ಕೊಪ್ಪಳ: ತುಂಗಭದ್ರಾ ಡ್ಯಾಂನ ಹೂಳಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಸರ್ಕಾರದ ಮಟ್ಟದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದ್ದು, ಕರ್ನಾಟಕ ನೀರಾವರಿ ನಿಗಮವು ಗಂಗಾವತಿ ತಾಲೂಕಿನ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕೈಗೊಳ್ಳಲು 14 ಕೋಟಿಯಲ್ಲಿ ಟೆಂಡರ್ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ.
ತುಂಗಭದ್ರಾ ಜಲಾಶಯ ನಿರ್ಮಾಣ ಬಳಿಕ ಇಲ್ಲಿವರೆಗೂ ಡ್ಯಾಂನಲ್ಲಿನ ಹೂಳು ತೆಗೆಯಿಸುವ ಕೆಲಸ ಮಾಡಿಲ್ಲ. ಇದರಿಂದ ಪ್ರತಿ ವರ್ಷ ಅರ್ಧ ಟಿಎಂಸಿ ಅಡಿಯಷ್ಟು ಹೂಳೆ ಜಲಾಶಯ ಸೇರುತ್ತಿದೆ ಎಂದು ತಜ್ಞರ ವರದಿಯೇ ಹೇಳುತ್ತಿದೆ. 1953ರಲ್ಲಿ ಉದ್ಘಾಟನೆಗೊಂಡ ತುಂಗಭದ್ರಾ ಡ್ಯಾಂ ಏಳು ದಶಕ ಪೂರೈಸುತ್ತ ಬಂದಿದೆ. ಆರಂಭದಲ್ಲಿ 133 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಡ್ಯಾಂ ಪ್ರಸ್ತುತ ವರ್ಷಕ್ಕೆ 100 ಟಿಎಂಸಿ ಅಡಿ ಸಾಮರ್ಥ್ಯಕ್ಕೆ ಬಂದು ತಲುಪಿದೆ. ಡ್ಯಾಂಗೆ ಹರಿದು ಬರುವ ನೀರು ವ್ಯರ್ಥವಾಗಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂನಲ್ಲಿನ ನೀರು ಸಂಗ್ರಹಣಾ ಸಾಮರ್ಥ್ಯದ ಕೊರತೆ ನೀಗಿಸಲು, ಹೂಳೆತ್ತುವ ಬದಲು ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣದ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಅದಕ್ಕೆ ಈಗ ಮತ್ತೆ ಜೀವ ಬಂದಿದೆ.
ಈ ಭಾಗದ ಶಾಸಕ, ಸಂಸದರು ಡ್ಯಾಂನಲ್ಲಿನ ನೀರು ಸಂಗ್ರಹಣಾ ಸಾಮರ್ಥ್ಯದ ಕೊರತೆ ನೀಗಿಸಿ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಒತ್ತಡ ತಂದಿದ್ದರಿಂದ ಜು.6ರಂದು ನೀರಾವರಿ ನಿಗಮದಲ್ಲಿ ಕನ್ಸೆಲೆನ್ಸಿ ಡಿಪಿಆರ್ ಕೈಗೊಳ್ಳಲು ನಿಗಮದ 56ನೇ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ಮಂಡಿಸಿತ್ತು. ಸಮಿತಿ ಅದಕ್ಕೆ ಸಮ್ಮಿತಿಸಿದ್ದು, ಜೂ. 9ರಂದು ನಿಗಮದ 88ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ, ನವಲಿ ಬಳಿ ಸಮತೋಲನ ಜಲಾಶಯದ ಡಿಪಿಆರ್‌ಗೆ ನಿಗಮ ಒಪ್ಪಿಗೆ ಸೂಚಿಸಿದೆ. 14 ಕೋಟಿ ರೂ.ಯಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿ, ನಿಗಮದ ಎಂಡಿ ಮಲ್ಲಿಕಾರ್ಜುನ ಗುಂಗೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರದ ಮಟ್ಟದಲ್ಲೂ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುವುದೊಂದೇ ಬಾಕಿ ಇದೆ.
44 ಟಿಎಂಸಿಗೆ ಡಿಪಿಆರ್ ಸಿದ್ಧತೆ: ತುಂಗಭದ್ರಾ ಡ್ಯಾಂನಲ್ಲಿ 33 ಟಿಎಂಸಿ ಅಡಿ ಹೂಳು ತುಂಬಿದೆ. ಆದರೆ ಭವಿಷ್ಯದ ದೃಷ್ಟಿಯಿಂದ ನವಲಿ ಬಳಿ 44 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ದೂರದೃಷ್ಟಿಯನ್ನಿಟ್ಟು ಡಿಪಿಆರ್ ಸಿದ್ಧತೆಗೆ ಕರ್ನಾಟಕ ನೀರಾವರಿ ನಿಗಮ ಮುಂದಾಗಿದೆ. ಡಿಪಿಆರ್‌ಗೆ 6 ತಿಂಗಳು ಕಾಲವಕಾಶ ಬೇಕಿದ್ದು, ಕನ್ಸೆಲೆrನ್ಸಿ ಕೈಗೊಳ್ಳುವ ಯೋಜನೆಯಲ್ಲಿ ಡ್ಯಾಂ ನಿರ್ಮಾಣ, ಕಾಲುವೆ ಸೇರಿದಂತೆ ವಿಸ್ತೃತ ವರದಿ ತಯಾರಿಸಿ, ನಿಗಮದ ಮೂಲಕ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ತುಂಗಭದ್ರಾ ಡ್ಯಾಂ ಮೂರೂ ರಾಜ್ಯಗಳ ವ್ಯಾಪ್ತಿಯಲ್ಲಿದ್ದರಿಂದ ಡಿಪಿಆರ್‌ಗೆ ಆಂಧ್ರಪ್ರದೇಶ, ತೆಲಂಗಾಣ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಹೊಸ ಜಲಾಶಯದ ಪ್ರಕ್ರಿಯೆಗೆ ಜೀವ ಬರಲಿದೆ.
ಡ್ಯಾಂನಲ್ಲಿ 33 ಟಿಎಂಸಿ ಅಡಿ ಹೂಳು ತುಂಬಿದೆ. ಪ್ರತಿ ವರ್ಷ 0.5ನಷ್ಟು ಹೂಳು ಡ್ಯಾಂ ಸೇರುತ್ತಿದೆ. ಹೂಳಿನ ಪರ್ಯಾಯವಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ 14 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧತೆಗೆ ಬೋರ್ಡ್ ನಿಂದ ಒಪ್ಪಿಗೆ ನೀಡಲಾಗಿದ್ದು, ಸರ್ಕಾರಕ್ಕೂ ಪತ್ರ ಬರೆದು ಸಮ್ಮತಿಗೆ ಕೇಳಿಕೊಳ್ಳಲಾಗಿದೆ. ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಸಲಿದ್ದು, ವರದಿ ಬಂದ ಬಳಿಕ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ.
•ಮಲ್ಲಿಕಾರ್ಜುನ ಗುಂಗೆ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬೆಂಗಳೂರು.
ಡ್ಯಾಂ ಹೂಳಿನ ಪರ್ಯಾಯವಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ನಾವು ಸರ್ಕಾರದ ಮಟ್ಟದಲ್ಲಿ ಒತ್ತಾಯಿಸಿದ್ದೇವೆ. ಈಗಾಗಲೇ ನಿಗಮದಿಂದ ಸರ್ಕಾರಕ್ಕೆ ಪತ್ರವನ್ನೂ ಬರೆಯಲಾಗಿದೆ. ನವಲಿ ಜಲಾಶಯ ಮಾಡುವುದು ನಮ್ಮ ಮೊದಲ ಉದ್ದೇಶವಾಗಿದೆ.•ಬಸವರಾಜ ದಢೇಸುಗೂರುಕನಕಗಿರಿ ಶಾಸಕ
ಎಡದಂಡೆ ಕಾಲುವೆ ಪಾಲಿನ ನೀರನ್ನು ಮಳೆಗಾಲ ಪ್ರವಾಹ ಸಂದರ್ಭದಲ್ಲಿ ಪರ್ಯಾಯ ಡ್ಯಾಂ ಅಥವಾ ಚೆಕ್ ಡ್ಯಾಂ ನಿರ್ಮಿಸಿ ನೀರನ್ನು ಸಂಗ್ರಹಿಸಿಕೊಳ್ಳಲು ಆಂಧ್ರಪ್ರದೇಶ-ತೆಲಂಗಾಣ ರಾಜ್ಯದ ಒಪ್ಪಿಗೆ ಬೇಕಿಲ್ಲ. ಈ ಕುರಿತು ಸಿಎಂಗೆ ಮನವರಿಕೆ ಮಾಡಿಕೊಡಲು ಎಡದಂಡೆ ಕಾಲುವೆ ವ್ಯಾಪ್ತಿಯ ಸಂಸದರು, ಶಾಸಕರು, ಚುನಾಯಿತ ಪ್ರತಿನಿಧಿಗಳು ಮತ್ತು ನೀರಾವರಿ ತಜ್ಞರ ನಿಯೋಗವನ್ನು ಕರೆದುಕೊಂಡು ಹೋಗಲು ನಿರ್ಧರಿಸಲಾಗಿದೆ.•ತಿಪ್ಪೇರುದ್ರಸ್ವಾಮಿ,ರೈತ ಹೋರಾಟಗಾರರು
•ದತ್ತು ಕಮ್ಮಾರ