Advertisement

ನೂತನ ಡಿಸಿ ಕಚೇರಿ ಸಂಕೀರ್ಣ 2019 ಡಿಸೆಂಬರ್‌ಗೆ ಸಿದ್ಧ : ಖಾದರ್‌

12:18 PM Jul 28, 2018 | |

ಮಹಾನಗರ : ಪಡೀಲ್‌ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿ 2019ರ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ರಾಜ್ಯ ವಸತಿ ಹಾಗೂ ನಗರಾಭಿವೃದ್ಧಿ ಖಾತೆ ಸಚಿವ ಯು.ಟಿ. ಖಾದರ್‌ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಟ್ಟಡ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 41 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು ಈಗಾಗಲೇ 10 ಕೋ.ರೂ. ಮೊತ್ತದ ಕಾಮಗಾರಿ ನಡೆದಿವೆ. ಒಟ್ಟು 5.89 ಎಕ್ರೆ ಪ್ರದೇಶದಲ್ಲಿ 3,25,000 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ನೆಲ ಅಂತಸ್ತು ಹಾಗೂ 2 ಮೇಲಂತಸ್ತುಗಳನ್ನು ಹೊಂದಿದ್ದು, ಒಟ್ಟ 234 ವಾಹನಗಳ ನಿಲುಗಡೆ ಸ್ಥಳಾವಕಾಶವಿದೆ. ಕಟ್ಟಡದಲ್ಲಿ ಡಿಸಿ ಕಚೇರಿ, ಕಂದಾಯ, ಆರೋಗ್ಯ, ನೀರಾವರಿ, ಕಾರ್ಮಿಕ ಇಲಾಖೆಯ ಕಚೇರಿ ಸಹಿತ ವಿವಿಧ ಇಲಾಖೆಯ ಕಚೇರಿಗಳು ಕಾರ್ಯಾಚರಿಸಲಿದೆ. ಕಟ್ಟಡಕ್ಕೆ ಆರೋಗ್ಯ ಇಲಾಖೆ 7 ಕೋ.ರೂ. ನೀರವಾರಿ ಇಲಾಖೆ 1 ಕೋ.ರೂ., ಕಾರ್ಮಿಕ ಇಲಾಖೆ 3 ಕೋ. ರೂ. ಮೊತ್ತ ನೀಡಿದೆ ಎಂದರು.

Advertisement

ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಸಿದ್ದರಾಮಯ ಸರಕಾರದಲ್ಲಿ ಮಂಜೂರಾತಿ ನೀಡಿ ಅನುದಾನ ಬಿಡುಗಡೆಗೊಳಿಸಿದ್ದು, ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಮಳೆಗಾಲದ ಅವಧಿ ಬಿಟ್ಟು ಒಟ್ಟು 18 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನಿಗದಿ ಪಡಿಸಲಾಗಿದೆ ಎಂದರು. ದಟ್ಟನೆ ಕಡಿಮೆಯಾಗಲಿದೆ ಪಡೀಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣದಿಂದ ಹಂಪನಕಟ್ಟೆ ಪ್ರದೇಶದಲ್ಲಿ ವಾಹನ, ಜನ ದಟ್ಟನೆ ಕಡಿಮೆಯಾಗಲಿದೆ. ಇದಲ್ಲದೆ ಜಿಲ್ಲೆಯ ಎಲ್ಲ ಭಾಗಗಳಿಂದ ಸಂಪರ್ಕಕ್ಕೆ ಸುಲಭ ಸಾಧ್ಯವಾಗಲಿದೆ. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಕ್ಕೆ ಕಲ್ಪಿಸುವ ನಿಟ್ಟಿನಲ್ಲಿ ಬಜಾಲ್‌  -ಜಪ್ಪಿನಮೊಗರು ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರು ವಿವರಿಸಿದರು. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಜೆ.ಆರ್‌. ಲೋಬೋ, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು ಉಪಸ್ಥಿತರಿದ್ದರು.

2ನೇ ಹಂತದ ಅನುದಾನಕ್ಕೆ ಶೀಘ್ರ ಮನವಿ 
ಕಚೇರಿಯ ಪೀಠೊಪಕರಣಗಳು, ಒಳಾಂಗಣ ಸಹಿತ ಪೂರಕ ಕಾಮಗಾರಿಗೆ 2ನೇ ಹಂತದ ಅನುದಾನಕ್ಕೆ ಸರಕಾರಕ್ಕೆ ಶೀಘ್ರದಲ್ಲೇ ಕೋರಿಕೆ ಸಲ್ಲಿಸಲಾಗುವುದು. ಕಾಮಗಾರಿ ಹಾಗೂ ಇತರ ವಿಚಾರಗಳ ಬಗ್ಗೆ ಇದರಲ್ಲಿ ಕಚೇರಿಗಳನ್ನು ಹೊಂದುವ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗುವುದು ಎಂದು ಖಾದರ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next