Advertisement

ಹೊಸ ಚರ್ಚೆ: “ಋತು ವಿರಾಮ’: “ಜಯಂತಿ’ಗಳಿಗೆ ರಜೆ ಇರೋವಾಗ…

09:14 AM Aug 23, 2017 | Team Udayavani |

ಗಣೇಶನ ಹಬ್ಬಕ್ಕೆ ನಾಲ್ಕು ದಿನವಿದೆ. ತಲೆ ತುರಿಸಲೂ ಪುರುಸೊತ್ತಿಲ್ಲದಷ್ಟು ಸ್ಮಿತಾ ಬ್ಯುಸಿ. ಒಳಗೇ ಆತಂಕ. ಮುಟ್ಟಿನ ಸಮಯ ಸಮೀಪಿಸುತ್ತಿದೆ. ಎರಡು ದಿನಗಳಿಂದ ಹೊಟ್ಟೆ, ಸೊಂಟ, ಬೆನ್ನು ಎಲ್ಲಾ ನೋವು. ತಲೆ ಸಿಡಿತ ಮಾತೆತ್ತಿದರೆ ಕೋಪ, ಅಳು. ಹಾಗಂತ ಸುಮ್ಮನೆ ಮಲಗುವಂತಿಲ್ಲ. ಸರಿಯಾಗಿ ಹತ್ತು ಗಂಟೆಗೆ ಸ್ಮಿತಾ ಕಚೇರಿಯಲ್ಲಿರಬೇಕು. ಅಲ್ಲಿ ಅವಳ ಸುಸ್ತು- ಸಂಕಟಕ್ಕೆ ಕಾಸಿನ ಬೆಲೆಯಿಲ್ಲ. ಋತುಚಕ್ರದ ಏರುಪೇರುಗಳೂ ಶುರುವಾಗಿವೆ. ಒಂದೇಸಮನೆ ಆಗುವ ರಕ್ತಸ್ರಾವದಿಂದ ಗಂಟೆಗೊಮ್ಮೆ ಬಾತ್‌ರೂಮ್‌ಗೆ ಹೋಗುವಾಗ ಮುಜುಗರ ಆಗುತ್ತದೆ. ವಿಧಿಯಿಲ್ಲ.

Advertisement

ಹಬ್ಬದ ದಿನವೇ ಬ್ಲೀಡಿಂಗ್‌ ಶುರು. ಮನೆಯವರ ಕೆಂಗಣ್ಣು. “ಮುಟ್ಟನ್ನು ಮುಂದಕ್ಕೆ ಹಾಕುವ ಮಾತ್ರೆಯನ್ನಾದರೂ ತೆಗೆದುಕೊಳ್ಬಹುದಿತ್ತು’  ಎನ್ನುವ ಯಜಮಾನರ ಸಿಟ್ಟಿನ ನುಡಿ. ಸುಮ್ಮನೆ ಹೊಟ್ಟೆ ಹಿಡಿದು ಮಲಗುವಾ ಎಂದರೆ ರಜೆ ಇಲ್ಲ. ಹೊರ ದೇಶಗಳಲ್ಲಿ ಋತುಸ್ರಾವದ ದಿನಗಳಲ್ಲಿ ರಜೆ ಕೊಡುತ್ತಾರೆ. ನಮ್ಮಲ್ಲಿ ಒಂದೆರಡು ಕಂಪನಿಗಳಲ್ಲಿ ಈಗೀಗ ರಜೆ ಕೊಡುತ್ತಿದ್ದಾರೆ. ಆ ಜಯಂತಿ, ಈ ಜಯಂತಿ ಎಂದು ರಜೆ ಕೊಡುವ ಸರ್ಕಾರಕ್ಕೆ ಯಾಕೆ ನಮ್ಮ ನೋವು ತಿಳಿಯುತ್ತಿಲ್ಲ ಎನ್ನುವುದು ವಿಷಾದದ ಸಂಗತಿ.

ಒಳಗೂ ಹೊರಗೂ ದುಡಿಯುವ ಹೆಣ್ಣಿಗೆ ತನ್ನ ದೈಹಿಕ ಮಾನಸಿಕ ಸಮತೋಲನವನ್ನು ಕಾಪಾಡಿಕೊಂಡು ದುಡಿಯಲು ರಜೆ ಅತ್ಯಗತ್ಯ. ಘನ ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಲೇಬೇಕು. ಆ ಮೂರು ದಿನಗಳ ವಿಶ್ರಾಂತಿಯು, ಮುಂದೆ ಮಾಡುವ ಕೆಲಸಗಳಿಗೆ ಹುರುಪು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಆ ದಿನ ಬಂದೀತೆಂದು ಭರವಸೆಯಲ್ಲಿ ಕಾಯೋಣ.

ಸಿರಿಮೂರ್ತಿ ಕಾಸರವಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next