದೆಹಲಿ!

01:15 PM Jul 28, 2017 | Team Udayavani |

ಕಲಬುರಗಿ: ಹುಟ್ಟೂರು ಜೇವರ್ಗಿ ತಾಲೂಕಿನ ಸಣ್ಣ ಗ್ರಾಮ ನೆಲೋಗಿಯಿಂದ ನವದೆಹಲಿಯ ಸಂಸತ್‌ ಭವನವರೆಗೂ ಧರ್ಮಸಿಂಗ್‌ ಅವರ ದಣಿವರಿಯದ ಪ್ರಯಾಣ ರಾಜಕೀಯ ಬದುಕಿನ ಮೈಲಿಗಲ್ಲು ಎಂದೇ ಹೇಳಬಹುದು.

Advertisement

ಧರ್ಮಸಿಂಗ್‌ ಅವರ ತಾತ ಗಂಗಾರಾಮ್‌ ಸಿಂಗ್‌ ಅವರು ಮೂಲತಃ ಉತ್ತರ ಪ್ರದೇಶದಿಂದ ವಲಸೆ ಬಂದವರು. ಅಂದಿನ ಸುರಪುರ ಆಸ್ಥಾನ ಸೇರಿ ಕಾರ್ಯ ನಿಭಾಯಿಸಿದ್ದೇ ಅವರ ಕುಟುಂಬ ಕರ್ನಾಟಕದಲ್ಲಿ ಶಾಶ್ವತವಾಗಿ ನೆಲೆಸಲು ಸಾಧ್ಯವಾಯಿತು. ಧರ್ಮಸಿಂಗ್‌ ಅವರು ಭೀಮಾನದಿ
ತಟದ ನೇಲೊಗಿ ಗ್ರಾಮದಲ್ಲಿ 1936ರ ಡಿಸೆಂಬರ 25ರಂದು ಪದ್ಮಾವತಿ ಬಾಯಿ ಹಾಗೂ ನಾರಾಯಣ ಸಿಂಗ್‌ರ ಕೊನೆಯ ಮಗನಾಗಿ ಜನಿಸಿದರು. ಐದು ವರ್ಷದ ಮಗುವಿರುವಾಗಲೇ ತಾಯಿ ನಿಧನಹೊಂದಿದರು.

ನೆಲೋಗಿಯಲ್ಲಿ ಪ್ರಾಥಮಿಕ; ಕಲಬುರಗಿಯ ಚಕ್ಕಾರ ಕಟ್ಟೆ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಸಿಫ್‌ ಗಂಜ್‌ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದು ಮುಲ್ಕಿ ಪರೀಕ್ಷೆ ಪಾಸ್‌ ಮಾಡಿದರು. ಅನಂತರ ಸರಕಾರಿ ಎಚ್‌.ಪಿ.ಎಚ್‌.ಎಸ್‌.ನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಬಳಿಕ ಕಲಬುರಗಿಯ ಸರಕಾರಿ ಕಾಲೇಜಿನಲ್ಲಿ ಇಂಟರ್‌ ಮಿಡಿಯಟ್‌ ಪರೀಕ್ಷೆ ತೇರ್ಗಡೆಯಾಗಿದ್ದು, ಕುಟುಂಬದವರೆಲ್ಲರ ಗಮನ ಸೆಳೆಯಿತು. ಸಹೋದರರು, ಹಿರಿಯರು ಅವರನ್ನು ಉನ್ನತ ವ್ಯಾಸಂಗಕ್ಕಾಗಿ ಹೈದ್ರಾಬಾದ್‌ ಗೆ ಕಳುಹಿಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪಡೆದ ಶಿಕ್ಷಣ ಅವರ ಬದುಕಿನ ಚಿತ್ರಣವನ್ನೇ ಬದಲಿಸಿತು. 

ಕಲಬುರಗಿ ನಗರದಲ್ಲಿ ಹಿಂದಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಆರಂಭಿಸಿದ ಧರ್ಮಸಿಂಗ್‌ ಕೇವಲ ಮೂರು ವರ್ಷದಲ್ಲಿಯೇ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ ವಕೀಲ ವೃತ್ತಿಯೊಂದಿಗೆ ಅವರ ಜನತಾ ಸೇವೆಯೂ ಆರಂಭಗೊಂಡಿತು. ಈ ಹಂತದಲ್ಲೇ ಗುಲಬರ್ಗಾ ನಗರಸಭೆಗೆ
ಚುನಾವಣೆ ಎದುರಾಯಿತು. ನಿರೀಕ್ಷೆಯಂತೆ ಪ್ರಥಮ ಯತ್ನದಲ್ಲಿಯೇ ಗೆಲುವು ಸಾಧಿಸಿದರು. ಇದೇ ರಾಜಕೀಯ ಜೀವನಕ್ಕೆ ಮೆಟ್ಟಿಲಾಯಿತು.

ಕಾಂಗ್ರೆಸ್‌ ಸೇರ್ಪಡೆ: ದೇವರಾಜ ಅರಸು ಮತ್ತು ಇಂದಿರಾಗಾಂ ಧಿ ಸಂಪರ್ಕಕ್ಕೆ ಬಂದು ಕಾಂಗ್ರೆಸ್‌ ಸೇರಿದರು. ಇದು ಅವರ ರಾಜಕೀಯ ಬದುಕಿಗೆ ಹೊಸ ತಿರುವು ನೀಡಿತು. 1972ರ ವಿಧಾನಸಭೆ ಚುನಾವಣೆಯಲ್ಲಿ ಜೇವರ್ಗಿ ಕ್ಷೇತ್ರದ ಸ್ವತಂತ್ರ್ಯ ಪಕ್ಷದ ಅಭ್ಯರ್ಥಿಯಾಗಿದ್ದ ಹೈದ್ರಾಬಾದ-ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಾದೇವಪ್ಪಾ ರಾಂಪುರೆ ಅವರನ್ನು ಮಣಿಸಿ ಧರ್ಮಸಿಂಗ್‌ ಇತಿಹಾಸ ನಿರ್ಮಿಸಿದರು. ಅತ್ಯಂತ ಕಿರಿಯ ವಯಸ್ಸಿನ ಶಾಸಕ ಎಂಬ ಕೀರ್ತಿಗೂ ಭಾಜನರಾದರು. ಮುಂದೆ 2004ರವರೆಗೆ ಸತತವಾಗಿ 32 ವರ್ಷಗಳಲ್ಲಿ 8 ಬಾರಿ ಇದೇ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. ಈ ನಡುವೆ 1973ರಲ್ಲಿ ಹಿಂದುಳಿದ ಆಯೋಗದ ಸದಸ್ಯ ಹಾಗೂ 1976ರಲ್ಲಿ ಗುಲಬರ್ಗಾ ನಗರಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Advertisement

ಗುಂಡೂರಾವ್‌ ಅವರು ಮುಖ್ಯಮಂತ್ರಿ ಆಗಿದ್ದಾಗ ವಸತಿ ಮತ್ತು ನಗರಾಭಿವೃದ್ಧಿ ಖಾತೆ ಸಚಿವರಾಗಿ, ಎಸ್‌.ಬಂಗಾರಪ್ಪ ಸಂಪುಟದಲ್ಲಿ ಗೃಹ ಮತ್ತು ಅಬಕಾರಿ, ಎಂ. ವೀರಪ್ಪ ಮೊಯ್ಲಿ ಸರಕಾರದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ; ಎಸ್‌. ಎಂ. ಕೃಷ್ಣ ಅವರ ಸಂಪುಟದಲ್ಲಿ ಲೋಕೋಪಯೋಗಿ,
ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ಬಳಿಕ ರಾಜ್ಯದ ಮುಖ್ಯಮಂತ್ರಿಯೂ ಆದರು. 2009ರಲ್ಲಿ ಸಂಸದರಾಗಿ ಲೋಕಸಭೆಯನ್ನೂ ಪ್ರವೇಶಿಸಿದ್ದರು.

ಜಿಡಗಾ ಮಠದ ಶಿಷ್ಯ: ಧರ್ಮಸಿಂಗ್‌ 1980ರಲ್ಲಿ ಲೋಕಸಭಾ ಚುನಾವಣೆಗೆ ಸ್ಪ ರ್ಧಿಸಿ ಪ್ರಚಾರಕ್ಕೆಂದು ಗುಲಬರ್ಗಾ ನಗರದ ಪಕ್ಕದಲ್ಲಿರುವ ಉದನೂರು ಗ್ರಾಮಕ್ಕೆ ತೆರಳಿದ್ದರು. ಅಲ್ಲಿನ ಗುರು ಯಲ್ಲಾಲಿಂಗ ರಾಜ ಮಠಕ್ಕೆ ಭೇಟಿ ಕೊಟ್ಟಾಗ ಷಡಕ್ಷರಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು
“ನೀನು ಆರಿಸಿ ಬರುತ್ತಿ ಹೋಗು’ ಎಂದು ಹರಿಸಿದ್ದರು. ಅವರ ಮಾತು ಸತ್ಯವಾಯಿತು. ಅಂದಿನಿಂದ ಧರ್ಮಸಿಂಗ್‌ ಜಿಡಗಾ ಶ್ರೀಮಠದ ಪರಮ ಭಕ್ತರಾದರು. ತಮ್ಮ ಪಾಲಿಗೆ ಮಕ್ಕಾ, ಮದಿನ, ಕಾಶಿ, ಮಥುರಾ, ಗೋಕರ್ಣ, ಎಲ್ಲವೂ ಶ್ರೀ ಜಿಡಗಾ ಕೊಟನೂರ ಮಠವೇ ಆಗಿದೆ ಎಂದು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬಹಿರಂಗವಾಗಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next